Vinesh Phogat Announces Retirement After Olympics Disqualification
Vinesh Phogat Retirment: ಅಂತಾರಾಷ್ಟ್ರೀಯ ಹಾಗೂ ದೇಸಿ ಕುಸ್ತಿ ರಂಗದಿಂದ ತಾವು ನಿವೃತ್ತಿಯಾಗುತ್ತಿರುವುದಾಗಿ ಖ್ಯಾತ ಕುಸ್ತಿಪಟು ವಿನೇಶ್ ಫೋಗಟ್ (Vinesh Phogat) ಅವರು ಘೋಷಿಸಿದ್ದಾರೆ.
ಪ್ಯಾರಿಸ್ ನಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್ (Paris Olympics 2024) ಕ್ರೀಡಾಕೂಟದ ಮಹಿಳೆಯರ 50 ಕೆಜಿ ವಿಭಾಗದ ಫೈನಲ್ ನಲ್ಲಿ ಸೆಣೆಸಬೇಕಿದ್ದ ಅವರು, ನಿಗದಿತ ತೂಕಕ್ಕಿಂತ ಕೇವಲ 100 ಗ್ರಾಂ ತೂಕ ಹೆಚ್ಚಾಗಿದ್ದ ಕಾರಣಕ್ಕೆ ಆ ಪಂದ್ಯದಲ್ಲಿ ಆಡುವ ಅವಕಾಶವನ್ನು ಕಳೆದುಕೊಂಡರು. ಆ ಹಿನ್ನೆಲೆಯಲ್ಲಿ ತೀವ್ರವಾಗಿ ನೊಂದಿರುವ ಅವರು, ಕುಸ್ತಿ ಕ್ರೀಡೆಗೆ ವಿದಾಯ ಹೇಳುವ ನಿರ್ಧಾರ ಕೈಗೊಂಡಿದ್ದಾರೆ.
ವಿನೇಶ್ ಫೋಗಟ್ ಅವರು ಅನರ್ಹಗೊಂಡ ಬೆನ್ನಲ್ಲೇ, ಅವರನ್ನು ಅನರ್ಹಗೊಳಿಸಿದ ನಿರ್ಧಾರದ ವಿರುದ್ಧ ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಂಸ್ಥೆಗೆ (IOC) ಮೇಲ್ಮನವಿ ಸಲ್ಲಿಸಲು ಬಯಸಿತ್ತು.ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಯವರೇ, ಭಾರತೀಯ ಒಲಿಂಪಿಕ್ಸ್ ಸಂಸ್ಥೆಯ ಅಧ್ಯಕ್ಷೆಯಾಗಿರುವ ಪಿ.ಟಿ. ಉಷಾ ಅವರನ್ನು ಸಂಪರ್ಕಿಸಿ ಮೇಲ್ಮನವಿ ಸಲ್ಲಿಸುವ ಕುರಿತಾಗಿ ಮಾತುಕತೆ ನಡೆಸಿದ್ದರು.
ಒಲಿಂಪಿಕ್ಸ್ ಹಿನ್ನೆಲೆಯಲ್ಲಿ ಪ್ಯಾರಿಸ್ ನಲ್ಲೇ ಇರುವ ಪಿಟಿ ಉಷಾ (PT Usha) ಅವರು ಸಹ, ಆಸ್ಪತ್ರೆಯಲ್ಲಿರುವ ವಿನೇಶ್ ಅವರನ್ನು ಭೇಟಿ ಮಾಡಿ ಅವರಿಗೆ ಸಾಂತ್ವನ ಹೇಳಿದ್ದರಲ್ಲದೆ, ಅನರ್ಹತೆಯ ನಿರ್ಧಾರದ ವಿರುದ್ಧ ಮೇಲ್ಮನವಿ ಸಲ್ಲಿಸುವುದಾಗಿ ಹೇಳಿ ವಿನೇಶ್ ಫೋಗಟ್ ಅವರಿಗೆ ಸಮಾಧಾನ ಪಡಿಸಿದ್ದರು.
ಆದರೆ ಬೇಸರದ ಸಂಗತಿಯೆಂದರೆ ಅಷ್ಟರಲ್ಲಿ ಕಾಲ ಮಿಂಚಿ ಹೋಗಿತ್ತು. ನಿನ್ನೆ ರಾತ್ರಿ ವಿನೇಶ್ ಪಾಲ್ಗೊಳ್ಳಬೇಕಿದ್ದ ಮಹಿಳೆಯರ 50 ಕೆಜಿ ಕುಸ್ತಿ ವಿಭಾಗದ ಫೈನಲ್ (Final) ಪಂದ್ಯ ಜರುಗಿತ್ತು. ಆ ಪಂದ್ಯದ ಫಲಿತಾಂಶ ಬಂದ ನಂತರ ಇನ್ನು ತಮ್ಮ ಅನರ್ಹತೆ ವಿರುದ್ಧ ಮೇಲ್ಮನವಿ ಸಲ್ಲಿಸಿ ಪ್ರಯೋಜನವಿಲ್ಲ ಎಂದು ತಿಳಿದು ಪ್ರಾಯಶಃ ವಿನೇಶ್ ಫೋಗಟ್ ಅವರು ಕುಸ್ತಿಯಿಂದ ನಿವೃತ್ತಿ ಘೋಷಿಸಿದ್ದಾರೆ.
ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ‘ಅಮ್ಮಾ, ನನ್ನ ವಿರುದ್ಧ ಕುಸ್ತಿ ಗೆದ್ದಿದೆ, ನಾನು ಸೋತೆ, ಕ್ಷಮಿಸಿ. ನಿನ್ನ ಕನಸು, ನನ್ನ ಧೈರ್ಯ ಎಲ್ಲ ಭಗ್ನವಾಯಿತು. ನನ್ನ ಧೈರ್ಯ ಸಂಪೂರ್ಣ ಛಿದ್ರವಾಗಿದೆ, ಈಗ ಹೆಚ್ಚಿನ ಶಕ್ತಿ ಉಳಿದಿಲ್ಲ’ ಎಂದು ವಿನೇಶ್ ಫೋಗಟ್ ಬರೆದುಕೊಂಡಿದ್ದಾರೆ. ಕುಸ್ತಿಗೆ ವಿದಾಯ. ನಿಮ್ಮೆಲ್ಲರಿಗೂ ನಾನು ಸದಾ ಋಣಿಯಾಗಿರುತ್ತೇನೆ, ಕ್ಷಮಿಸಿ ಎಂದು ವಿನೇಶ್ ಫೋಗಟ್ ಬರೆದುಕೊಂಡಿದ್ದಾರೆ.