ಬೆಂಗಳೂರು ಡಿ 27 : ಎಂಇಎಸ್ ನಿಷೇಧಿಸಬೇಕೆಂದು ವಿವಿಧ ಸಂಘಟನೆಗಳು ಕರೆ ನೀಡಿದ್ದ ಬಂದ್ ಅನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ವಟಾಳ್ ನಾಗರಾಜ್ ತಿಳಿಸಿದ್ದಾರೆ. ಎಂಇಎಸ್ ಪುಂಡಾಟಿಕೆ ಖಂಡಿಸಿ ಕನ್ನಡ ಪರ ಸಂಘಟನೆಗಳಿಂದ ಡಿಸೆಂಬರ್ 31, ಕರ್ನಾಟಕ ಬಂದ್ ಗೆ ( Karnataka Bundh ) ಕರೆ ನೀಡಲಾಗಿದೆ. ಈ ಬಂದ್ ಬಗ್ಗೆ ಅನೇಕರು ವಿರೋಧ ವ್ಯಕ್ತ ಪಡಿಸ್ತಾ ಇದ್ದಾರೆ. ಇದರ ನಡುವೆಯೂ ಕರ್ನಾಟಕ ಬಂದ್ ಮಾಡೇ ಮಾಡ್ತೀವಿ. ಇದನ್ನ ಯಾರಿಂದಲೂ ತಡೆಯೋದಕ್ಕೆ ಆಗೋದಿಲ್ಲ ಎಂಬುದಾಗಿ ಕನ್ನಡ ಚಳುವಳಿ ಪಕ್ಷದ ವಾಟಾಳ್ ನಾಗರಾಜ್ ( Vatal Nagaraj ) ತಿಳಿಸಿದ್ದಾರೆ.
ನಗರದಲ್ಲಿ ಇಂದು ಕರ್ನಾಟಕ ಬಂದ್ ಗೆ ಬೆಂಬಲಿಸುವಂತೆ ಮಲ್ಲೇಶ್ವರಂ ಸರ್ಕಲ್ ನಲ್ಲಿ ಉರುಳು ಸೇವೆ ನಂತ್ರ, ಮೆರವಣಿಗೆಯಲ್ಲಿ ಕ್ಷೇತ್ರದ ಜನತೆಯನ್ನು ಕರ್ನಾಟಕ ಬಂದ್ ಗೆ ಬೆಂಬಲಿಸುವಂತೆ ಮನವಿ ಮಾಡಿದರು.
ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಡಿಸೆಂಬರ್ 31ರಂದು ನಾವು ಕರೆ ನೀಡಿರುವಂತ ಕರ್ನಾಟಕ ಬಂದ್ ಸಂಪೂರ್ಣವಾಗಿ ಯಶಸ್ವಿಯಾಗಲಿದೆ. ರಾಜ್ಯಾಧ್ಯಂತ 1,800 ಸಂಘಟನೆಗಳು ಕರ್ನಾಟಕ ಬಂದ್ ಗೆ ಬೆಂಬಲ ನೀಡಿದ್ದಾವೆ. ಮಾಜಿ ಸಿಎಂ ಸಿದ್ಧರಾಮಯ್ಯ ಕೂಡ ಬಹಿರಂಗವಾಗೇ ಬೆಂಬಲ ನೀಡಿದ್ದಾರೆ ಎಂದರು.
ಡಿಸೆಂಬರ್ 31ರಂದು ನಡೆಸಲಾಗುತ್ತಿರುವಂತ ಕರ್ನಾಟಕ ಬಂದ್ ಎಂಇಎಸ್ ಪುಂಡಾಟಿಕೆ ವಿರುದ್ಧವಾಗಿಯೇ ಹೊರತು, ಪ್ರತಿಷ್ಠೆಗಾಗಿ ನಡೆಸುತ್ತಿರುವಂತ ಬಂದ್ ಅಲ್ಲವೇ ಅಲ್ಲ. ಕರ್ನಾಟಕ ಬಂದ್ ಯಾರಿಂದಲೂ ನಿಲ್ಲಿಸೋಕೆ ಆಗೋದಿಲ್ಲ. ಈ ಬಂದ್ ತಡೆಯೋರು ಯಾರು ಎಂದು ಗರಂ ಆಗೇ ನುಡಿದರು.