ಕಾನ್ಪುರ: ಉತ್ತರ ಪ್ರದೇಶದ 8 ಮಂದಿ ಪೊಲೀಸರನ್ನು ಹತ್ಯೆ ಮಾಡಿದ್ದ ಕುಖ್ಯಾತ ಗ್ಯಾಂಗ್‌ಸ್ಟರ್ ವಿಕಾಸ್ ದುಬೆ ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದು, ಈತನನ್ನು ಉಜ್ಜಯಿನಿಯಲ್ಲಿ ಬಂಧಿಸಲಾಗಿದೆ.
ಗುರುವಾರ ಮುಂಜಾನೆ ಮಧ್ಯ ಪ್ರದೇಶದ ಉಜ್ಜಯಿನಿ ಬಳಿ ಇರುವ ಮಹಾಕಾಳ ದೇವಾಸ್ಥಾನಕ್ಕೆ ವಿಕಾಸ್ ದುಬೆ ತೆರಳಿದ್ದಾನೆ. ದೇವಾಲಯ ಮುಂಗಡವಾಗಿ ಬುಕ್ಕಿಂಗ್ ಮಾಡಿದವರಿಗೆ ದರ್ಶನದ ವ್ಯವಸ್ಥೆ ಕಲ್ಪಿಸುತ್ತಿದೆ. ದುಬೆ ಕೂಡ ಬುಕ್ಕಿಂಗ್ ಮಾಡಿಕೊಂಡು ದೇವರ ದರ್ಶನ ಪಡೆದಿದ್ದಾನೆ ಎನ್ನಲಾಗಿದೆ. ಅಲ್ಲದೇ ಈ ಸಂದರ್ಭದಲ್ಲಿ ಈತನೇ ಜೋರಾಗಿ ನಾನೇ ವಿಕಾಸ್ ದುಬೆ ಎಂದು ಕಿರುಚಿಕೊಂಡಿದ್ದಾನೆ ಎನ್ನಲಾಗಿದೆ. ಈ ಸಂದರ್ಭದಲ್ಲಿ ದೇವಾಲಯದ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ರವಾನಿಸಿದ್ದು, ಕೂಡಲೇ ಪೊಲೀಸರು ಈತನ್ನು ಬಂಧಿಸಿ ಉತ್ತರ ಪ್ರದೇಶ ಪೊಲೀಸರಿಗೆ ಒಪ್ಪಿಸಿದ್ದಾರೆ ಎನ್ನಲಾಗಿದೆ.
ಬಂಧನಕ್ಕೂ ಮುನ್ನ ದುಬೆ ಮಂಗಳವಾರ ರಾತ್ರಿ ಫರೀದಾಬಾದ್‌ನ ಹೋಟೆಲ್‌ಗೆ ಬಂದಿದ್ದು, ತನಗಾಗಿ ಒಂದು ಕೊಠಡಿ ಬುಕ್ ಮಾಡಲು ಮುಂದಾಗಿದ್ದ. ಆದರೆ ಈ ದೃಶ್ಯ ಹೋಟೆಲ್‌ನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು ಮತ್ತು ಅದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಆದರೆ ಪೊಲೀಸರು ಅಲ್ಲಿಗೆ ತಲುಪುವ ಮೊದಲೇ ಆತ ಪರಾರಿಯಾಗಿದ್ದ. ಗುರುವಾರ ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಈತ ಪೊಲೀಸರಿಗೆ ಶರಣಾಗಿದ್ದಾನೆ ಎನ್ನಲಾಗಿದೆ.
ದುಬೆ ವಿರುದ್ಧ ಈಗಾಗಲೇ 60 ಅಪರಾಧ ಪ್ರಕರಣಗಳಿದ್ದು,ಈತನ್ನು ಬಂಧಿಸಲು ಪೊಲೀಸರ ತಂಡ ಆತ ಅಡಗಿದ್ದ ಕಾನ್ಪುರದ ಡೆಹತ್‌ನ ಬಿಕ್ರಿ ಗ್ರಾಮಕ್ಕೆ ತೆರಳಿತ್ತು. ಮುಂಚೆಯೇ ವಿಷಯ ತಿಳಿದುಕೊಂಡಿದ್ದ ವಿಕಾಸ್ ದುಬೆ ಹಾಗೂ ಆತನ ಸಹಚರರು ದಾರಿಗೆ ಅಡ್ಡಲಾಗಿ ಕಲ್ಲು ಗುಂಡುಗಳನ್ನು ಜೋಡಿಸಿದ್ದರು. ಪೊಲೀಸರು ಸಮೀಪಿಸುತ್ತಿದ್ದಂತೆಯೇ ದುಬೆ ಸಹಚರರು ಪೊಲೀಸರ ಮೇಲೆ ಮನಸೋ ಇಚ್ಛೆ ಗುಂಡು ಹಾರಿಸಿದ್ದರು. ಈ ಘಟನೆಯಲ್ಲಿ ಒಬ್ಬ ಡಿವೈಎಸ್ಪಿ ಸೇರಿದಂತೆ ಎಂಟು ಮಂದಿ ಪೊಲೀಸರು ಹತ್ಯೆಯಾಗಿದ್ದರು.
ಘಟನೆ ಬಳಿಕ ತಲೆ ಮರೆಸಿಕೊಂಡಿದ್ದ ವಿಕಾಸ್ ದುಬೆ ಹಾಗೂ ಆತನ ಸಹಚರರನ್ನು ಬಂಧಿಸಲು 25 ವಿಶೇಷ ಪೊಲೀಸ್ ತಂಡಗಳನ್ನು ರಚಿಸಿದ್ದರು ಅಲ್ಲದೇ ಈತನ ಅಡಗುದಾಣದ ಬಗ್ಗೆ ಮಾಹಿತಿ ನೀಡಿದವರಿಗೆ ₹50,000 ನಗದು ಬಹುಮಾನ ಘೋಷಿಸಲಾಗಿತ್ತು.