ಉಪೇಂದ್ರ ಅವರ ಆರಂಭದ ವಿಚಿತ್ರ ಸಿನಿಮಾಗಳು ಇಂದಿನ ಯುವ ತಲೆಮಾರುಗಳನ್ನು ಕೂಡ ಯಾವ ಮಟ್ಟಕ್ಕೆ ಸೆಳೆಯುತ್ತವೆ ಎನ್ನುವುದಕ್ಕೆ ಈ ವಾರ ಬಿಡುಗಡೆಯಾದ ಎರಡು ಸಿನಿಮಾಗಳೇ ಉದಾಹರಣೆ. ಮುಖವಾಡ ಇಲ್ಲದವನು' ಮತ್ತು
ಗಡಿಯಾರ’ ಎನ್ನುವ ಎರಡು ಸಿನಿಮಾಗಳ ನಿರ್ದೇಶಕರು ಕೂಡ ತಮ್ಮ ಮೇಲೆ ಉಪೇಂದ್ರ ಸಿನಿಮಾಗಳು ಬೀರಿರುವ ಪ್ರಭಾವದ ಬಗ್ಗೆ ಹೇಳಿಕೊಂಡಿದ್ದಾರೆ. ಸದ್ಯಕ್ಕೆ ಗಡಿಯಾರ ಚಿತ್ರದ ಬಗ್ಗೆ ಇಲ್ಲಿ ಮಾತನಾಡೋಣ.
ಪುರಾಣದ ವಾಕ್ಯಗಳಿಂದ ಆರಂಭವಾಗುವ ಚಿತ್ರದಲ್ಲಿ ಇತಿಹಾಸದ ಬಗ್ಗೆ ಉಲ್ಲೇಖಿಸಲಾಗುತ್ತದೆ. ಬಳಿಕ ಕಾಲೇಜ್ ಆವರಣದಲ್ಲಿ ಡ್ರಗ್ಸ್ ಸಪ್ಲೈ ಮಾಡುವ ವ್ಯಕ್ತಿಯೊಬ್ಬನ ಬಂಧನವನ್ನು ಲೈವ್ ಆಗಿ ತೋರಿಸಲಾಗುತ್ತದೆ. ಪ್ರಕರಣದಲ್ಲಿ ಬಂಧಿತರಾದವರನ್ನು ವಿಚಾರಣೆ ನಡೆಸುವ ಪೊಲೀಸ್ ಅಧಿಕಾರಿ ಒಂದು ಕಡೆಯಾದರೆ, ಅವರನ್ನು ಸಂದರ್ಶಿಸಬೇಕು ಎಂದು ಬರುವ ಪತ್ರಕರ್ತೆ ಮತ್ತೊಂದು ಕಡೆ. ಆ ಪತ್ರಕರ್ತೆಯಲ್ಲಿ ಅವರು ಹೇಳುವ ಕತೆಯೇ ಚಿತ್ರದ ಮೊದಲಾರ್ಧದ ತುಂಬ ಇದೆ. ಅದರಲ್ಲಿ ಕಾಲೇಜ್, ಲವ್, ಮಸ್ತಿ ಎಲ್ಲವೂ ಇದೆ. ಮಧ್ಯಂತರದ ಬಳಿಕ ಕತೆಗೆ ಸಂಬಂಧಿಸಿದ ಹಾಗೆ ನಿಜವಾದ ಕೊಲೆಗಾರನನ್ನು ಬಂಧಿಸುವಲ್ಲಿಯೂ ಅದೇ ಪತ್ರಕರ್ತೆ ನೀಡುವ ಸಾಕ್ಷಿ ಪ್ರಮುಖವಾಗುತ್ತದೆ. ಅಪರಾಧಿಯನ್ನು ಬಂಧಿಸುವಲ್ಲಿ ಒಂದು ಸಾಹಸಮಯ ಕ್ಲೈಮಾಕ್ಸ್ ಚಿತ್ರಕ್ಕೆ ನೀಡಲಾಗಿದೆ.
ನಿರ್ದೇಶಕ ಪ್ರಭಿಕ್ ಮೊಗವೀರ್ ಒಬ್ಬ ಉಪೇಂದ್ರನ ಅಭಿಮಾನಿಯಾಗಿರಬಹುದು. ಆದರೆ ಚಿತ್ರದ ಆರಂಭವನ್ನು ಗಮನಿಸಿದಾಗ ಬಹುಶಃ ರವಿಚಂದ್ರನ್ ಪ್ರಭಾವವೂ ಇವರ ಮೇಲೆ ಇದ್ದಂತೆ ಅನಿಸಬಹುದು. ಯಾಕೆಂದರೆ ಕ್ರೇಜಿಸ್ಟಾರ್ ತಮ್ಮ ನಿರ್ದೇಶನದ ಇತ್ತೀಚಿನ ಚಿತ್ರಗಳಲ್ಲಿ ಇಂಗ್ಲಿಷ್ ಕೋಟ್ಸ್ ಮೂಲಕ ಇಂಟ್ರೋ ನೀಡುವುದನ್ನು, ಭಗವದ್ಗೀತೆಯ ಪ್ರೇರಕ ವಾಕ್ಯಗಳನ್ನು ಪೂರಕವಾಗಿ ಬಳಸುವುದನ್ನು ನೋಡಿದ್ದೇವೆ. ಅದೇ ರೀತಿ ಇಲ್ಲಿಯೂ ಭಗವದ್ಗೀತೆಯ 18 ಅಧ್ಯಾಯಗಳಿಂದ 18 ಸಂದೇಶಗಳನ್ನು ನೀಡಲಾಗಿದೆ. ಆದರೆ ಕತೆ ಆರಂಭವಾದೊಡನೆ ಚಿತ್ರದೊಳಗೆ ಉಪೇಂದ್ರ ಅವರ ಶೈಲಿಯಿಂದ ಪಡೆದಿರುವ ಪ್ರೇರಣೆ ಎದ್ದು ಕಾಣುತ್ತದೆ. ಅದರಲ್ಲಿ ಪ್ರಮುಖವಾಗಿ ಓಂ ಚಿತ್ರದ ಪ್ರಭಾವ ತುಂಬಾನೇ ಇದೆ. ಅದು ಕಲರ್ ಟೋನ್ ಮಾತ್ರವಲ್ಲ, ಪತ್ರಕರ್ತೆಯ ಸನ್ನಿವೇಶ, ಕಾಲೇಜು ದೃಶ್ಯ ಹೀಗೆ ವಿವಿಧ ವಿಭಾಗಗಳಲ್ಲಿ ಎದ್ದು ಕಾಣುತ್ತದೆ. ಈ ಎಲ್ಲ ಕಾರಣದಿಂದ ಚಿತ್ರ ವಿಭಿನ್ನವಾಗಿದೆ.
ಪತ್ರಕರ್ತೆ ಶೀತಲ್ ಪಾತ್ರದಲ್ಲಿ ಮಾಜಿ ವಾರ್ತಾ ವಾಚಕಿ, ನಟಿ, ನಿರ್ದೇಶಕಿ ಶೀತಲ್ ಶೆಟ್ಟಿ ಕಾಣಿಸಿಕೊಂಡಿರುವುದು ವಿಶೇಷ. ಪೊಲೀಸ್ ಅಧಿಕಾರಿಗಳಾಗಿ ಕಾಣಿಸಿಕೊಂಡಿರುವ ರಾಜ್ ದೀಪಕ್ ಶೆಟ್ಟಿ, ಗಣೇಶ್ ರಾವ್ ಕೇಸರ್‌ಕರ್ ಮತ್ತು ಸಾಂಗ್ಲಿಯಾನ ಚಿತ್ರಕ್ಕೆ ಗಂಭೀರತೆ ತಂದುಕೊಟ್ಟಿದ್ದಾರೆ. ಕ್ಲೈಮ್ಯಾಕ್ಸ್ ಫೈಟ್‌ನಲ್ಲಿ ರಾಜ್ ದೀಪಕ್ ಶೆಟ್ಟಿಯ ಸಾಹಸ ಮನ ಗೆಲ್ಲುತ್ತದೆ. ಉಳಿದಂತೆ ಎರಡು ಹಾಡುಗಳು ಮತ್ತು ಒಂದು ಹಾಡಲ್ಲಿ ಅಘೋರಿಯಾಗಿ ಕಾಣಿಸಿಕೊಂಡಿರುವ ಯಶ್ ಶೆಟ್ಟಿಯ ಪಾತ್ರ ಮನ ಸೆಳೆಯುತ್ತದೆ. ಇಷ್ಟೆಲ್ಲ ಪ್ರಮುಖ ವಿಚಾರಗಳನ್ನು ಹೇಳಿದ ಮೇಲೆ ಚಿತ್ರದಲ್ಲಿನ ನೆಗೆಟಿವ್ ಅಂಶಗಳ ಬಗ್ಗೆಯೂ ಹೇಳಲೇಬೇಕು. ಹಿನ್ನೆಲೆ ಸಂಗೀತ ಮತ್ತು ಸಂಕಲನದ ವಿಚಾರದಲ್ಲಿ ನಿರ್ದೇಶಕರು ಇನ್ನಷ್ಟು ಗಮನ ಕೊಟ್ಟಿದ್ದರೆ ಚೆನ್ನಾಗಿತ್ತು.