Visit Channel

ವಿಜಯ ದಶಮಿಯ ಹಿನ್ನಲೆಯೇನು? ಆಚರಣೆಯ ರಹಸ್ಯವೇನು? ಮಾಹಿತಿ ಇಲ್ಲಿದೆ…

images (13)

ಇಂದು ಆಶ್ವಯುಜ ಮಾಸದ ಶುಕ್ಲ ದಶಮಿ, ಇವತ್ತಿನ ವಿಶೇಷತೆ ಎಂದರೆ ವಿಜಯ ದಶಮಿ. ನವರಾತ್ರಿಯ ಕೊನೆಯ ದಿನವಾದ ಇಂದು ಬಿಜೋಯಾ ದಶಮಿ ಅಥವಾ ವಿಜಯ ದಶಮಿ ಎಂದು ಕರೆಯುತ್ತಾರೆ. ದುರ್ಗಾ ದೇವಿಯ ಹಬ್ಬವನ್ನು ಭಾರತದಾದ್ಯಂತ ವಿವಿಧ ಹೆಸರುಗಳಲ್ಲಿ ಆಚರಿಸುತ್ತಾರೆ. ಹಿಂದೂಗಳ ಪ್ರಮುಖ ಹಬ್ಬಗಳಲ್ಲಿ ಒಂದಾದ ದುರ್ಗಾ ಪೂಜೆಯನ್ನು ಭಾರತದ ಪೂರ್ವ ಭಾಗದಲ್ಲಿ ಪ್ರಮುಖ ಉತ್ಸವವನ್ನಾಗಿ ಆಚರಿಸುತ್ತಾರೆ. ಪಶ್ಚಿಮ ಬಂಗಾಳದಲ್ಲಿ ಈ ಹಬ್ಬದ ರೂಪದಲ್ಲಿ ಬಹಳ ಅದ್ದೂರಿಯಾಗಿ ಆಚರಿಸುತ್ತಾರೆ. ಮುಂಬೈ ಗಣೇಶ ಪೂಜೆಗೆ ಹೆಸರಾದಂತೆಯೇ ಕೋಲ್ಕತ್ತಾ ದುರ್ಗಾ ಪೂಜೆಗೆ ಪ್ರಸಿದ್ಧಿ ಪಡೆದಿದೆ. ಈ ಶ್ರೇಷ್ಠ ಹಬ್ಬ ಅಥವಾ ಉತ್ಸವದ ಆಚರಣೆಯ ಹಿಂದೆ ಅನೇಕ ಪುರಾಣ ಕಥೆಗಳ ನಂಟಿದೆ.
ಮಹಿಷಾಸುರನ ವಧಿಸಿ ವಿಜಯ ಸಾಧಿಸಿದ ಕಥೆ:
ಸ್ಕಂದ ಪುರಾಣದ ಪ್ರಕಾರ ಆದಿಶಕ್ತಿಯು ಮಹಿಷಾಸುರನ ಆರ್ಭಟಕ್ಕೆ ಅಂತ್ಯವಾಡಲು ನಿರ್ಧರಿಸಿ. ಅವನೊಂದಿಗೆ ಹೋರಾಟಕ್ಕೆ ಇಳಿದಳು. ಆಗ ಆ ಮಹಾಯುದ್ಧವು ಒಂಬತ್ತು ದಿನಗಳ ಕಾಲ ನಡೆಯಿತು. ಹತ್ತನೆಯ ದಿನ ಆತ ಆ ತಾಯಿಯ ಎದುರು ತನ್ನ ಪೌರುಷ ತಡೆಯದೆ ಹತನಾದನು. ಅದೇ ನೆನಪಿಗೆ ವಿಜಯ ದಶಮಿ ಎಂದು ಆಚರಿಸಲಾಗುತ್ತದೆ. ತನ್ನ ಮಕ್ಕಳನ್ನು ಕಾಪಾಡಲು ಮತ್ತು ಅವರ ಸಂಕಟವನ್ನು ನಿವಾರಿಸಲು ಆ ತಾಯಿ ಅವತಾರ ಎತ್ತಿ ಬಂದು ಹೋರಾಡಿದ ನೆನಪಿಗೆ ನಾವು ಈ ಹಬ್ಬವನ್ನು ಆಚರಿಸುತ್ತೇವೆ.
ರಾವಣನ ಮೇಲೆ ಶ್ರೀರಾಮನ ವಿಜಯ:
ವಿಜಯದಶಮಿಯನ್ನು ರಾವಣನ ಮೇಲೆ ಶ್ರೀರಾಮಚಂದ್ರನು ಸಾಧಿಸಿದ ವಿಜಯದ ನೆನಪಿಗಾಗಿ ಸಹ ಆಚರಿಸಲಾಗುತ್ತದೆ. ಸೀತಾ ಮಾತೆಯನ್ನು ಲಂಕೆಯಿಂದ ಬಿಡಿಸಿಕೊಂಡು ಹೋಗಲು ಬಂದ ಶ್ರೀರಾಮನು ರಾವಣನನ್ನು ಸಂಹರಿಸುತ್ತಾನೆ. ಇದರ ನೆನಪಿನಾರ್ಥವಾಗಿ ರಾವಣನ ಪ್ರತಿಕೃತಿಗಳನ್ನು ದಹನ ಮಾಡುತ್ತಾರೆ. ಇದು ಕೆಟ್ಟದ್ದರ ವಿರುದ್ಧ ಒಳ್ಳೆಯದು ಗೆಲುವು ಸಾಧಿಸಿದ ಧ್ಯೋತಕ ಎಂದು ನಂಬಲಾಗುತ್ತದೆ. ರಾವಣನಿಗೆ ಹತ್ತು ತಲೆಗಳು ಇದ್ದವು. ಇವೆಲ್ಲವೂ ರಾವಣನಿಗೆ ಅಸಾಧ್ಯವಾದ ಅಹಂ ಅನ್ನು ನೀಡಿದ್ದವು. ಈ ಹತ್ತು ತಲೆಗಳನ್ನು ಸಂಹರಿಸಿದ ದಿನವೇ “ದಶ ಹರ” ಎಂದು ಕರೆಯಲ್ಪಟ್ಟಿತು. ಮುಂದೆ ಇದೇ ಜನರ ಬಾಯಲ್ಲಿ ದಸರಾ ಎಂದು ಬದಲಾಯಿತು. ಅಹಂ ಅನ್ನು ಓಡಿಸುವ ದಿನ ಇದು ಎಂದು ಸಹ ಕರೆಯಲ್ಪಡುತ್ತದೆ.
ಪಾಂಡು ಪುತ್ರರ ವನವಾಸ ಅಂತ್ಯಗೊಂಡಿದ್ದು:
ಮಹಾಭಾರತದಲ್ಲಿ ಪಾಂಡವರ ಅಜ್ಞಾತವಾಸವು ಅಂತ್ಯಗೊಂಡ ದಿನವೇ “ವಿಜಯದಶಮಿ”. ಕೌರವರ ಜೊತೆಗೆ ನಡೆದ ಪಗಡೆಯಾಟದಲ್ಲಿ ಸೋತು, ನಿಯಮದ ಪ್ರಕಾರ ಹನ್ನೆರಡು ವರ್ಷಗಳ ವನವಾಸ ಮತ್ತು ಒಂದು ವರ್ಷದ ಅಜ್ಞಾತ ವಾಸವನ್ನು ಮಾಡಿದ ಪಾಂಡವರು, ತಮ್ಮ ಅಜ್ಞಾತವಾಸವನ್ನು ಮುಗಿಸಿ, ತಮ್ಮ ರಾಜ್ಯವನ್ನು ತಮಗೆ ನೀಡಿರಿ ಎಂದು ಕೇಳಲು ಬಂದರು. ಆ ಕ್ರಿಯೆಗೆ ಮುನ್ನುಡಿ ಹಾಡಿದ ವಿರಾಟನ ಗೋಗ್ರಹಣಕ್ಕೆ ಪ್ರತಿಯಾಗಿ ಯುದ್ಧವೊಂದು ನಡೆಯಿತು. ಆ ಯುದ್ಧ ನಡೆದಿದ್ದು ವಿಜಯದಶಮಿಯಂದು.
ವಿಜಯದಶಮಿಯ ಆಚರಣೆಗಳು:
ಉತ್ತರ ಭಾರತದಲ್ಲಿ ಆಶ್ವಯುಜ ಮಾಸದ ಮೊದಲ ದಿನದಂದು ಬಾರ್ಲಿ ಬೀಜಗಳನ್ನು ಮಣ್ಣಿನ ಮಡಿಕೆಯಲ್ಲಿ ಹಾಕಿಡುತ್ತಾರೆ. ವಿಜಯದಶಮಿಯ ದಿನ ಮೊಳಕೆಗಳು ಬಂದಿರುವ ಈ ಬಾರ್ಲಿಗಳನ್ನು ತೆಗೆದುಕೊಂಡು ಹೋಗಿ ನೆಡುತ್ತಾರೆ. ಅವರ ಪ್ರಕಾರ ಇವು ಅದೃಷ್ಟವನ್ನು ತರುವ ಸಸಿಗಳಾಗಿರುತ್ತವೆಯಂತೆ. ಇವನ್ನು “ನೊರಾತ್ರಗಳು” ಎಂದು ಕರೆಯುತ್ತಾರೆ. ಅಂದರೆ, ಒಂಬತ್ತು ರಾತ್ರಿಯಷ್ಟು ವಯಸ್ಸಾದವು ಎಂದು ಹೆಸರು.
ಕೆಟ್ಟದ್ದರ ವಿರುದ್ಧ ಒಳ್ಳೆಯದು ಸಾಧಿಸಿದ ಗೆಲುವನ್ನು ಆಚರಿಸಲು ವಿಜಯದಶಮಿಯನ್ನು ಆಚರಿಸಲಾಗುತ್ತದೆ. ಯಾವುದೇ ಧರ್ಮ, ಮತಗಳ ಭೇದವಿಲ್ಲದೆ ಹಲವರು ಈ ಹಬ್ಬವನ್ನು ಆಚರಿಸುತ್ತಾರೆ. ಎಲ್ಲರಿಗೂ ಸಿಹಿಗಳನ್ನು ಹಂಚಿ ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ. ಶಾಂತಿ ಮತ್ತು ಸೌಹಾರ್ದತೆಯ ಜೊತೆಗೆ ಸಂಪತ್ತನ್ನು ಕರುಣಿಸು ಎಂದು ದೇವಿಯನ್ನು ಪ್ರಾರ್ಥಿಸುತ್ತಾರೆ. ಜೊತೆಗೆ ಸುಗ್ಗಿಯ ಕಾಲವನ್ನು ಬರಮಾಡಿಕೊಳ್ಳಲು ಈ ಹಬ್ಬದಲ್ಲಿ ಪ್ರಾರ್ಥನೆಯನ್ನು ಮಾಡುತ್ತಾರೆ.

ಈ ವರ್ಷ ಕೊರೋನವನ್ನೂ ಮರ್ದಿಸಿ ಜನರನ್ನು ಕಾಪಾಡಬೇಕು ಎನ್ನುವುದು ಎಲ್ಲರ ಬೇಡಿಕೆ, ಆಶಯವಾಗಿದೆ.

Latest News

E-Shram Card
ಪ್ರಮುಖ ಸುದ್ದಿ

ಇ-ಶ್ರಮ ಕಾರ್ಡ್ ಉಪಯೋಗದ ಬಗ್ಗೆ ನಿಮಗೆ ತಿಳಿದಿಲ್ಲವೆ ?  

ಅಸಂಘಟಿತ ವಲಯದ ಕಾರ್ಮಿಕರಿಗೆ  ಸಂಪೂರ್ಣವಾಗಿ  ವೃತ್ತಿ ಮಾಹಿತಿ  ಮತ್ತು   ಸರ್ಕಾರದ  ಯೋಜನೆಗಳು  ಕಾರ್ಮಿಕರಿಗೆ ನೇರವಾಗಿ ತಲುಪಿಸುವ ,ಹಾಗೂ ದತ್ತಾಂಶ ಸಂಗ್ರಹಿಸುವ ಉದ್ದೇಶದಿಂದ 26  ಆಗಸ್ಟ್‌  2021 ರಂದು  ಕೇಂದ್ರ ಸರ್ಕಾರವು ಈ ಯೋಜನೆಯನ್ನು  ಜಾರಿಗೊಳಿಸಿದೆ. 

inflation
ದೇಶ-ವಿದೇಶ

ಅಗತ್ಯ ವಸ್ತುಗಳ ಬೆಲೆ ತಗ್ಗಿದ ಪರಿಣಾಮ: ಜುಲೈನಲ್ಲಿ ಚಿಲ್ಲರೆ ಹಣದುಬ್ಬರ ಶೇ.6.7 ಇಳಿಕೆ ನಿರೀಕ್ಷೆ

ಅಂದು 100 ರೂಪಾಯಿಗೆ ಖರೀದಿಸುವ ಸಾಮಾನು ಈಗ 500 ಕೊಟ್ಟರು ಬರುವುದಿಲ್ಲ. ಕಾರಣ ಹಣದ ಮೌಲ್ಯ ಕಡಿಮೆಯಾಗಿದೆ, ಈ ಹಣದ ಮೌಲ್ಯ ಕಡಿಮೆಯಾಗಿರುವುದನ್ನೇ ನಾವು ಹಣದುಬ್ಬರ ಎನ್ನುತ್ತೇವೆ.