ವಿಶ್ವಸಂಸ್ಥೆ, ಆ. 16: ಅಫ್ಘಾನಿಸ್ತಾನ ದೇಶವನ್ನು ತಾಲಿಬಾನ್ ಸಂಪೂರ್ಣ ನಿಯಂತ್ರಣಕ್ಕೆ ತೆಗೆದುಕೊಂಡಿದ್ದು, ಇಪ್ಪತ್ತು ವರ್ಷಗಳ ಬಳಿಕ ಅಧಿಕಾರಕ್ಕೆ ಮರಳಿದೆ. ಈ ಹಿನ್ನೆಲೆಯಲ್ಲಿ ಆಗಸ್ಟ್ 16ರಂದು ಭಾರತದ ಅಧ್ಯಕ್ಷತೆಯಲ್ಲಿ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ತುರ್ತು ಸಭೆ ಕರೆಯಲಾಗಿದೆ. ಕೇವಲ ಒಂದು ವಾರದಲ್ಲಿ ನಡೆಯುತ್ತಿರುವ ಎರಡನೇ ಸಭೆ ಇದಾಗಿದೆ.
ತಾಲಿಬಾನ್ ದಂಗೆಕೋರರು ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ಅನ್ನು ವಶಕ್ಕೆ ತೆಗೆದುಕೊಂಡಿದ್ದಾರೆ ಮತ್ತು ನಗರವನ್ನು ಪ್ರವೇಶಿಸಿ, ಅಧ್ಯಕ್ಷರ ಅರಮನೆಯನ್ನು ಸ್ವಾಧೀನಪಡಿಸಿಕೊಂಡಿದ್ದಾರೆ. ಅಧ್ಯಕ್ಷ ಅಶ್ರಫ್ ಘನಿ ಸೇರಿದಂತೆ ಅಫ್ಘಾನ್ ನಾಗರಿಕರು ದೇಶ ತೊರೆಯುವಂತೆ ಮಾಡಲಾಗಿದೆ.
“ಅಫ್ಘಾನಿಸ್ತಾನ ವಿಚಾರಕ್ಕೆ ಸಂಬಂಧಿಸಿದಂತೆ ವಿಶ್ವಸಂಸ್ಥೆ ಭದ್ರತಾ ಮಂಡಳಿ ಸಭೆ ಸೇರುತ್ತದೆ. ಭಾರತದ ಅಧ್ಯಕ್ಷತೆಯಲ್ಲಿ ಆಗಸ್ಟ್ 16 ರಂದು ತುರ್ತು ಸಭೆ ನಡೆಯಲಿದ್ದು, ಅಫ್ಘಾನಿಸ್ತಾನದ ಬಗ್ಗೆ ಮಾಹಿತಿ ಪಡೆದು ಸಮಾಲೋಚನೆ ನಡೆಸಲಿದೆ ಎಂದು ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಅವರು ಮಾಹಿತಿ ನೀಡಿರುವುದಾಗಿ” ವಿಶ್ವಸಂಸ್ಥೆಯ ಭಾರತದ ಖಾಯಂ ಪ್ರತಿನಿಧಿ, ರಾಯಭಾರಿ ಟಿ ಎಸ್ ತಿರುಮೂರ್ತಿ ಅವರು ಟ್ವೀಟ್ ಮಾಡಿದ್ದಾರೆ.
ಅಫ್ಘಾನಿಸ್ತಾನದಲ್ಲಿ ನಡೆದ ಯುದ್ಧದಲ್ಲಿ ತಾಲಿಬಾನ್ ಗೆಲುವು ಸಾಧಿಸಿದೆ ಎಂದು ಉಜ್ಬೇಕಿಸ್ತಾನ ರಾಜಧಾನಿ ತಾಷ್ಕೆಂಟ್ ಗೆ ಪಲಾಯನ ಮಾಡಿರುವ ಅಧ್ಯಕ್ಷ ಅಶ್ರಫ್ ಘನಿ ಭಾನುವಾರ ಹೇಳಿದ್ದಾರೆ.