- ಹೊಸ ಐಟಿ ಕಾಯ್ದೆ, TCS ಕಡಿತ, (union budget 2026) ವಿದೇಶ ಯಾತ್ರೆ ಅಗ್ಗ; ತೆರಿಗೆ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ
- ಸೆಮಿಕಂಡಕ್ಟರ್, ಡಿಜಿಟಲ್ ಇಂಡಿಯಾ, ಗ್ರಾಮೀಣ ಅಭಿವೃದ್ಧಿಗೆ ದಾಖಲೆಯ ಹಣಕಾಸು ಹಂಚಿಕೆ
- ಕ್ಯಾನ್ಸರ್ ಔಷಧಿಗಳ ದರ ಕಡಿತ, ಮದ್ಯ–ಸಿಗರೇಟ್ ಬೆಲೆ ಏರಿಕೆ
New Delhi: ಕೇಂದ್ರ ಸರ್ಕಾರವು 2026–27ನೇ ಆರ್ಥಿಕ ವರ್ಷದ ಬಜೆಟ್ ಅನ್ನು (union budget 2026) ಇಂದು ನವದೆಹಲಿಯಲ್ಲಿ ಮಂಡಿಸಿದ್ದು, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರು ಸತತವಾಗಿ ಒಂಬತ್ತನೇ ಬಾರಿಗೆ ಬಜೆಟ್ (Budget) ಭಾಷಣ ಮಾಡಿರುವುದು ದಾಖಲೆ ಸಾಧನೆಯಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರ “ವಿಕಸಿತ ಭಾರತ–2047” ಗುರಿಯನ್ನು ಮುಂದಿಟ್ಟುಕೊಂಡು ಈ ಬಜೆಟ್ ರೂಪಿಸಲಾಗಿದ್ದು, ರೈತರು, ಮಧ್ಯಮ ವರ್ಗ, ಮಹಿಳೆಯರು, ಯುವಕರು ಹಾಗೂ ಉದ್ಯಮ ವಲಯಕ್ಕೆ ಸಮಾನ ಒತ್ತು ನೀಡಲಾಗಿದೆ.

ದೇಶದ ಆರ್ಥಿಕ ವೃದ್ಧಿ ಶೇ.7ರ ಮಟ್ಟದಲ್ಲಿ ಮುಂದುವರಿದಿದ್ದು, ಕಳೆದ ಹತ್ತು ವರ್ಷಗಳಲ್ಲಿ 25 ಕೋಟಿ ಜನ ಬಡತನದಿಂದ ಹೊರಬಂದಿದ್ದಾರೆ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಿದೆ.
ಈ ಬಜೆಟ್ ಅಭಿವೃದ್ಧಿ, ಆತ್ಮನಿರ್ಭರತೆ ಮತ್ತು ಉದ್ಯೋಗ (union budget 2026) ಸೃಷ್ಟಿಗೆ ದಿಕ್ಕು ತೋರಿಸುವಂತಿದೆ.
ರೈತರ ಕಲ್ಯಾಣಕ್ಕೆ ಈ ಬಜೆಟ್‌ನಲ್ಲಿ ವಿಶೇಷ ಆದ್ಯತೆ ನೀಡಲಾಗಿದೆ. ಸಣ್ಣ ಹಾಗೂ ಅತಿ ಸಣ್ಣ ರೈತರ ಉತ್ಪಾದಕತೆ ಹೆಚ್ಚಿಸುವ ಉದ್ದೇಶದಿಂದ ತೆಂಗಿನಕಾಯಿ ಕೃಷಿ ಅಭಿವೃದ್ಧಿ ಯೋಜನೆಯನ್ನು ಘೋಷಿಸಲಾಗಿದೆ.
ದೇಶದಲ್ಲಿ ಸುಮಾರು ಒಂದು ಕೋಟಿ ರೈತರು ತೆಂಗಿನಕಾಯಿ ಕೃಷಿಯನ್ನು ಅವಲಂಬಿಸಿರುವುದರಿಂದ, ಉತ್ಪಾದನೆ, ಸಂಸ್ಕರಣೆ ಹಾಗೂ ರಫ್ತಿಗೆ ಉತ್ತೇಜನ ನೀಡಲಾಗುತ್ತದೆ.
ಜೊತೆಗೆ ಕಚ್ಚಾ ಗೋಡಂಬಿ, ಕೋಕೋ ಉತ್ಪಾದನೆ ಮತ್ತು ಸಂಸ್ಕರಣೆಯಲ್ಲಿ ಭಾರತವನ್ನು ಸ್ವಾವಲಂಬಿ ರಾಷ್ಟ್ರವಾಗಿಸುವ ಗುರಿಯನ್ನು ಸರ್ಕಾರ ಹೊಂದಿದೆ.
2030ರ ವೇಳೆಗೆ ಭಾರತೀಯ ಗೋಡಂಬಿ ಮತ್ತು ಕೋಕೋವನ್ನು ಜಾಗತಿಕ ಪ್ರೀಮಿಯಂ ಬ್ರ್ಯಾಂಡ್‌ಗಳಾಗಿ ರೂಪಿಸುವ ಯೋಜನೆ ಕೂಡ ಘೋಷಿಸಲಾಗಿದೆ.
ಅಲ್ಲದೆ, ಶ್ರೀಗಂಧದ ಮರದ ಕೃಷಿ ಮತ್ತು ಸಂಸ್ಕರಣೆಯನ್ನು ಉತ್ತೇಜಿಸಲು ರಾಜ್ಯ ಸರ್ಕಾರಗಳೊಂದಿಗೆ ಕೇಂದ್ರ ಸರ್ಕಾರ ಕೈಜೋಡಿಸಲಿದೆ.
ಹಳೆಯ ಹಾಗೂ ಕಡಿಮೆ ಇಳುವರಿ ನೀಡುವ ತೋಟಗಳ ಪುನರುಜ್ಜೀವನಕ್ಕೂ ಈ ಬಜೆಟ್‌ನಲ್ಲಿ ಸ್ಥಾನ ಸಿಕ್ಕಿದೆ. ವಾಲ್ನಟ್, ಬಾದಾಮಿ ಮತ್ತು ಪೈನ್ ಬೀಜಗಳ ಸುಧಾರಿತ ಕೃಷಿಗೆ ವಿಶೇಷ ಕಾರ್ಯಕ್ರಮ ರೂಪಿಸಲಾಗಿದ್ದು, ಇದರಿಂದ ರೈತರ ಆದಾಯ ಹೆಚ್ಚುವಿಕೆ ಜೊತೆಗೆ ಗ್ರಾಮೀಣ ಪ್ರದೇಶಗಳಲ್ಲಿ ಯುವಕರಿಗೆ ಹೊಸ ಅವಕಾಶಗಳು ಸೃಷ್ಟಿಯಾಗಲಿವೆ.
ಖನಿಜ ಸಂಪನ್ಮೂಲ ಸಮೃದ್ಧ ರಾಜ್ಯಗಳಲ್ಲಿ ಕಾರಿಡಾರ್ ಸ್ಥಾಪನೆ ಮಾಡುವ ಘೋಷಣೆಯೂ ಮಾಡಲಾಗಿದೆ. ಸೆಮಿಕಂಡಕ್ಟರ್ ಮಿಷನ್‌ಗೆ ₹40 ಸಾವಿರ ಕೋಟಿ ಮೀಸಲಿಡಲಾಗಿದ್ದು, ತಮಿಳುನಾಡು, ಆಂಧ್ರಪ್ರದೇಶ, ಒಡಿಶಾ ಮತ್ತು ಕೇರಳ ರಾಜ್ಯಗಳಿಗೆ ಪ್ರಮುಖ ಕೈಗಾರಿಕಾ ಘೋಷಣೆಗಳು ದೊರೆತಿವೆ.
‘ಒನ್ ಪ್ರೊಡಕ್ಟ್ ಒನ್ ಸ್ಟೇಟ್’ ಯೋಜನೆ ಮತ್ತು ಮಹಾತ್ಮ ಗಾಂಧಿ ಗ್ರಾಮ್ ಸ್ವರಾಜ್ಯ ಯೋಜನೆಗಳ ಮೂಲಕ ಗ್ರಾಮೀಣ ಆರ್ಥಿಕತೆಯನ್ನು ಬಲಪಡಿಸುವ ಉದ್ದೇಶವಿದೆ.
ಮಧ್ಯಮ ಮತ್ತು ಸಣ್ಣ ಉದ್ಯಮಿಗಳಿಗೆ ಈ ಬಜೆಟ್ ಸಿಹಿಸುದ್ದಿ ನೀಡಿದೆ. ಆತ್ಮನಿರ್ಭರ ಭಾರತ ಯೋಜನೆಗೆ ₹2 ಸಾವಿರ ಕೋಟಿ ಮೀಸಲಿಡಲಾಗಿದ್ದು, ಕ್ರೆಡಿಟ್ ಗ್ಯಾರಂಟಿ ಸಪೋರ್ಟ್ ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತದೆ.
ಡಿಜಿಟಲ್ ಪರಿಸರ ವ್ಯವಸ್ಥೆ ಬಲಪಡಿಸಲು ಬಯೋಫಾರ್ಮ್ ಶಕ್ತಿ ಯೋಜನೆ ಘೋಷಿಸಲಾಗಿದೆ. AI ಮಿಷನ್ ಮೂಲಕ ಶಿಕ್ಷಣ, ಕೃಷಿ ಹಾಗೂ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಕ್ರಾಂತಿ ತರಲು ಸರ್ಕಾರ ಮುಂದಾಗಿದೆ.
ಆರೋಗ್ಯ ಕ್ಷೇತ್ರದಲ್ಲೂ ಮಹತ್ವದ ಘೋಷಣೆಗಳು ನಡೆದಿದ್ದು, ಹೊಸದಾಗಿ ಮೂರು ಏಮ್ಸ್ ಆಸ್ಪತ್ರೆಗಳ ನಿರ್ಮಾಣ, ಪ್ರತೀ ಜಿಲ್ಲೆಯಲ್ಲಿ ಬಾಲಕಿಯರ ಹಾಸ್ಟೆಲ್ ನಿರ್ಮಾಣ ಮತ್ತು ಕ್ರೀಡಾ ಕ್ಷೇತ್ರದಲ್ಲಿ ಉದ್ಯೋಗ ಸೃಷ್ಟಿಗಾಗಿ ಖೇಲೋ ಇಂಡಿಯಾ ಮಿಷನ್ ಆರಂಭಿಸಲಾಗುವುದು ಎಂದು ತಿಳಿಸಲಾಗಿದೆ.
ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ‘SHE ಮಾರ್ಟ್’ ಗ್ರಾಮೀಣ ಮಾರುಕಟ್ಟೆ ಸ್ಥಾಪನೆಯ ಘೋಷಣೆಯೂ ಗಮನ ಸೆಳೆದಿದೆ.
ಬಜೆಟ್‌ನ ಭಾಗ–ಬಿಯಲ್ಲಿ ತೆರಿಗೆ ಮತ್ತು ಬೆಲೆ ಬದಲಾವಣೆಗಳ ಬಗ್ಗೆ ಸ್ಪಷ್ಟತೆ ನೀಡಲಾಗಿದೆ. ಏಪ್ರಿಲ್‌ನಿಂದ ಹೊಸ ಐಟಿ ಕಾಯ್ದೆ ಜಾರಿಗೆ ಬರಲಿದ್ದು, ಐಟಿ ರಿಟರ್ನ್ ಸಲ್ಲಿಸಲು ಜುಲೈ 31ರವರೆಗೆ ಸಮಯ ನೀಡಲಾಗಿದೆ.
ತೆರಿಗೆ ಬಾಕಿ ಉಳಿಸಿಕೊಂಡವರಿಗೆ ಶೇ.100 ದಂಡ ಹಾಗೂ ಜೈಲು ಶಿಕ್ಷೆಯ ಎಚ್ಚರಿಕೆ ನೀಡಲಾಗಿದೆ. ಬೆಲೆ ಬದಲಾವಣೆಗಳ ಪೈಕಿ, ಮದ್ಯ ಮತ್ತು ಸಿಗರೇಟು ಬೆಲೆ ಏರಿಕೆಗೊಂಡಿದ್ದು, ಬೀಡಿ, ಪಾದರಕ್ಷೆ ಮತ್ತು ಬ್ಯಾಟರಿ ದರ ಇಳಿಕೆಯಾಗಿದೆ.
ಕ್ಯಾನ್ಸರ್‌ಗೆ ಸಂಬಂಧಿಸಿದ 17 ಔಷಧಗಳು ಮತ್ತು 7 ಅಪರೂಪದ ಕಾಯಿಲೆಗಳ ಔಷಧಗಳ ಮೇಲಿನ ತೆರಿಗೆ ಕಡಿತದಿಂದ ರೋಗಿಗಳಿಗೆ ದೊಡ್ಡ ಮಟ್ಟದ ಪರಿಹಾರ ಸಿಗಲಿದೆ. ವಿದೇಶಿ ಹೂಡಿಕೆದಾರರಿಗೆ ಅನುಕೂಲವಾಗುವಂತೆ ಹಲವು ಆಮದು ಸುಂಕ ವಿನಾಯಿತಿಗಳನ್ನೂ ಘೋಷಿಸಲಾಗಿದೆ.
ಒಟ್ಟಾರೆ, ಈ ಬಜೆಟ್ ಅಭಿವೃದ್ಧಿ, ಆರೋಗ್ಯ, ಕೃಷಿ ಮತ್ತು ಕೈಗಾರಿಕೆಗೆ ಸಮತೋಲನದ ದಿಕ್ಕು ನೀಡುವ ದಾಖಲೆ ಬಜೆಟ್ ಆಗಿದೆ.