ಯುಪಿಎಸ್ಸಿ(UPSC) ನಾಗರಿಕ ಸೇವೆಗಳ ಪರೀಕ್ಷೆಯು ದೇಶದ ಎರಡನೇ ಅತ್ಯಂತ ಕಠಿಣ ಪರೀಕ್ಷೆಯಾಗಿದೆ. ದೀರ್ಘಕಾಲದ ಶ್ರಮಕ್ಕಿಂತ ದೀರ್ಘಕಾಲದ ಏಕಾಗ್ರತೆ ಈ ಪರೀಕ್ಷೆಗೆ ತಯಾರಿ ನಡೆಸುವಾಗ ಇರಬೇಕಾಗುತ್ತದೆ. ಮೊದಲನೇ ಪ್ರಯತ್ನದಲ್ಲಿ ಪರೀಕ್ಷೆ(Examination) ಪಾಸ್ ಆಗಲಿಲ್ಲ ಎಂದಲ್ಲಿ ಆ ಅಟೆಂಪ್ಟ್ನ ಸಂಪೂರ್ಣ ತಪ್ಪುಗಳನ್ನು ಲಿಸ್ಟ್ ಮಾಡಿ ಸರಿಪಡಿಸಿಕೊಂಡು, ನಿರಂತರ ತಯಾರಿ ಮಾಡಬೇಕು. ಎಲ್ಲದಕ್ಕಿಂತ ಹೆಚ್ಚಾಗಿ ಈ ಪರೀಕ್ಷೆ ಬರೆಯುವವರಿಗೆ ತಾಳ್ಮೆ ಇರಬೇಕು. ಲೋಕ ಸೇವಾ ಆಯೋಗವು ನಾಗರೀಕ ಸೇವಾ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸುತ್ತದೆ.

ಈ ಮೂಲಕ ದೇಶದ ವಿವಿಧ ನಾಗರೀಕ ಸೇವಾ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸಲು ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಯು.ಪಿ. ಎಸ್.ಸಿ ಪರೀಕ್ಷೆ ಪ್ರಪಂಚದಲ್ಲಿಯೇ ಎರಡನೇ ಅತ್ಯಂತ ಕಠಿಣ ಪರೀಕ್ಷೆಯಾಗಿದ್ದು, ಇದರಲ್ಲಿ ತೇರ್ಗಡೆ ಹೊಂದುವವರ ಸಂಖ್ಯೆ ಬಹಳ ಕಡಿಮೆ. ಶೇ 0.1 ಮಂದಿ ಮಾತ್ರ ಈ ಪರೀಕ್ಷೆಗಳಲ್ಲಿ ಉತ್ತೀರ್ಣರಾಗುತ್ತಾರೆ. ಈ ಪರೀಕ್ಷೆಗಳಲ್ಲಿ ಉತ್ತೀರ್ಣರಾದವರು ಕೇಂದ್ರದಲ್ಲಿ ಮತ್ತು ರಾಜ್ಯಗಳಲ್ಲಿ ಸೇವೆ ಸಲ್ಲಿಸಬಹುದು. ಇದರಲ್ಲಿ ಅಭ್ಯರ್ಥಿಗಳ ಆಯ್ಕೆ ಒಟ್ಟು ಮೂರು ಹಂತಗಳಲ್ಲಿ ನಡೆಯುತ್ತದೆ.
ಎರಡು ಹಂತಗಳಲ್ಲಿ ಪರೀಕ್ಷೆ ನಡೆಸಿ ನಂತರ ಮೂರನೇ ಹಂತದಲ್ಲಿ ಸಂದರ್ಶನ ನಡೆಸುವ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುವುದು. ಪೂರ್ವಭಾವಿ ಪರೀಕ್ಷೆ ಮತ್ತು ಮುಖ್ಯ ಪರೀಕ್ಷೆ (ಪ್ರಿಲಿಮ್ಸ್ ಮತ್ತು ಮೈನ್ಸ್) ಗಳ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯುತ್ತದೆ. ಪ್ರತಿ ವರ್ಷ ಹನ್ನೆರಡರಿಂದ ಹದಿನೈದು ಸಾವಿರ ಮಂದಿ ಪರೀಕ್ಷೆ ತೆಗೆದುಕೊಳ್ಳುತ್ತಾರೆ. ಪೂರ್ವಭಾವಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ಅಭ್ಯರ್ಥಿಗಳು ಮುಖ್ಯ ಪರೀಕ್ಷೆ ಬರೆಯಲು ಅರ್ಹರಾಗಿರುತ್ತಾರೆ. ಮುಖ್ಯ ಪರೀಕ್ಷೆ ಪಾಸ್ ಆದ ಅಭ್ಯರ್ಥಿಗಳಿಗೆ ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುವುದು.
- ಪವಿತ್ರ