Vinesh Phogat disqualified from Olympics finals
Paris Olympics 2024: ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ (Paris Olympic) ಭಾರತಕ್ಕೆ ಭಾರಿ ಆಘಾತಕಾರಿ ಸುದ್ದಿ ಹೊರಬಿದ್ದಿದೆ. ಮಹಿಳೆಯರ 50 ಕೆಜಿ ಕುಸ್ತಿ ಫೈನಲ್ನಿಂದ ಭಾರತದ ದಿಟ್ಟ ಕುಸ್ತಿಪಟು ವಿನೇಶ್ ಫೋಗಟ್ ಅನರ್ಹಗೊಂಡಿದ್ದಾರೆ. ರೋಚಕವಾಗಿ ಫೈನಲ್ಗೆ ಎಂಟ್ರಿ ಕೊಟ್ಟಿದ್ದ ವಿನೇಶ್, ಖಚಿತವಾಗಿ ಬಂಗಾರ ಗೆಲ್ಲುವ ನಿರೀಕ್ಷೆ ಭಾರತೀಯರಿಗಿತ್ತು.
ಆದರೆ, ಪದಕ ಸುತ್ತಿನ ಪಂದ್ಯಕ್ಕೂ ಮುನ್ನ ಇಂದು ತೂಕದಲ್ಲಿ ಕೇವಲ 100 ಗ್ರಾಂ ಅಧಿಕ ತೂಕವಿದ್ದ ಕಾರಣದಿಂದ, 29 ವರ್ಷದ ಕುಸ್ತಿಪಟುವನ್ನು ಫೈನಲ್ನಿಂದ ಅನರ್ಹಗೊಳಿಸಿರುವುದು ಬೇಸರದ ಸಂಗತಿಯಾಗಿದೆ
ಈ ಹಿಂದೆ ಭಾರತದಲ್ಲಿ ಕುಸ್ತಿ ಫೆಡರೇಷನ್ ಅಧ್ಯಕ್ಷರಾಗಿದ್ದ ಬ್ರಿಜ್ ಭೂಷಣ್ ಸಿಂಗ್ (Brij Bhushan Singh) ವಿರುದ್ಧ ಬೀದಿಗಳಿದು ಪ್ರತಿಭಟಿಸಿದ್ದ ದಿಟ್ಟೆಯ ಕುರಿತಾದ ಈ ಆಘಾತಕಾರಿ ಸುದ್ದಿ ಭಾರತೀಯರಿಗೆ ಅಚ್ಚರಿ ತರಿಸಿದೆ. ಇನ್ನು ಈ ಕುರಿತಾಗಿ ಮಹಿಳಾ ಕುಸ್ತಿ 50 ಕೆಜಿ ವಿಭಾಗದಿಂದ ವಿನೇಶ್ ಫೋಗಟ್ ಅವರನ್ನು ಅನರ್ಹಗೊಳಿಸಿದ ಕುರಿತು ಪ್ಯಾರಿಸ್ನಲ್ಲಿರುವ ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ವಿಷಾದದ ಸುದ್ದಿ ಹಂಚಿಕೊಂಡಿದೆ.
ರಾತ್ರಿಯಿಡೀ ತಂಡದ ಅತ್ಯುತ್ತಮ ಪ್ರಯತ್ನಗಳ ಹೊರತಾಗಿಯೂ, ಅವರು ಇಂದು ಬೆಳಗ್ಗೆ ನಿಗದಿತ 50 ಕೆಜಿಗಿಂತ ಕೇವಲ 100ಗ್ರಾಂ ಹೆಚ್ಚುವರಿ ತೂಕವನ್ನು ಹೊಂದಿದ್ದರು. ಈ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಈ ಸಮಯದಲ್ಲಿ ತಂಡವು ವಿನೇಶ್ ಅವರ ಗೌಪ್ಯತೆಯನ್ನು ಗೌರವಿಸುವಂತೆ ವಿನಂತಿಸುತ್ತದೆ ಎಂದು ಹೇಳಿದೆ.
ಕುಸ್ತಿ ಆಟಕ್ಕೆ ಅದರದ್ದೇ ಆದ ನಿಯಮಗಳಿವೆ. ಇನ್ನು ಒಲಿಂಪಿಕ್ಸ್ ಕ್ರೀಡೆಯಲ್ಲಿ ಇರುವ ನಿಯಮಗಳನ್ನು ನೋಡುವುದಾದರೆ
- ಪುರುಷ ಅಥವಾ ಮಹಿಳಾ ಕುಸ್ತಿಯನ್ನು ಕುಸ್ತಿಪಟುಗಳ ತೂಕದ ಆಧಾರದ ಮೇಲೆ ವಿವಿಧ ವರ್ಗಗಳಲ್ಲಿ ನಡೆಸಲಾಗುತ್ತದೆ.50 ಕೆಜಿ ಅಂದರೆ ಸರಿಯಾಗಿ 50 ಕೆಜಿ ತೂಕವೇ ಇರಬೇಕಿದೆ.
- ಇದರಲ್ಲಿ ವಿನೇಶ್ ಫೋಗಟ್ 50 ಕೆಜಿ ವಿಭಾಗದಲ್ಲಿ ಆಡುತ್ತಾರೆ. ಹಾಗಾಗಿ ಅವರದು ನಿಯಮಕ್ಕಿಂತ 100ಗ್ರಾಂ ಹೆಚ್ಚಾಗಿ ನಿಯಮ ಬಾಹಿರವಾಗಿದೆ.
- ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಕುಸ್ತಿಪಟುಗಳನ್ನು ಅವರ ಪಂದ್ಯಗಳು ಇರುವ ದಿನ ಬೆಳಗ್ಗೆ ತೂಕಪರೀಕ್ಷೆ ನಡೆಸಲಾಗುತ್ತದೆ.
- ಪ್ರತಿ ತೂಕದ ವಿಭಾಗಗಳಲ್ಲೂ ತೂಕ ನಡೆಸಿದ ಎರಡು ದಿನಗಳಲ್ಲಿ ಪಂದ್ಯಾವಳಿ ಪೂರ್ಣಗೊಳ್ಳುತ್ತದೆ. ಅಷ್ಟರವರೆಗೂ ಅದೇ ತೂಕವನ್ನು ಅವರು ಕಾಯ್ದುಕೊಳ್ಳಬೇಕಿದೆ.
- ಇನ್ನು ಫೈನಲ್ ಪಂದ್ಯದಲ್ಲಿ ಕಾಣಿಸಿಕೊಳ್ಳಬೇಕಿದ್ದರೆ, ಕುಸ್ತಿಪಟುಗಳು ಎರಡೂ ದಿನಗಳಲ್ಲಿ ಅದೇ ತೂಕವನ್ನು ಕಾಯ್ದುಕೊಳ್ಳಬೇಕಾಗುತ್ತದೆ.
- ತೂಕ ಮಾತ್ರವಲ್ಲದೆ ಸಾಂಕ್ರಾಮಿಕ ರೋಗಗಳನ್ನು ಕೂಡಾ ಪರೀಕ್ಷಿಸಲಾಗುತ್ತದೆ.
- ಯುನೈಟೆಡ್ ವರ್ಲ್ಡ್ ರಸ್ಲಿಂಗ್ ನಿಯಮಗಳ ಪ್ರಕಾರ, ಒಬ್ಬ ಕ್ರೀಡಾಪಟು ಕುಸ್ತಿಗೂ ಮುನ್ನ ತೂಕ ಪರೀಕ್ಷೆಯಲ್ಲಿ ಭಾಗವಹಿಸದಿದ್ದರೆ ಅಥವಾ ಸರಿಯಾದ ತೂಕ ಇರುವಲ್ಲಿ ವಿಫಲವಾದರೆ, ಅವರನ್ನು ಸ್ಪರ್ಧೆಯಿಂದ ಎಲಿಮನೇಟ್ (Eliminate) ಮಾಡಲಾಗುತ್ತದೆ.
- ಅಲ್ಲದೆ ಅವರಿಗೆ ಯಾವುದೇ ಶ್ರೇಯಾಂಕ ನೀಡಲಾಗುವುದಿಲ್ಲ. ತೂಕ ಸರಿಯಾಗಿಲ್ಲ ಎಂಬ ಕಾರಣದಿಂದ ಫೈನಲ್ನಿಂದ ಅನರ್ಹಗೊಂಡ ಮೊದಲ ಕ್ರೀಡಾಪಟು ಎಂದರೆ ವಿನೇಶ್ ಫೋಗಟ್ ಅದರಲ್ಲೂ ನಮ್ಮ ಭಾರತೀಯಳು ಎನ್ನುವುದು ಬೇಸರದ ಸಂಗತಿಯಾಗಿದೆ.