New Delhi: ಸುಡಾನ್‌ನಲ್ಲಿ (Sudan) ದಿನೇ ದಿನೇ ಹಿಂಸಾಚಾರ ಹೆಚ್ಚುತ್ತಿದೆ. ಇಲ್ಲಿ ಸಿಲುಕಿಕೊಂಡಿರುವ ಭಾರತೀಯ ಪ್ರಜೆಗಳ ಸುರಕ್ಷತೆಯ ಬಗ್ಗೆ ಭಾರತ ಸರ್ಕಾರವು ಅಮೆರಿಕಾ, ಸೌದಿ ಅರೇಬಿಯಾ (Saudi Arabia) , ಬ್ರಿಟನ್, ಮತ್ತು ಯುಎಇಯೊಂದಿಗೆ ಸಮಾಲೋಚನೆ (Violence in Sudan) ನಡೆಸುತ್ತಿದೆ.
ಈಗಾಗಲೇ ಸೌದಿ ಅರೇಬಿಯಾ ಮತ್ತು ಯುಎಇ ರಾಷ್ಟ್ರಗಳು ಸ್ಥಳೀಯ ನೆರವು ನೀಡುವ ಭರವಸೆ ನೀಡಿವೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ .
ಸರ್ಕಾರದ ಮೂಲಗಳು ತಿಳಿಸಿರುವ ಪ್ರಕಾರ ಸುಡಾನ್‌ನಲ್ಲಿನ ಪರಿಸ್ಥಿತಿ ತೀವ್ರ ಪ್ರಕ್ಷುಬ್ಧವಾಗಿದ್ದು, ಈ ಪರಿಸ್ಥಿತಿಯಲ್ಲಿ ಜನರನ್ನು ಸಾಗಿಸುವುದು ಅತ್ಯಂತ ಅಪಾಯಕಾರಿಯಾಗಲಿದೆ.

ಆಫ್ರಿಕಾ (Africa) ರಾಷ್ಟ್ರದ ಸುಡಾನ್‌ನಲ್ಲಿ ಸೇನೆ ಹಾಗೂ ಅರೆಸೇನಾ ಗುಂಪಿನ ನಡುವೆ ನಡೆಯುತ್ತಿರುವ ಸಂಘರ್ಷ ತೀವ್ರಗೊಂಡಿದೆ.
ಈ ಭೀಕರ ಕಾಳಗದಲ್ಲಿ ಈವರೆಗೆ 200ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ,ಹಾಗೂ 1,800ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಇನ್ನು ಹಕ್ಕಿ ಪಿಕ್ಕಿ ಸಮುದಾಯಕ್ಕೆ ಸೇರಿದ 31 ಕನ್ನಡಿಗರು ಸುಡಾನ್‌ನಲ್ಲಿ (Sudan) ಸಂಕಷ್ಟಕ್ಕೆ ಸಿಲುಕಿದ್ದಾರೆ.
ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಸುಡಾನ್‌ನಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣೆಗೆ ವಿದೇಶಾಂಗ ಇಲಾಖೆ ಹಾಗೂ ಸುಡಾನ್‌ನಲ್ಲಿ ಇರುವ ಭಾರತೀಯ ರಾಯಭಾರ ಕಚೇರಿಯ ಜೊತೆ ನಿರಂತರವಾಗಿ ಸಂಪರ್ಕದಲ್ಲಿದೆ.
ಹಕ್ಕಿ ಪಿಕ್ಕಿ ಸಮುದಾಯಕ್ಕೆ ಸೇರಿದವರು ಈ 31 ಕನ್ನಡಿಗರು
ಹಕ್ಕಿ ಪಿಕ್ಕಿ ಸಮುದಾಯದ ಜನರು ಗಿಡ ಮೂಲಿಕೆ , ಆಯುರ್ವೇದ (Ayuraveda) ಔಷಧ, ಹಾಗೂ ನಾಟಿ ಔಷಧ ಮಾರಾಟಕ್ಕಾಗಿ ಪ್ರತಿ ವರ್ಷ ಆಫ್ರಿಕಾದ (Africa) ಹಲವು ದೇಶಗಳಿಗೆ ಭೇಟಿ ನೀಡುತ್ತಾರೆ.
ಹಾಗೂ ಕೆಲವು ತಿಂಗಳ ಕಾಲ ಅಲ್ಲಿಯೇ ನೆಲೆಸುತ್ತಾರೆ. ಹಲವು ದಶಕಗಳಿಂದಲೂ ಈ ಪರಿಪಾಠ ನಡೆದು ಬರುತ್ತಿದೆ.
ಅದರಂತಯೇ ಈ ಬಾರಿ ಕೂಡಾ ಆಫ್ರಿಕಾದ ಹಲವು ದೇಶಗಳಿಗೆ ಹಕ್ಕಿ ಪಿಕ್ಕಿ ಜನರು ಹೋಗಿದ್ದಾರೆ. ಈ ಪೈಕಿ ಸುಡಾನ್‌ಗೆ ತೆರಳಿದ್ದ 31 ಹಕ್ಕಿ ಪಿಕ್ಕಿ ಜನರು (Violence in Sudan) ಬಹು ಸಂಕಷ್ಟಕ್ಕೆ ಸಿಲುಕಿದ್ದಾರೆ.
ದಿಢೀರನೆ ಅರಂಭವಾದ ಈ ಸಂಘರ್ಷದಿಂದಾಗಿ ದಿಕ್ಕು ತೋಚದಂತಾಗಿರುವ ಅವರಿಗೆ ಆಹಾರ ಹಾಗೂ ನೀರು ಕೂಡಾ ಸಿಗುತ್ತಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ ಹಾಗೂ ತವರಿಗೆ ವಾಪಸ್ ಬರಲಾಗದೆ ಸಂಕಷ್ಟದಲ್ಲಿದ್ದಾರೆ.

ಖಾರ್ಟ್‌ಮ್ (Khartoum)ಪ್ರದೇಶದಲ್ಲಿ ಭಾರಿ ಸ್ಫೋಟದ ಸದ್ದುಗಳು ಕೇಳಿ ಬರುತ್ತಿದ್ದು, ಯೋಧರು ಶಿರಸ್ತ್ರಾಣ ಹಾಗೂ ಸಮವಸ್ತ್ರಗಳನ್ನು ಧರಿಸಿ ಬೀದಿ ಬೀದಿಗಳನ್ನು ಸುತ್ತುತ್ತಿದ್ದಾರೆ.
ಆದರೆ ಇದಕ್ಕೂ ಮುನ್ನ ಖಾರ್ಟೌಮ್‌ನಲ್ಲಿ ಗುಂಡೇಟು ತಗುಲಿ ಓರ್ವ ಭಾರತೀಯ ಪ್ರಜೆ ಮೃತಪಟ್ಟಿದ್ದಾರೆ. ಭಾರತೀಯರು ತಮ್ಮ ನಿವಾಸಗಳನ್ನು ತೊರೆಯಕೂಡದು
ಹಾಗೂ ಸಂಯಮದಿಂದಿರಬೇಕು ಎಂದು ಸೋಮವಾರ ಸುಡಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಹೊಸ ಮುನ್ನೆಚ್ಚರಿಕೆಯನ್ನು ಬಿಡುಗಡೆ ಮಾಡಿ, ಆಗ್ರಹಿಸಿದೆ.
ವಿದೇಶಾಂಗ ವ್ಯವಹಾರಗಳ ಇಲಾಖೆಯು ಸದ್ಯ ಸುಡಾನ್‌ನಲ್ಲಿನ ಪರಿಸ್ಥಿತಿ ಕುರಿತು ಮಾಹಿತಿ ಹಾಗೂ ನೆರವು ಒದಗಿಸಲು ಈಗಾಗಲೇ 24×7 ಹೊತ್ತು ಕಾರ್ಯನಿರ್ವಹಿಸುವ ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಿದೆ.