ಮೈಸೂರು, ಮೇ. 19: ರಾಜ್ಯ ಸರ್ಕಾರದ ವಿರುದ್ಧ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಬಿಜೆಪಿ ಎಂಎಲ್ಸಿ ವಿಶ್ವನಾಥ್, ರಾಜ್ಯ ಸರ್ಕಾರ ಹೆಣದ ಮೇಲೆ ಹಣ ಮಾಡುವುದು ಸರಿಯಲ್ಲ ಎಂದು ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರದ ಎಲ್ಲಾ ಪವರ್ ವಿಜೇಂದ್ರ ಬಳಿ ಇದ್ದು, ಸರ್ಕಾರದ ಆಡಳಿತ ಕೇಂದ್ರೀಕರಣ ಆಗಿದೆ. ಎಲ್ಲವೂ ಪರ್ಸೆಂಟೆಂಜ್ಗಾಗಿ ಮಾಡಿಕೊಂಡಿರೋದಾಗಿದೆ. ರಾಜ್ಯದ ಯಾವುದೇ ಡಿಸಿಗಳಿಗೂ 10 ಪೈಸೆ ಖರ್ಚು ಮಾಡೋ ಪವರ್ಸ್ ಇಲ್ಲ. ಜತೆಗೆ ಜಿಲ್ಲಾ ಮಂತ್ರಿಗು ಕೂಡ ಆ ಪವರ್ ಇಲ್ಲ. ಹೀಗಾಗಿ ಯಾವುದೇ ಬಿಲ್ ಪಾಸಾಗಬೇಕಾದರೆ ಬೆಂಗಳೂರಿಗೆ ಹೋಗಬೇಕು ಎಂದು ವಿಜೇಂದ್ರ ಹಾಗೂ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಅಲ್ಲದೇ, ರಾಜ್ಯಕ್ಕೆ ಅನುಭವಿ ಐಎಎಸ್ ಅಧಿಕಾರಿಗಳು ಬೇಕಿದೆ. ಸರ್ಕಾರದ ಕಾರ್ಯದರ್ಶಿ, ಸಹಾಯಕ ಕಾರ್ಯದರ್ಶಿನ್ನ ಬಳಕೆ ಮಾಡಿಕೊಳ್ಳಿ. ಅವರಿಗೆ ಈಗಾಗಲೇ ಸಾಕಷ್ಟು ಅನುಭವವಿದ್ದು, ಅವರನ್ನು ಪ್ರತಿ ಜಿಲ್ಲೆಗೆ ನಿಯೋಜನೆ ಮಾಡಿ ಎಂದ ಅವರು, ರಾಜ್ಯದ ಕೊರೊನಾ ನಿರ್ವಹಣೆಗೆ ಅವರಿಗೆ 100 ಕೋಟಿ ನೀಡಿ, ಸಂಪೂರ್ಣ ಫೈನಾನ್ಸ್ ಅಧಿಕಾರವನ್ನು ಅವರಿಗೆ ಕೊಡಿ. ಆ ಮೂಲಕ ಒಂದು ಸಾವು ಆಗದಂತೆ ನೋಡಿಕೊಳ್ಳುವಂತೆ ಎಚ್ಚರಿಕೆ ನೀಡಿ, ಕೊರೊನಾ ಕಂಟ್ರೋಲ್ ಮಾಡುವಂತೆ ಸೂಚಿಸಿ ಎಂದರು.