ಮಡಿಕೇರಿ, ಏ. 27: ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆ ಶಾಲಾ, ಕಾಲೇಜುಗಳನ್ನು ಬಂದ್ ಮಾಡುವಂತೆ ಸರ್ಕಾರ ಆದೇಶ ಹೊರಡಿಸಿದ್ದರೂ ವಿರಾಜಪೇಟೆಯ ಖಾಸಗಿ ಡೆಂಟಲ್ ಕ್ಲಿನಿಕ್‌ವೊಂದು ನಿಯಮವನ್ನು ಗಾಳಿಗೆ ತೂರಿದ ಪರಿಣಾಮ ಕಾಲೇಜು ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಡೆಂಟಲ್ ಕಾಲೇಜಿನಲ್ಲಿ ತರಗತಿಗಳು ನಡೆಸುತ್ತಿರುವುದರ ಬಗ್ಗೆ ಖಚಿತ ಮಾಹಿತಿ ಪಡೆದ ವಿರಾಜಪೇಟೆ ತಹಸಿಲ್ದಾರ್ ಆರ್.ಯೋಗಾನಂದ್ ಅವರು ವಿರಾಜಪೇಟೆ ಪಟ್ಟಣ ಪೊಲೀಸರೊಂದಿಗೆ ಕಾಲೇಜಿನ ಮೇಲೆ ಏಕಾಏಕಿ ದಾಳಿ ಮಾಡಿದರು. ಈ ವೇಳೆ ಕಾಲೇಜಿನಲ್ಲಿ ಕೋವಿಡ್ ನಿಯಮಗಳನ್ನು ಮೀರಿ ಆಂತರಿಕ ಪರೀಕ್ಷೆಗಳನ್ನು ನಡೆಸುತ್ತಿರುವುದನ್ನು ಸ್ವತಃ ತಹಸಿಲ್ದಾರ್ ಖುದ್ದು ವೀಕ್ಷಿಸಿದರು. ದಂತ ವೈದ್ಯಕೀಯ ವಿದ್ಯಾರ್ಥಿಗಳಿಗೆ ಲ್ಯಾಬ್ ತರಗತಿಗಳನ್ನು ನಡೆಸುತ್ತಿದ್ದನ್ನು ಗಮನಿಸಿದರು. ಈ ವೇಳೆ ಉಪನ್ಯಾಸಕರನ್ನು ವಿಚಾರಿಸಿದಾಗ ನಾವು ಯಾವುದೇ ತರಗತಿ ನಡೆಸುತ್ತಿರಲಿಲ್ಲ. ಸಂಶೋಧನೆಗೆ ಸಂಬಂಧಿಸಿದಂತೆ ಕೆಲಸ ಮಾಡುತ್ತಿದ್ದೆವು ಎಂದು ಸಮಾಜಾಯಿಷಿ ನೀಡಿದ್ದಾರೆ.
ಇದೇ ವೇಳೆ ತರಗತಿ ಕೊಠಡಿಗಳಿಂದ ಹೊರಗೆ ಹೋಗುತ್ತಿದ್ದ ವಿದ್ಯಾರ್ಥಿಗಳನ್ನು ಕೇಳಿದಾಗ ವಿದ್ಯಾರ್ಥಿಗಳು ಲ್ಯಾಬ್ ತರಗತಿಯಲ್ಲಿ ಇದ್ದೆವು ಎನ್ನೋದನ್ನು ಒಪ್ಪಿಕೊಂಡರು. ಜೊತೆಗೆ ಕಾಲೇಜು ಆವರಣದಲ್ಲಿರುವ ಹೋಟೆಲಿನಲ್ಲಿ ವಿದ್ಯಾರ್ಥಿಗಳಿಗೆ ಅಲ್ಲಿಯೇ ಊಟ ನೀಡಲಾಗುತ್ತಿತ್ತು. ವಿದ್ಯಾರ್ಥಿಗಳು ಒಂದೊಂದು ಟೇಬಲ್‍ನಲ್ಲೂ ಗುಂಪು ಗುಂಪಾಗಿ ಕುಳಿತು ಊಟ ಮಾಡುತ್ತಿದ್ದರು, ಜೊತೆಗೆ ಕ್ಯಾಂಟೀನ್‌ನಲ್ಲೂ ವಿದ್ಯಾರ್ಥಿಗಳು ಕುಳಿತು ವಿವಿಧ ತಿನಿಸುಗಳನ್ನು ತಿನ್ನುತಿದ್ದರು.
ತಕ್ಷಣವೇ ಎಚ್ಚೆತ್ತುಕೊಂಡು ತಹಸಿಲ್ದಾರ್ ಇದ್ದ ಸ್ಥಳಕ್ಕೆ ಬಂದ ಕಾಲೇಜು ಡೀನ್ ತರಗತಿ ನಡೆಸುವುದಕ್ಕೆ ನಮಗೆ ಅವಕಾಶ ಇದೆ ಎಂದು ಸಮಜಾಯಿಷಿ ನೀಡಲು ಪ್ರಯತ್ನಿಸಿದರು. ಆದರೆ ತಹಸಿಲ್ದಾರ್ ಅವರು ಎಲ್ಲವನ್ನೂ ಪರಿಶೀಲಿಸಿ ಕಾಲೇಜು ವಿರುದ್ಧ ಶಿಸ್ತು ಕ್ರಮ ಕೈಗೊಂಡು ಸರ್ಕಾರದ ನಿಯಮದ ಪ್ರಕಾರ ಪ್ರಕರಣ ದಾಖಲಿಸಲಾಗುವುದು. ಕಾಲೇಜಿನಲ್ಲಿ ಹಲವು ವಿಷಯಗಳಲ್ಲಿ ಕೋವಿಡ್ ನಿಯಮಗಳನ್ನು ಉಲ್ಲಂಘಿಸಲಾಗಿದೆ. ಹೀಗಾಗಿ ಕಾಲೇಜು ವಿರುದ್ಧ ಠಾಣೆಯಲ್ಲಿ ಎಫ್.ಐ.ಆರ್ ದಾಖಲಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.