ಉತ್ತರಪ್ರದೇಶ: ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಬಂಧಿಸಲ್ಪಟ್ಟಿದ್ದ ರೌಡಿಶೀಟರ್ ವಿಕಾಸ್ ದುಬೆಯನ್ನು ಎನ್‌ಕೌಂಟರ್‌ನಲ್ಲಿ ಹತ್ಯೆಗೈಯ್ಯಲಾಗಿದೆ ಎಂದು ವರದಿಯಾಗಿದೆ.
ಕಾನ್ಪುರ ಸಮೀಪ ವಿಕಾಸ್ ದುಬೆ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಉತ್ತರಪ್ರದೇಶ ವಿಶೇಷ ಪೊಲೀಸ್ ಪಡೆ (ಎಸ್ ಟಿಎಫ್) ಈ ರೌಡಿಶೀಟರ್‌ನ್ನು ಎನ್ ಕೌಂಟರ್ ಮಾಡಿದ್ದಾರೆ ಎನ್ನಲಾಗಿದೆ.
ಗುರುವಾರ ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಬಂಧಿಸಲ್ಪಟ್ಟ ವಿಕಾಸ್ ದುಬೆ ಶುಕ್ರವಾರದಂದು ಮುಂಜಾನೆ ಕಾನ್ಪುರಕ್ಕೆ ಕರೆತರಲಾಗುತ್ತಿತ್ತು. ಕಾನ್ಪುರದ ಸಚೆಂಡಿ ಗಡಿ ತಲುಪುವ ಸಂದರ್ಭದಲ್ಲಿ ಎಸ್‌ಟಿಎಫ್ ಪಡೆಯ ವಾಹನ ಮತ್ತೊಂದು ವಾಹನವೊಂದಕ್ಕೆ ಡಿಕ್ಕಿ ಹೊಡೆದು ಅಪಘಾತಕ್ಕೀಡಾಗಿ ಪಲ್ಟಿಯಾಗಿದೆ. ಈ ವೇಳೆ ವಿಕಾಸ್ ದುಬೆ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾನೆ. ಇದರ ಪರಿಣಾಮವಾಗಿ ಎನ್ ಕೌಂಟರ್ ಮಾಡಲಾಗಿದೆ ಎಂದು ಪೊಲೀಸ್ ವರದಿ ತಿಳಿಸಿದೆ.
ಘಟನೆಯಲ್ಲಿ ಇಬ್ಬರು ಪೊಲೀಸರಿಗೆ ಗಾಯಗಳಾಗಿದ್ದು, ಮಾಧ್ಯಮ ಮೂಲಗಳ ಪ್ರಕಾರ ವಿಕಾಸ್ ದುಬೆ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ. ಶವವನ್ನು ಸ್ಥಳದಿಂದ ಲಾಲಾ ಲಜಪತ್ ರಾಯ್ ಆಸ್ಪತ್ರೆ ಅಥವಾ ಹ್ಯಾಲೆಟ್ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ ಎಂದು ತಿಳಿದುಬಂದಿದೆ.
ಘಟನೆ ಹಿನ್ನೆಲೆ
ದುಬೆ ವಿರುದ್ಧ 60 ಅಪರಾಧ ಪ್ರಕರಣಗಳಿದ್ದವು ಹಾಗಾಗಿ ಈತನ್ನು ಬಂಧಿಸಲು ಪೊಲೀಸರ ತಂಡ ಆತ ಅಡಗಿದ್ದ ಕಾನ್ಪುರದ ಡೆಹತ್‌ನ ಬಿಕ್ರಿ ಗ್ರಾಮಕ್ಕೆ ತೆರಳಿತ್ತು. ಮುಂಚೆಯೇ ವಿಷಯ ತಿಳಿದುಕೊಂಡಿದ್ದ ವಿಕಾಸ್ ದುಬೆ ಹಾಗೂ ಆತನ ಸಹಚರರು ದಾರಿಗೆ ಅಡ್ಡಲಾಗಿ ಕಲ್ಲು ಗುಂಡುಗಳನ್ನು ಜೋಡಿಸಿದ್ದರು. ಪೊಲೀಸರು ಸಮೀಪಿಸುತ್ತಿದ್ದಂತೆಯೇ ದುಬೆ ಸಹಚರರು ಪೊಲೀಸರ ಮೇಲೆ ಮನಸೋ ಇಚ್ಛೆ ಗುಂಡು ಹಾರಿಸಿದ್ದರು. ಈ ಘಟನೆಯಲ್ಲಿ ಒಬ್ಬ ಡಿವೈಎಸ್ಪಿ ಸೇರಿದಂತೆ ಎಂಟು ಮಂದಿ ಪೊಲೀಸರು ಹತ್ಯೆಯಾಗಿದ್ದರು.
ಘಟನೆ ಬಳಿಕ ತಲೆ ಮರೆಸಿಕೊಂಡಿದ್ದ ವಿಕಾಸ್ ದುಬೆ ಗುರುವಾರ ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಬಂಧಿಸಲ್ಪಟ್ಟಿದ್ದ.