ದಕ್ಷಿಣ ಪದವೀಧರರ ಕ್ಷೇತ್ರದ ಚುನಾವಣೆ ಪ್ರಚಾರ ಕಾರ್ಯಕ್ಕಾಗಿ ಮೈಸೂರಿನ(Mysuru) ಖಾಸಗಿ ಹೊಟೇಲ್ನಲ್ಲಿ ನಡೆದ ಸಭೆಯಲ್ಲಿ ವಸತಿ ಸಚಿವ ವಿ.ಸೋಮಣ್ಣ(V Somanna) ವಿಜಯೇಂದ್ರ(Vijayendra) ಅವರ ಬೆಂಬಲಿಗರ ವಿರುದ್ದ ಗರಂ ಆದ ಘಟನೆ ನಡೆದಿದೆ.
ಬಿಜೆಪಿ ಕಾರ್ಯಕರ್ತರ(BJP Workers) ಸಭೆಯಲ್ಲಿ ವಿ.ಸೋಮಣ್ಣ ಮಾತನಾಡುತ್ತಿದ್ದಾಗಲೇ, ವಿಜಯೇಂದ್ರ ಬೆಂಬಲಿಗರು ‘ಮುಂದಿನ ಸಿಎಂ’ ‘ರಾಜಾಹುಲಿ’ ಎಂದು ಘೋಷಣೆ ಕೂಗುತ್ತಿದ್ದರು. ಇದರಿಂದ ಸಿಟ್ಟಾದ ಸೋಮಣ್ಣ “ಸುಮ್ಮನಿರಿ, ವಿಜಯೇಂದ್ರನ ಹಣೆಬರಹದಲ್ಲಿ ಏನು ಬರೆದಿದೆಯೋ ಅದೇ ಆಗುತ್ತಾನೆ” ಎಂದು ಪದೇ ಪದೇ ಹೇಳಿದರು ಕಾರ್ಯಕರ್ತರ ಕಿರುಚಾಟ ನಿಲ್ಲಲಿಲ್ಲ. “ಇದು ಪಕ್ಷದ ಚುನಾವಣಾ ಸಭೆ. ಈ ಸಭೆಗೆ ನಿಯಮಗಳಿವೆ. ಇಲ್ಲಿ ಯಾರನ್ನೂ ಅವಹೇಳನ ಮಾಡಬೇಡಿ. ನಿಮಗೆ ಚರ್ಚೆ ಮಾಡಬೇಕೆಂದರೆ ಬೇರೆಡೆ ಸಭೆ ಸೇರಿ ಚರ್ಚೆ ನಡೆಸೋಣ.
ದಯಮಾಡಿ ಈಗ ಸುಮ್ಮನಿದ್ದು, ಪಕ್ಷದ ಅಭ್ಯರ್ಥಿ ಗೆಲುವಿಗೆ ಶ್ರಮಿಸೋಣ” ಎಂದು ಸೋಮಣ್ಣ ಮನವಿ ಮಾಡಿದರೂ ಗದ್ದಲ ನಿಲ್ಲಲಿಲ್ಲ. ಇದರಿಂದ ಸಿಟ್ಟಾದ ಸೋಮಣ್ಣ “ನನಗೆ ಈಗ 71 ವರ್ಷ. 42 ವರ್ಷಗಳಿಂದ ರಾಜಕೀಯದಲ್ಲಿದ್ದೇನೆ. 5 ಬಾರಿ ಶಾಸಕನಾಗಿ, 2 ಬಾರಿ ವಿಧಾನಪರಿಷತ್ ಸದಸ್ಯನಾಗಿ, 6 ಬಾರಿ ಮಂತ್ರಿಯಾಗಿ ಕೆಲಸ ಮಾಡಿದ್ದೇನೆ. ನನಗೆ ಗೌರವ ಕೊಡಿ. ನೀವು ಮೊದಲು ಸರಿಯಾಗಿ ಎಂದು ಕಾರ್ಯಕರ್ತರ ವಿರುದ್ದ ಅಸಮಾಧಾನ ಹೊರಹಾಕಿದರು.
ವಿಜಯೇಂದ್ರನನ್ನು ಹರಕೆ ಕುರಿ ಮಾಡಬೇಡಿ. ಆತ ಎಂಎಲ್ಸಿ ಆಗಬೇಕೆಂದು ಬಯಸಿದವರಲ್ಲಿ ನಾನು ಮೊದಲಿಗ. ಭವಿಷ್ಯದಲ್ಲಿ ವಿಜಯೇಂದ್ರನಿಗೆ ಪಕ್ಷ ಒಳ್ಳೆಯ ಸ್ಥಾನಮಾನ ನೀಡುತ್ತದೆ. ಈ ಬಗ್ಗೆ ಕಾರ್ಯಕರ್ತರು ಸಂಯಮ ಕಾಪಾಡಿಕೊಳ್ಳಬೇಕು. ಪಕ್ಷದ ಸಭೆಯಲ್ಲಿ ಈ ರೀತಿಯಾಗಿ ವರ್ತಿಸುವುದು ಶೋಭೆಯಲ್ಲ ಎಂದು ಕಾರ್ಯಕರ್ತರಿಗೆ ಬುದ್ದಿವಾದ ಹೇಳಿದರು.