ವಾಷಿಂಗ್ಟನ್, ಜು. 24: ಅಮೆರಿಕದ ರಕ್ಷಣಾ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕೆನ್ ಅವರು ಜುಲೈ 27ರಿಂದ ಭಾರತ ಪ್ರವಾಸ ಆರಂಭಿಸಲಿದ್ದು, ಮಾನವ ಹಕ್ಕುಗಳು ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಗೆ ಸಂಬಂಧಿಸಿದ ವಿಷಯಗಳ ಕುರಿತು ಚರ್ಚಿಸುವರು ಎಂದು ಮೂಲಗಳು ಹೇಳಿವೆ.
ಭಾರತಕ್ಕೆ ಇದು ಬ್ಲಿಂಕೆನ್ ಅವರ ಮೊದಲ ಭೇಟಿಯಾಗಿದೆ. ಈ ಪ್ರವಾಸದ ಸಮಯದಲ್ಲಿ ಅವರು ಪ್ರಧಾನಿ ನರೇಂದ್ರ ಮೋದಿ, ವಿದೇಶಾಂಗ ಸಚಿವ ಎಸ್.ಜೈಶಂಕರ್ ಹಾಗೂ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೋಭಾಲ್ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ.
ಮಾನವ ಹಕ್ಕುಗಳು, ಪ್ರಜಾಪ್ರಭುತ್ವ ಮೌಲ್ಯಗಳ ರಕ್ಷಣೆಯಂತಹ ಮುಖ್ಯ ವಿಷಯಗಳಿಗೆ ಸಂಬಂಧಿಸಿ ಅಮೆರಿಕ ಹಾಗೂ ಭಾರತದ ನಿಲುವುಗಳು ಒಂದೇ ಆಗಿವೆ. ನಮಗೆ ಭಾರತ ಮಹತ್ವದ ಮಿತ್ರ ರಾಷ್ಟ್ರವಾಗಿದೆ ಎಂದು ದಕ್ಷಿಣ ಹಾಗೂ ಮಧ್ಯ ಏಷ್ಯಾ ರಾಷ್ಟ್ರಗಳ ವ್ಯವಹಾರಗಳ ವಿಭಾಗದ ಹಂಗಾಮಿ ಸಹಾಯಕ ಕಾರ್ಯದರ್ಶಿ ಡೀನ್ ಥಾಂಪ್ಸನ್ ತಿಳಿಸಿದರು.