ನವದೆಹಲಿ ನ 18 : ಉಪಗ್ರಹ ಚಿತ್ರಗಳ ಆಧಾರದ ಮೇಲೆ ಭೂತಾನ್‌ನ 4 ಹಳ್ಳಿಗಳನ್ನು ಚೀನಾದ ಸೇನಾ ಅತಿಕ್ರಮ ಮಾಡಿರುವ ಕುರಿತಾಗಿ ಕಳವಳಕಾರಿ ಸಂಗತಿಗಳನ್ನು ಬಯಲು ಮಾಡಿವೆ. ಕಳೆದ ಒಂದು ವರ್ಷದಲ್ಲಿ ಗಡಿ ಭಾಗದ ಒಳಗೆ ಚೀನಾ ಹಳ್ಳಿಗಳನ್ನು ನಿರ್ಮಿಸಿರುವುದನ್ನು ಇದು ಬಹಿರಂಗಪಡಿಸಿದೆ. ಸುಮಾರು 100 ಚದರ ಕಿಮೀ ವ್ಯಾಪ್ತಿಯಲ್ಲಿ ಅನೇಕ ಹೊಸ ಹಳ್ಳಿಗಳು ಹರಡಿರುವುದು ಉಪಗ್ರಹ ಚಿತ್ರದಲ್ಲಿ ಕಾಣಿಸಿದೆ.
ಭೂತಾನ್ ಭೂಮಿಯೊಳಗೆ ಚೀನಾದ ಹೊಸ ನಿರ್ಮಾಣಗಳು ಭಾರತಕ್ಕೆ ಕಳವಳಕಾರಿಯಾಗಿದೆ. ಭೂತಾನ್‌ನ ವಿದೇಶಾಂಗ ಸಂಬಂಧ ನೀತಿಗಳಲ್ಲಿ ಭಾರತ ಪ್ರಮುಖ ಪಾತ್ರ ವಹಿಸುತ್ತಿದೆ. ಅಲ್ಲದೆ, ಅಲ್ಲಿನ ಸಶಸ್ತ್ರ ಪಡೆಗಳಿಗೆ ಭಾರತವೇ ತರಬೇತಿ ನೀಡುತ್ತಿದೆ. ಅಲ್ಲದೆ, ಭೂತಾನ್‌ನ ಅನೇಕ ಭಾಗಗಳಲ್ಲಿ ಭಾರತದ ಸೇನಾ ಪಡೆಗಳು ರಕ್ಷಣೆಗಾಗಿ ಬೀಡು ಬಿಟ್ಟಿವೆ. ತನ್ನ ಭೂ ಗಡಿಗಳನ್ನು ಮರು ಗುರುತು ಮಾಡುವಂತೆ ಭೂತಾನ್ ಮೇಲೆ ಚೀನಾ ನಿರಂತರ ಒತ್ತಡಗಳನ್ನು ಹೇರುತ್ತಿದೆ. ಈ ಗಡಿ ರೇಖೆಗಳನ್ನು ಮರು ನಿಗದಿ ಮಾಡುವ ಯಾವುದೇ ಒಪ್ಪಂದಗಳು ಅಂತಿಮಗೊಳ್ಳದೆ ಇದ್ದರೂ, ಒಪ್ಪಂದದ ಭಾಗವಾಗಿ ಈ ಹೊಸ ಗ್ರಾಮಗಳ ನಿರ್ಮಾಣವನ್ನು ಅದು ಮುಂದುವರಿಸಿದೆ.
2017ರಲ್ಲಿ ಭಾರತ ಮತ್ತು ಚೀನಾ ಸೇನೆಗಳ ನಡುವೆ ಸಂಘರ್ಷ ನಡೆದ ದೋಕ್ಲಾಂ ಪ್ರಸ್ಥಭೂಮಿ ಸಮೀಪದಲ್ಲಿ ಚೀನಾ ಹಳ್ಳಿ ಸ್ಥಾಪನೆ ಮಾಡುತ್ತಿರುವುದು ಕಳೆದ ವರ್ಷ ವರದಿಯಾಗಿತ್ತು. ಭೂತಾನ್‌ನ ಎರಡು ಕಿಮೀ ಗಡಿಯೊಳಗೆ ದೋಕ್ಲಾಂಗೆ ಬಹಳ ಹತ್ತಿರದಲ್ಲಿ ಈ ಹಳ್ಳಿ ನಿರ್ಮಾಣ ಕಾರ್ಯ ನಡೆದಿರುವುದು ಬಹಿರಂಗವಾಗಿತ್ತು. ಈಗ ಭೂತಾನ್‌ನ ಸುಮಾರು 100 ಕಿಮೀ ಚದರ ಕಿಮೀ ವ್ಯಾಪ್ತಿಯಲ್ಲಿ ಅದು ನಾಲ್ಕು ಹಳ್ಳಿಗಳನ್ನು ನಿರ್ಮಿಸಿದೆ ಎಂದು ತಿಳಿದುಬಂದಿದೆ.