ಬೆಂಗಳೂರು ಫೆ 17 : ಕೊರೊನಾ ಹಿನ್ನೆಲೆಯಲ್ಲಿ ಕಾಲೇಜುಗಳು ತಡವಾಗಿ ಪ್ರಾರಂಭವಾದ ಕಾರಣದಿಂದಾಗಿ ಮುಂಬರುವ ಪರೀಕ್ಷೆಗಳನ್ನು ಒಂದು ತಿಂಗಳ ಕಾಲ ಮುಂದೂಡಲು ಪರಿಗಣಿಸುವಂತೆ ಕರ್ನಾಟಕ ವಿಶ್ವವಿದ್ಯಾಲಯಗಳಿಗೆ ಸರ್ಕಾರ ಸೂಚಿಸಿದೆ. ಮೂರನೇ ಕೋವಿಡ್ -19 ಪ್ರಕರಣಗಳ ಉಲ್ಬಣದಿಂದಾಗಿ ಕಾಲೇಜುಗಳನ್ನು ಮುಚ್ಚಿದ್ದರಿಂದ ಪಠ್ಯಕ್ರಮವನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಲಾಗಿಲ್ಲ. ಕಾಲೇಜುಗಳಲ್ಲಿ ಪಠ್ಯಕ್ರಮವು ಇನ್ನೂ ಪೂರ್ಣಗೊಳ್ಳದ ಕಾರಣ ಪದವಿ ಕೋರ್ಸ್ಗಳ ಸೆಮಿಸ್ಟರ್ ಪರೀಕ್ಷೆಗಳನ್ನು ಒಂದು ತಿಂಗಳ ಕಾಲ ಮುಂದೂಡುವಂತೆ ಉನ್ನತ ಶಿಕ್ಷಣ ಇಲಾಖೆಯು ಕರ್ನಾಟಕದ ವಿಶ್ವವಿದ್ಯಾಲಯಗಳ ಉಪಕುಲಪತಿಗಳಿಗೆ ತಿಳಿಸಿದೆ.

ಉನ್ನತ ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಿ.ಕುಮಾರ್ ನಾಯ್ಕ್ ಅವರು ಪತ್ರ ಬರೆದಿದ್ದು, ಪರೀಕ್ಷೆ ಮುಂದೂಡುವ ಕುರಿತು ತೀರ್ಮಾನ ಕೈಗೊಳ್ಳುವಂತೆ ವಿಸಿಗಳಿಗೆ ಸೂಚಿಸಿದ್ದಾರೆ. ಮೂರನೇ ಅಲೆಯ ಸಮಯದಲ್ಲಿ ಕೋವಿಡ್ -19 ಪ್ರಕರಣಗಳ ಉಲ್ಬಣ ಹಾಗೂ ಅತಿಥಿ ಉಪನ್ಯಾಸಕರ ಪ್ರತಿಭಟನೆಯಿಂದಾಗಿ ಕಾಲೇಜುಗಳು ಮುಚ್ಚಲ್ಪಟ್ಟ ಕಾರಣ ಸಮಯದೊಳಗೆ ಪಠ್ಯಕ್ರಮಗಳನ್ನು ಪೂರ್ಣಗೊಳಿಸಲಾಗಿಲ್ಲ. ಕೆಲವು ವಿಶ್ವವಿದ್ಯಾಲಯಗಳು ಈಗಾಗಲೇ ಸೆಮಿಸ್ಟರ್ ಪರೀಕ್ಷೆಗಳ ವೇಳಾಪಟ್ಟಿಯನ್ನು ಪ್ರಕಟಿಸಿವೆ. ಆದರೆ ಕೆಲವು ಕಾಲೇಜುಗಳಲ್ಲಿ ಪಠ್ಯಕ್ರಮಗಳೇ ಪೂರ್ಣಗೊಂಡಿಲ್ಲ. ವಿದ್ಯಾರ್ಥಿಗಳಿಗೆ ಪರೀಕ್ಷೆಗಳಿಗೆ ತಯಾರಾಗಲು ಒಂದು ತಿಂಗಳು ಪರೀಕ್ಷೆ ಮುಂದೂಡಲು ಮುಖ್ಯ ಕಾರ್ಯದರ್ಶಿ ಜಿ.ಕುಮಾರ್ ನಾಯ್ಕ್ ವಿವಿಗಳಿಗೆ ತಿಳಿಸಿದ್ದಾರೆ.