Uttara kannada: ಕೆಲ ತಿಂಗಳುಗಳ ಹಿಂದೆ ನಡೆದ ಬೆಂಗಳೂರಿನ ರಾಮೇಶ್ವರಂ ಕೆಫೆ ಸ್ಪೋಟಕ ಪ್ರಕರಣ #RameshwaraCafeBlast ಹಾಗೂ ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣದ ಆರೋಪಿಗಳಿಗೆ ಪ್ರಚೋದನೆ ನೀಡುತ್ತಿದ್ದ ಆರೋಪದ ಮೇಲೆ ಉತ್ತರ ಕನ್ನಡ ಜಿಲ್ಲೆಯ ಬನವಾಸಿಯ ದಾಸನಕೊಪ್ಪದಲ್ಲಿನ ಅಬ್ದುಲ್ ಶುಕ್ಕೂರ್ ಎಂಬಾತನ ನಿವಾಸದ ಮೇಲೆ ಎನ್ಐಎ, ರಾಜ್ಯ ಗುಪ್ತಚರ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಇಂದುಬೆಳ್ಳಂ ಬೆಳಗ್ಗೆ ಏಕಾಏಕಿ ದಾಳಿ ನಡೆಸಿ ಭಯೋತ್ಪಾದಕ ಸಂಘಟನೆ ಜೊತೆ ಸಂಪರ್ಕ ಹೊಂದಿರುವ ಆರೋಪದ ಮೇಲೆ ಅಬ್ದುಲ್ ಸುಕ್ಕೂರ್ (Abdul Sukkur) ಅವರನ್ನು ಎನ್ಐಎ ವಶಕ್ಕೆ ಪಡೆದುಕೊಂಡಿದೆ.ಅಬ್ದುಲ್ ಸುಕ್ಕೂರ್ ಬನವಾಸಿಯ ದಾಸನಕೊಪ್ಪದಲ್ಲಿರುವ ನಿವಾಸಿಯಾಗಿದ್ದಾರೆ. ಅಬ್ದುಲ್ ಸುಕ್ಕೂರ್ ದುಬೈನಲ್ಲಿ ಕೆಲಸ ಮಾಡುತಿದ್ದು ಬಕ್ರೀದ್ ಹಬ್ಬ ಹಿನ್ನೆಲೆಯಲ್ಲಿ ಗ್ರಾಮಕ್ಕೆ ಆಗಮಿಸಿದ್ದರು. ಹಬ್ಬದ ಸಂಭ್ರಮ ಮುಗಿಸಿ ಮತ್ತೆ ವಾಪಸ್ಸಾಗಬೇಕು ಎನ್ನುವ ಸಂದರ್ಭದಲ್ಲಿ ಈ ದಾಳಿ ನಡೆದಿದೆ.
ಇದೇ ವೇಳೆ, ಪಾಸಪೊರ್ಟ್ಗೆ (Passport) ನಕಲಿ ದಾಖಲೆ ನೀಡಿರುವ ಬಗ್ಗೆ ದೃಢವಾಗಿದೆ. ಅಬ್ದುಲ್ ಸುಕ್ಕೂರ್ ಆನ್ಲೈನ್ ಮೂಲಕ ಭಯೋತ್ಪಾದಕ ಸಂಘಟನೆ ಜೊತೆ ಸಂಪರ್ಕ ಹಾಗೂ ಪಾಸ್ ಪೋರ್ಟ್ಗೆ ನಕಲಿ ದಾಖಲೆಗಳನ್ನು ನೀಡಿದ ಬಗ್ಗೆ ಎನ್ಐಎ (NIA) ಮಾಹಿತಿ ಪಡೆದುಕೊಂಡಿದೆ.ಅಬ್ದುಲ್ ಶುಕ್ಕೂರ್ ನಿಷೇಧಿತ ಪಿಎಫ್‌ಐ (PFI) ಸಂಘಟನೆಯ ಸದಸ್ಯನಾಗಿದ್ದಾನೆ. ಅಬ್ದುಲ್ ಸುಕ್ಕೂರ್ ವಿರುದ್ಧ ಭಯೋತ್ಪಾದನಾ ಚಟುವಟಿಕೆಗೆ ಪ್ರಚೋದನೆ ನೀಡಿರುವ ಆರೋಪ ಕೇಳಿಬಂದಿದೆ. ಹಾಗಾಗಿ ಶಿರಸಿ ಹಾಗೂ ಬನವಾಸಿ ಪೊಲೀಸರ ಸಹಕಾರದಿಂದ NIA ಅಧಿಕಾರಿಗಳು ದಾಳಿ ಮಾಡಿ, ಆರೋಪಿಯನ್ನು ವಶಕ್ಕೆ ಪಡೆದುಕೊಂಡು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.