ಬಿ.ಎಸ್.ಯಡಿಯೂರಪ್ಪನವರಿಗೆ(BS Yedurappa) ರಾಜಕೀಯವಾಗಿ ಕೊಟ್ಟು ಗೊತ್ತೇ ಹೊರತು ಯಾರನ್ನೂ ಬೇಡಿ, ಪಡೆದು ಗೊತ್ತಿಲ್ಲ ಎಂದು ಬಿಜೆಪಿ ಉಪಾಧ್ಯಕ್ಷ(BJP) ಬಿ.ವೈ.ವಿಜಯೇಂದ್ರ(BY Vijayendra) ತಿಳಿಸಿದರು.

ಮೈಸೂರಿನಲ್ಲಿ(Mysuru) ತಮಗೆ ವಿಧಾನಪರಿಷತ್(VidhanaParishath) ಟಿಕೆಟ್ ಕೈತಪ್ಪಿದ ಕುರಿತು ಪ್ರತಿಕ್ರಿಯಿಸಿದ ಅವರು, ಮಗನನ್ನು ಎಂಎಲ್ಸಿ ಮಾಡಿ, ಎಂಎಲ್ಎ ಮಾಡಿ ಎಂದು ಯಡಿಯೂರಪ್ಪನವರು ಎಂದಿಗೂ ಯಾವ ಕೇಂದ್ರ ನಾಯಕರ ಮುಂದೆಯೂ ಬೇಡಿಕೊಂಡಿಲ್ಲ. ಯಡಿಯೂರಪ್ಪನವರಿಗೆ ಕೊಟ್ಟು ಗೊತ್ತೇ ಹೊರತು ಯಾರನ್ನೂ ಬೇಡಿ, ಪಡೆದುಕೊಂಡು ಗೊತ್ತಿಲ್ಲ. ನನಗೆ ಟಿಕೆಟ್ ಕೈತಪ್ಪಿದ್ದರ ಬಗ್ಗೆ ಅವರು ತಲೆಕೆಡಿಸಿಕೊಂಡಿಲ್ಲ. ಇನ್ನು ನಾನು ಎಂಎಲ್ಎ ಆಗುತ್ತೇನೆ, ಎಂಎಲ್ಸಿ ಆಗುತ್ತೇನೆ ಎಂದು ಪಕ್ಷ ಸಂಘಟನೆ ಮಾಡುತ್ತಿಲ್ಲ.
ಇದು ನನಗಾಗಲಿ, ನನ್ನ ತಂದೆಯವರಿಗಾಗಲಿ ಆದ ಹಿನ್ನಡೆಯಲ್ಲ. ನನಗೆ ಯಾವ ಸ್ಥಾನ ಕೊಡಬೇಕೆಂದು ಹೈಕಮಾಂಡ್ಗೆ ಗೊತ್ತಿದೆ. ಮುಂದಿನ ದಿನಗಳಲ್ಲಿ ನನ್ನ ಕೆಲಸವನ್ನು ಪಕ್ಷ ಗುರುತಿಸುತ್ತದೆ ಎಂದರು. ಇನ್ನು ನನ್ನ ರಾಜಕೀಯ ಭವಿಷ್ಯವನ್ನು ಕಾಲವೇ ನಿರ್ಧರಿಸುತ್ತದೆ. ಈ ಬಗ್ಗೆ ನಾನಾಗಲಿ, ಯಡಿಯೂರಪ್ಪನವರಾಗಲಿ ಹೆಚ್ಚು ತಲೆ ಕೆಡಿಸಿಕೊಂಡಿಲ್ಲ. ನನಗೆ ವಿಧಾನಪರಿಷತ್ ಟಿಕೆಟ್ ಕೈತಪ್ಪಿದ್ದಕ್ಕೆ ನನ್ನ ಬೆಂಬಲಿಗರು ಯಾರನ್ನೂ ದ್ವೇಷ ಮಾಡಬಾರದು. ಯಾರ ವಿರುದ್ದವೂ ಟೀಕೆ ಮಾಡಬಾರದು. ವೈಯಕ್ತಿವಾಗಿ ಯಾರ ಮೇಲೂ ವಾಗ್ದಾಳಿ ನಡೆಸಬಾರದು ಎಂದು ಮನವಿ ಮಾಡುತ್ತೇನೆ ಎಂದರು.

ಇನ್ನು ಬಿಜೆಪಿ ಹೈಕಮಾಂಡ್(Highcommand) ಬಿಎಸ್ವೈ ಪುತ್ರ ವಿಜಯೇಂದ್ರಗೆ ವಿಧಾನಪರಿಷತ್ ಟಿಕೆಟ್ ನಿರಾಕರಿಸಿತ್ತು. ಈ ಮೂಲಕ ಬಿಜೆಪಿಯಲ್ಲಿ ಬಿಎಸ್ವೈಯನ್ನು ಮೂಲೆಗುಂಪು ಮಾಡಲಾಗುತ್ತಿದೆ ಎಂದು ಕಾಂಗ್ರೆಸ್ ವ್ಯಂಗ್ಯವಾಡಿತ್ತು. ಈ ಕುರಿತು ಪ್ರತಿಕ್ರಿಯಿಸಿದ್ದ ಯಡಿಯೂರಪ್ಪ, ಈ ಬಗ್ಗೆ ಹೆಚ್ಚು ಚರ್ಚೆ ಮಾಡುವ ಅಗತ್ಯವಿಲ್ಲ. ಎಲ್ಲವನ್ನೂ ಹೈಕಮಾಂಡ್ ನಿರ್ಧರಿಸುತ್ತದೆ. ಮುಂದಿನ ದಿನಗಳಲ್ಲಿ ವಿಜಯೇಂದ್ರಗೆ ದೊಡ್ಡ ಅವಕಾಶವೇ ಸಿಗಬಹುದು ಎಂದಿದ್ದರು.