ನವದೆಹಲಿ, ಫೆ. 01: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಮೂರನೇ ಬಜೆಟ್ ಕೋವಿಡ್ ಸಂಕಷ್ಟದಲ್ಲಿರುವ ಅಸಮಾನ್ಯ ಬಜೆಟ್ ಆಗಿದೆ. ಬಹಳ ನಿರೀಕ್ಷೆಗಳನ್ನು ಹೊಂದಿದ್ದ ಈ ಬಜೆಟ್ನಲ್ಲಿ ಹಲವು ಕ್ಷೇತ್ರಗಳಲ್ಲಿ ಭರ್ಜರಿ ಪುಷ್ಠಿ ಸಿಕ್ಕಿದೆ. ರಸ್ತೆ ಸೌಕರ್ಯ, ಆರೋಗ್ಯ ಇತ್ಯಾದಿ ವಲಯಗಳಿಗೆ ಶಕ್ತಿ ತುಂಬಲಾಗಿದೆ.
75 ವರ್ಷ ಮೇಲ್ಪಟ್ಟ ವಯಸ್ಸಿನ ಹಾಗೂ ಮನೆ ಬಾಡಿಗೆ ಮತ್ತು ಪಿಂಚಣಿಯ ಆದಾಯ ಮಾತ್ರ ಹೊಂದಿರುವ ಹಿರಿಯ ನಾಗರಿಕರಿಗೆ ಐಟಿ ರಿಟರ್ನ್ ಸಲ್ಲಿಕೆಯಿಂದ ವಿನಾಯಿತಿ ನೀಡಲಾಗಿದೆ. ಇದು ವಯೋವೃದ್ಧರಿಗೆ ನಿರಾಳ ತರುವ ಬೆಳವಣಿಗೆಯಾಗಿದೆ. ಹಾಗೆಯೇ, ಸಣ್ಣ ತೆರಿಗೆ ಪಾವತಿದಾರರ ವ್ಯಾಜ್ಯ ಪರಿಹಾರಕ್ಕಾಗಿ ಫೇಸ್ಲೆಸ್ ವ್ಯವಸ್ಥೆ ಸ್ಥಾಪನೆ ಮಾಡುವುದಾಗಿ ಸಚಿವರು ಘೋಷಿಸಿದ್ದಾರೆ.
ಐಟಿ ರಿಟರ್ನ್ ವ್ಯವಸ್ಥೆಯನ್ನು ಇನ್ನಷ್ಟು ಸರಳಗೊಳಿಸಲಾಗಿದೆ. ಸ್ಯಾಲರಿ ಇನ್ಕಮ್, ತೆರಿಗೆ ಪಾವತಿ ಮತ್ತು ಟಿಡಿಎಸ್ ಅಂಶಗಳನ್ನ ಐಟಿಆರ್ ಫಾರ್ಮ್ಗಳಲ್ಲಿ ಮೊದಲೇ ಭರ್ತಿ ಮಾಡಲಾಗುವುದು.
ಆರೋಗ್ಯ ಕ್ಷೇತ್ರ: ಆರೋಗ್ಯ ಕ್ಷೇತ್ರಕ್ಕೆ ಬರೋಬ್ಬರಿ 2,23,246 ಕೋಟಿ ರೂ ನೀಡಲಾಗಿದೆ. ಕಳೆದ ಬಜೆಟ್ಗೆ ಹೋಲಿಸಿದರೆ ಶೇ. 137ರಷ್ಟು ಹೆಚ್ಚಳವಾಗಿದೆ. ಪಿಎಂ ಆತ್ಮನಿರ್ಭರ್ ಸ್ವಸ್ಥ್ ಭಾರತ್ ಯೋಜನೆಯ ಘೋಷಣೆ ಆಗಿದೆ. ಆರು ವರ್ಷದವರೆಗೆ ಈ ಯೋಜನೆಗೆ 64,180 ಕೋಟಿ ರೂ ವಿನಿಯೋಗವಾಗಲಿದೆ. 15 ತುರ್ತು ಆರೋಗ್ಯ ಕೇಂದ್ರಗಳಿಗೆ ಸಹಾಯಕವಾಗಲಿದೆ. ರಾಷ್ಟ್ರೀಯ ರೋಗ ನಿಯಂತ್ರಣ ಕೇಮದ್ರ ಮತ್ತಿತರ ವಿಚಾರಗಳಿಗೆ ಪುಷ್ಟಿ ಸಿಗಲಿದೆ. ರಾಷ್ಟ್ರೀಯ ಪೌಷ್ಟಿಕ ಯೋಜನೆಯ ವ್ಯವಸ್ಥೆ ಬಲಗೊಳ್ಳಲಿದೆ.
ರಸ್ತೆ ಸೌಕರ್ಯ: ಹೊಸ ಹೆದ್ದಾರಿಗಳ ಘೋಷಣೆ ಆಗಿದೆ. ತಮಿಳುನಾಡಿನಲ್ಲಿ 3,500 ಕಿಮೀ ಕಾರಿಡಾರ್, ಕೇರಳದಲ್ಲಿ 1,100 ಕಿಮೀ ಕಾರಿಡಾರ್ ಯೋಜನೆಗೆ ಅನುಮೋದನೆ ಸಿಕ್ಕಿದೆ. ಇದಕ್ಕೆ 65 ಸಾವಿರ ಕೋಟಿ ರೂ ಬಿಡುಗಡೆಯಾಗಲಿದೆ. ಪಶ್ಚಿಮ ಬಂಗಾಳದಲ್ಲಿ 675 ಕಿಮೀ ಕಾರಿಡಾರ್ಗೆ 95 ಸಾವಿರ ಕೋಟಿ ರೂ, ಅಸ್ಸಾಮ್ನಲ್ಲಿ 1,300 ಕೋಟಿ ರೂ ಹಣವನ್ನು ಮುಂದಿನ ಮೂರು ವರ್ಷಗಳಲ್ಲಿ ಒದಗಿಸಲಾಗುತ್ತದೆ. ಒಟ್ಟಾರೆ, ರಸ್ತೆ ಸೌಕರ್ಯ ಯೋಜನೆಗಳಿಗೆ ಈ ಬಜೆಟ್ನಲ್ಲಿ ಭರ್ಜರಿ ಪುಷ್ಟಿ ಸಿಕ್ಕಿದೆ.
ಬ್ಯಾಂಕ್: ಸ್ಟಾರ್ಟಪ್ಗಳ ಪೈಕಿ ಶೇ. 1 ಕಂಪನಿಗಳಿಗೆ ಪೇಯ್ಡ್ ಅಪ್ ಕ್ಯಾಪಿಟಲ್ ಮೇಲಿನ ನಿರ್ಬಂಧ ಇರುವುದಿಲ್ಲ. ಐಡಿಬಿಐ ಸೇರಿದಂತೆ ಮೂರು ಬ್ಯಾಂಕುಗಳ ಬಂಡವಾಳ ಹಿಂತೆಗೆತ (Disinvestment) ಆಗಲಿದೆ. ಈಗಾಗಲೇ ಘೋಷಣೆ ಆಗಿರುವ ಏರ್ ಇಂಡಿಯಾ, ಬಿಪಿಸಿಎಲ್ ಮೊದಲಾದ ಸಂಸ್ಥೆಗಳ ಬಂಡವಾಳ ಹಿಂತೆಗೆತ ಪ್ರಕ್ರಿಯೆ 2022ರಷ್ಟರಲ್ಲಿ ಪೂರ್ಣಗೊಳ್ಳಲಿದೆ.
ರೈಲ್ವೇಸ್: ರೈಲ್ವೆ ಕ್ಷೇತ್ರಕ್ಕೆ 1,10,055 ಕೋಟಿ ರೂ ವಿನಿಯೋಗ ಆಗಿದೆ. ಪಶ್ಚಿಮ ಬಂಗಾಳದಲ್ಲಿ ರೈಲ್ವೆ ಯೋಜನೆಗಳಿಗೆ 25,000 ಕೋಟಿ, ಚೆನ್ನೈ ಮೆಟ್ರೋಗೆ 63,000 ಕೋಟಿ ರೂ ನೀಡಲಾಗಿದೆ. ಬೆಂಗಳೂರಿನಲ್ಲಿ ನಮ್ಮ ಮೆಟ್ರೋಗೆ ಹಣ ಬಿಡುಗಡೆ ಮಾಡಲಾಗಿದೆ.
ಕೋವಿಡ್-19 ಲಸಿಕೆ: ಕೋವಿಡ್ ಲಸಿಕೆಗಳಿಗೆ 35 ಸಾವಿರ ಕೋಟಿ ರೂ ಮೀಸಲಿರಿಸಲಾಗಿದೆ. ಈಗ ಅನುಮೋದನೆ ಪಡೆದಿರುವ ಕೋವಿಶೀಲ್ಡ್ ಮ್ತು ವೋವ್ಯಾಕ್ಸಿನ್ ಜೊತೆಗೆ ಶೀಘ್ರದಲ್ಲೇ ಇನ್ನೆರಡು ಲಸಿಕೆಗಳು ಹೊರಬರಲಿವೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ಕೃಷಿ: ಎಪಿಎಂಸಿಯ ಸೌಕರ್ಯಗಳನ್ನ ಬಲಪಡಿಸಲು ಕೃಷಿ ಸೌಕರ್ಯ ನಿಧಿಗಳನ್ನ ಘೋಷಣೆ ಮಾಡಲಾಗಿದೆ. ರೈತರಿಗೆ ನೀಡುವ ಎಂಎಸ್ಪಿಯಲ್ಲಿ ಗಣನೀಯ ಹೆಚ್ಚಳವಾಗಿದೆ. ಗೋದಿ ಖರೀದಿಗೆ ರೈತರಿಗೆ 2019-20ರಲ್ಲಿ 62 ಸಾವಿರ ಕೋಟಿ ನೀಡಲಾಗಿತ್ತು. 2020-21ರಲ್ಲಿ ಇದರ ಮೊತ್ತ 75 ಸಾವಿರ ಕೋಟಿ ರೂ ಆಗಿದೆ. 2013-14ರಲ್ಲಿ ಭತ್ತ ಖರೀದಿಗೆ 53,928 ಕೋಟಿ ರೂ ವೆಚ್ಚ ಮಾಡಲಾಗಿತ್ತು. 2020-21ರಲ್ಲಿ ಇದು 1,72,752 ಕೋಟಿ ರೂಗೆ ಹೆಚ್ಚಳವಾಯಿತು ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.
ಎಫ್ಡಿಐ: ವಿದೇಶೀ ನೇರ ಬಂಡವಾಳ ಶೇ. 74ರಷ್ಟು ಹೆಚ್ಚಳವಾಗಿದೆ ಎಂದು ಕೇಂದ್ರ ಸಚಿವರು ತಿಳಿಸಿದರು.
ಸ್ವಚ್ಛ ಭಾರತ್ ಮತ್ತು ಸ್ವಸ್ಥ್ ಭಾರತ್: ನಗರ ಸ್ವಚ್ಛ ಭಾರತ್ ಮಿಷನ್ ಯೋಜನೆಗೆ ಐದು ವರ್ಷಗಳಿಗೆ 1,41,678 ಕೋಟಿ ರೂ ವಿನಿಯೋಗ ಮಾಡಲು ನಿರ್ಧರಿಸಲಾಗಿದೆ.
ಉಜ್ವಲ್ ಯೋಜನೆ: ಕೇಂದ್ರದ ಉಜ್ವಲ್ ಎಲ್ಪಿಜಿ ಯೋಜನೆಯ ವ್ಯಾಪ್ತಿಗೆ ಇನ್ನೂ 1 ಕೋಟಿ ಮಂದಿಯನ್ನ ತರಲಾಗಿದೆ. ಒಟ್ಟು 8 ಕೋಟಿ ಮಂದಿಗೆ ಈ ಸ್ಕೀಮ್ ಇದೆ. ಮುಂದಿನ ಮೂರು ವರ್ಷದಲ್ಲಿ ಇನ್ನೂ 100 ಜಿಲ್ಲೆಗಳನ್ನ ಸೇರಿಸಲಾಗುವುದು.
ಸ್ವಚ್ಛ ಗಾಳಿ: ಹತ್ತು ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಇರುವ 42 ನಗರ ಕೇಂದ್ರಗಳಲ್ಲಿ ಸ್ವಚ್ಛ ಗಾಳಿಗಾಗಿ 2,217 ಕೋಟಿ ರೂ ಘೋಷಣೆ ಮಾಡಲಾಗಿದೆ. ಹಳೆಯ ವಾಹನಗಳನ್ನ ನಿರ್ಮೂಲನೆ ಮಾಡಲಾಗುತ್ತದೆ.
ಜಲ ಜೀವನ್ ಮಿಷನ್: ಎಲ್ಲಾ ನಗರ ಸಂಸ್ಥೆಗಳಲ್ಲಿ ಜನಜೀವನ್ ಮಿಷನ್ ಘೋಷಣೆ ಮಾಡಲಾಗಿದೆ. ಮುಂದಿನ ಐದು ವರ್ಷದಲ್ಲಿ ಜನಜಿವನ್ ಯೋಜನೆಗೆ 2.87 ಲಕ್ಷ ಕೋಟಿ ವಿನಿಯೋಗವಾಗಲಿದೆ.
ಸೆನ್ಸಸ್: ಮುಂಬರುವ ಸೆನ್ಸಸ್ಗೆ 3,768 ಕೋಟಿ ರೂ ಒದಗಿಸಲಾಗಿದೆ.