ಒಂದು ಆಟೋದಲ್ಲಿ(Auto) ಸಾಮಾನ್ಯವಾಗಿ ಎಷ್ಟು ಜನ ಪ್ರಯಾಣಿಸಬಹುದು? ಹೆಚ್ಚಾಗಿ ಮೂರು ಜನ ಸುಖಕರವಾಗಿ ಪ್ರಯಾಣ ಮಾಡಬಹುದು. ಇಕ್ಕಟ್ಟಾದರೂ ಸಹ ಗಂಡ-ಹೆಂಡತಿ ಇಬ್ಬರು ಅಥವಾ ಮೂವರು ಮಕ್ಕಳು ಪ್ರಯಾಣ ಮಾಡಿದರೆ ಅದೇ ಹೆಚ್ಚು. ಅಬ್ಬಬ್ಬಾ ಎಂದರೆ ಪೊಲೀಸರ ಕಣ್ಣು ತಪ್ಪಿಸಿ ಹತ್ತು ಜನರು ಪ್ರಯಾಣ ಮಾಡಬಹುದೇನೋ. ಆದರೆ ಇಲ್ಲೊಂದು ಆಟೋದಲ್ಲಿ ಚಾಲಕ 27 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿರುವುದನ್ನು ಕಂಡು ಉತ್ತರಪ್ರದೇಶದ ಪೊಲೀಸರು ದಿಗ್ಭ್ರಮೆಗೊಂಡಿದ್ದಾರೆ.

ಹೌದು, ಬಕ್ರೀದ್ ಆಚರಣೆ ವೇಳೆ ಒಂದೇ ಆಟೋದಲ್ಲಿ ಪ್ರಯಾಣ ಮಾಡುತ್ತಿದ್ದವರನ್ನು ಪೊಲೀಸರು ತಡೆದಿದ್ದಾರೆ. ಉತ್ತರ ಪ್ರದೇಶದ(UttarPradesh), ಫತೇಪುರ್ ಜಿಲ್ಲೆಯ(Fathepur), ಬಿಂಡ್ಕಿ ಕೊಟ್ವಾಲಿ ಪ್ರದೇಶದಲ್ಲಿ ಕೆಲವರು ಆಟೋ ರಿಕ್ಷಾದಲ್ಲಿ ಹೊರಟಿದ್ದರು. ಬಿಂಡ್ಕಿ ಪ್ರದೇಶದ ಲಾಲೌಲಿಯ ಅಡ್ಡದಾರಿಯಲ್ಲಿ ಆಟೋ ಚಾಲಕ ಅತಿ ವೇಗದಲ್ಲಿ ಆಟೋ ಓಡಿಸುತ್ತಿದ್ದುದನ್ನು ಪೊಲೀಸರು ಗಮನಿಸಿ, ಓಡಿ ಹೋಗಿ ಆಟೋ ನಿಲ್ಲಿಸಿದ್ದಾರೆ. ಇದಾದ ನಂತರ ಪೊಲೀಸರು, ಮಕ್ಕಳು ಮತ್ತು ಹಿರಿಯರನ್ನು ಒಬ್ಬೊಬ್ಬರನ್ನಾಗಿ ಇಳಿಸಿದ್ದಾರೆ.
ಆಟೋದಿಂದ ಜನರು ಇಳಿಯಲು ಆರಂಭಿಸಿದ ಕೂಡಲೇ ಪೊಲೀಸರಿಗೂ ಅಚ್ಚರಿ ಕಾದಿತ್ತು. ಏಕೆಂದರೆ, ಸುಮಾರು 27 ಜನ ಮಕ್ಕಳಿಂದ ಹಿರಿಯರವರೆಗೂ ಆಟೋದಲ್ಲಿ ಇದ್ದರು. ತಕ್ಷಣ ಕ್ರಮ ಕೈಗೊಂಡ ಪೊಲೀಸರು ಆಟೋವನ್ನು ವಶಕ್ಕೆ ಪಡೆದಿದ್ದಾರೆ. ಆಟೋವನ್ನು ವಶಕ್ಕೆ ಪಡೆದ ಪೊಲೀಸರು ಚಾಲಕನಿಗೆ 11, 500 ರೂ. ದಂಡ ವಿಧಿಸಿದ್ದಾರೆ. ಪೊಲೀಸರು ಪ್ರಯಾಣಿಕರನ್ನು ಒಬ್ಬೊಬ್ಬರಾಗಿ ಎಣಿಸುತ್ತಿರುವ ದೃಶ್ಯ ವಿಡಿಯೋ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.

ಈ ಹಿಂದೆ ಇದೇ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಾಕಷ್ಟು ಬಾರಿ ನಿಗದಿಗಿಂತ ಹೆಚ್ಚಿನ ಸಾಮರ್ಥ್ಯದಲ್ಲಿ ಪ್ರಯಾಣಿಕರನ್ನು ಕರೆದುಕೊಂಡು ಹೋಗುತ್ತಿದ್ದವರನ್ನು ತಡೆದು ಪೊಲೀಸರು ಎಚ್ಚರಿಕೆ ನೀಡುತ್ತಿದ್ದರು. ಆದರೂ ಸಹ ಆಟೋ ಚಾಲಕರು ತಮ್ಮ ಹಳೇ ಚಾಳಿಯನ್ನೇ ಮುಂದುವರೆಸಿದ್ದಾರೆ ಎಂದು ಪೊಲೀಸರು ದುಬಾರಿ ದಂಡವನ್ನು ಚಾಲಕನಿಗೆ ವಿಧಿಸಿದ್ದಾರೆ.
- ಪವಿತ್ರ