ಬೆಂಗಳೂರು ಡಿ15 : ತಮಿಳುನಾಡಿನ ಕೂನೂರು ಬಳಿ ಸಂಭವಿಸಿದ್ದ ಹೆಲಿಕಾಪ್ಟರ್ ದುರಂತದಲ್ಲಿ ತೀವ್ರವಾಗಿ ಗಾಯಗೊಂಡಿದ್ದು ಬುಕುಳಿದಿದ್ದ ಬದುಕುಳಿದಿದ್ದ ಯೋಧ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ (39) ಇಂದು ಸೇನಾ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ತೀವ್ರ ಸುಟ್ಟ ಗಾಯಗಳಿಂದ ಬಳಲುತ್ತಿದ್ದ ಯೋಧ ಜೀವಂತ ಮರಳಿ ಬರಲಿ ಎಂಬ ಪ್ರಾರ್ಥನೆಗಳು ಫಲಿಸಲಿಲ್ಲ. ಬೆಂಗಳೂರಿನ ಸೇನಾ ಕಮಾಂಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವರುಣ್ ಸಿಂಗ್ ಅವರು ಬುಧವಾರ ಬೆಳಿಗ್ಗೆ ವಿಧಿವಶರಾಗಿದ್ದಾರೆ.
‘ಕೆಚ್ಚೆದೆಯ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಅವರ ನಿಧನದ ಸುದ್ದಿಯನ್ನು ತಿಳಿಸಲ IAF ದುಃಖಿಸುತ್ತದೆ. ಡಿ. 8ರಂದು ಸಂಭವಿಸಿದ ಹೆಲಿಕಾಪ್ಟರ್ ಅಪಘಾತದಲ್ಲಿ ಗಾಯಗಳಿಂದ ಬಳಲುತ್ತಿದ್ದ ಅವರು ಇಂದು ಬೆಳಿಗ್ಗೆ (ಡಿ. 15) ನಿಧನರಾಗಿದ್ದಾರೆ. ಅವರ ಕುಟುಂಬಕ್ಕೆ ಐಎಎಫ್ ತೀವ್ರ ಸಂತಾಪ ವ್ಯಕ್ತಪಡಿಸುತ್ತಿದೆ ಮತ್ತು ಅವರ ಜತೆಗೆ ಇರಲಿದೆ’ ಎಂದು ಭಾರತೀಯ ವಾಯುಪಡೆ ಟ್ವೀಟ್ ಮಾಡಿದೆ
ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ತಂದೆ ಕರ್ನಲ್ (ನಿವೃತ್ತ) ಕೆ. ಪಿ. ಸಿಂಗ್. ಸೇನೆಯ ಎಎಡಿ ವಿಭಾಗದಲ್ಲಿ ಕೆಲಸ ಮಾಡಿ ನಿವೃತ್ತರಾಗಿದ್ದಾರೆ. ಅವರ ಸಲಹೆಯಂತೆಯೇ ತಮಿಳುನಾಡಿನಿಂದ ವರುಣ್ ಸಿಂಗ್‌ರನ್ನು ಬೆಂಗಳೂರಿಗೆ ಹೆಚ್ಚಿನ ಚಿಕಿತ್ಸೆಗೆ ಕರೆತರಲಾಗಿತ್ತು
ವರುಣ್ ಸಿಂಗ್ ಸಹೋದರ ಲೆಫ್ಟಿನೆಂಟ್ ಕರ್ನಲ್ ತಂಜು ಸಿಂಗ್ ಭಾರತೀಯ ನೌಕಾಪಡೆಯಲ್ಲಿದ್ದಾರೆ. ವರುಣ್ ಸಿಂಗ್ ಮೊದಲು ಬೆಂಗಳೂರಿನಲ್ಲಿರುವ ವಾಯುಪಡೆಯ ತರಬೇತಿ ಶಿಬಿರದಲ್ಲಿ ಪರೀಕ್ಷಾ ಪೈಲೆಟ್ ಆಗಿದ್ದರು. ಹಗುರ ಯುದ್ಧ ವಿಮಾನ ತೇಜಸ್ ನಿರ್ವಹಣೆ ನೋಡಿಕೊಳ್ಳುತ್ತಿದ್ದರು