ಲಕ್ನೋ : ಉತ್ತರ ಪ್ರದೇಶದಲ್ಲಿ ಚುನಾವಣಾ ಬಿಸಿ ಏರುತ್ತಿದ್ದು, ಕೋವಿಡ್ ಕಾರಣದಿಂದ ಎಲ್ಲಾ ಪಕ್ಷಗಳು ತೆರೆ ಮರೆಯಲ್ಲಿ ಪ್ರಚಾರ ನಡೆಸುತ್ತಿದ್ದಾರೆ. ಏನೇ ಆದರೂ ಕೂಡ ಉತ್ತರ ಪ್ರದೇಶದ ವಿಧಾನ ಸಭೆ ಚುನಾವಣೆಯಲ್ಲಿ ಒಬಿಸಿ (ಇತರೆ ಹಿಂದುಳಿದ ವರ್ಗ) ಮತಗಳು ನಿರ್ಣಾಯಕವಾಗಿದ್ದು, ಈ ಸಮುದಾಯದ ಮತ ಬೇಟೆಯಾಡಲು ಎಲ್ಲಾ ಪಕ್ಷಗಳೂ ಜಿದ್ದಾ ಜಿದ್ದಿ ನಡೆಸುತ್ತಿವೆ. ಮೂಲಗಳ ಪ್ರಕಾರ ಉತ್ತರ ಪ್ರದೇಶದ ಒಟ್ಟು ಜನಸಂಖ್ಯೆಯಲ್ಲಿ ಒಬಿಸಿ ಸಮುದಾಯಗಳ ಪಾಲು ಶೇ.54.5 ರಷ್ಟಿದೆ. ಅರ್ಧಕ್ಕಿಂತ ಹೆಚ್ಚಿರುವ ಈ ಸಮುದಾಯಗಳ ಮನ ಗೆಲ್ಲುವ ಪಕ್ಷ ಅಧಿಕಾರದ ಗದ್ದುಗೆ ಏರುತ್ತದೆ. ಒಬಿಸಿ ವಿರೋಧ ಕಟ್ಟಿಕೊಂಡ ಪಕ್ಷ ಎರಡಂಕಿ ದಾಟುವುದು ಕಷ್ಟ. ಅದು ಹಿಂದಿನ ಚುನಾವಣೆಗಳಲ್ಲಿ ಸಾಬೀತಾಗಿದೆ.

ಒಬಿಸಿ ಮತಗಳ ಪ್ರಭಾವ ಎಷ್ಟಿದೆ ಎಂದರೆ 2017ರ ವಿಧಾನಸಭೆ ಮತ್ತು 2019ರ ಲೋಕಸಭೆ ಚುನಾವಣೆಯಲ್ಲಿ ಈ ಮತಗಳೇ ನಿರ್ಣಾಯಕ ಪಾತ್ರ ವಹಿಸಿದ್ದವು. ಒಬಿಸಿ ಮತಗಳು ಬಿಜೆಪಿಯ ಕೈಹಿಡಿದಿದ್ದರಿಂದ ಎರಡೂ ಕಡೆ ಬಿಜೆಪಿ ಅಧಿಕಾರದ ಗದ್ದುಗೆ ಏರುವಲ್ಲಿ ಯಶಸ್ವಿಯಾಯಿತು.
ಉತ್ತರ ಪ್ರದೇಶದಲ್ಲಿ ರಾಜಕೀಯ ಪಕ್ಷಗಳ ಗೆಲುವಿಗೆ ಒಬಿಸಿ ಮತಗಳೇ ನಿರ್ಣಾಯಕ ಪಾತ್ರ ವಹಿಸಿದ್ದು. ಹೆಚ್ಚು ಒಬಿಸಿ ಶಾಸಕರನ್ನು ಹೊಂದಿದ ಪಕ್ಷ ಇಲ್ಲಿ ಅಧಿಕಾರ ಹಿಡಿಯುತ್ತದೆ. ಪ್ರಸ್ತುತ ಬಿಜೆಪಿ 102 ಒಬಿಸಿ ಶಾಸಕರನ್ನು ಹೊಂದಿದೆ.
ಒಬಿಸಿ ಕೈ ಕೊಟ್ಟರೆ ಸೋಲು ಖಚಿತ :

2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ದೊಡ್ಡ ವೋಟ್ ಬ್ಯಾಂಕ್ ಆಗಿದ್ದ ಒಬಿಸಿ ಸಮುದಾಯ, ದಾರಾಸಿಂಗ್ ಚೌಹಾಣ್, ನೋನಿಯಾ ಒಬಿಸಿ ಸಮುದಾಯಕ್ಕೆ ಸೇರಿದವರು. 2017ರಲ್ಲಿ ದಾರಾಸಿಂಗ್ ಚೌಹಾಣ್, ಬಿಎಸ್ಪಿ ತ್ಯಜಿಸಿ ಬಿಜೆಪಿ ಸೇರಿದವರು. ಈಗ ಎಸ್ಪಿ ಸೇರಿದ್ದಾರೆ. ಬಿಎಸ್ಪಿಯಲ್ಲಿದ್ದಾಗ 1996ರಲ್ಲಿ ರಾಜ್ಯಸಭೆಗೆ ಆಯ್ಕೆಯಾಗಿದ್ದರು. 2004ರಲ್ಲಿ ಎಸ್ಪಿ ಸೇರಿ ಲೋಕಸಭೆಗೆ ಸ್ಪರ್ಧಿಸಿದ್ದರು. ಬಳಿಕ ಮತ್ತೆ ಬಿಎಸ್ಪಿಗೆ ವಾಪಸ್ ಹೋಗಿದ್ದರು. 2009ರಲ್ಲಿ ಗೋಸಿ ಲೋಕಸಭಾ ಕ್ಷೇತ್ರದಿಂದ ಬಿಎಸ್ಪಿ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ್ದರು. 2014ರ ಮೋದಿ ಅಲೆಯಲ್ಲಿ ದಾರಾಸಿಂಗ್ ಚೌಹಾಣ್ ಸೋಲು ಅನುಭವಿಸಿದ್ದರು. 2017ರಲ್ಲಿ ಬಿಜೆಪಿ ಸೇರಿದ್ದ ದಾರಾಸಿಂಗ್ ಚೌಹಾಣ್ರನ್ನು ಪಕ್ಷದ ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷರನ್ನಾಗಿ ನೇಮಿಸಲಾಗಿತ್ತು. ಈಗ ದಾರಾಸಿಂಗ್ ಚೌಹಾಣ್ ಸಹಾಯದಿಂದ ನೋನಿಯಾ ಅವರನ್ನು ಪಕ್ಷದತ್ತ ಸೆಳೆಯಲು ಅಖಿಲೇಶ್ ಯಾದವ್ ಯತ್ನಿಸುತ್ತಿದ್ದಾರೆ.