ಹಿಂದೂ ಸಮಾಜ ಜಾಗೃತವಾಗಬೇಕು. ಕಾಶ್ಮೀರದಲ್ಲಿ ಪಂಡಿತರ ಮೇಲೆ ನಡೆದ ದೌರ್ಜನ್ಯ ನಡೆದು ಹೋದ ಘಟನೆಯಲ್ಲ. ಆ ಪರಿಸ್ಥಿತಿ ಮುಂದಿನ ದಿನಗಳಲ್ಲಿ ನಮಗೂ ಬರಬಹುದು. ಹೀಗಾಗಿ ನಾವೆಲ್ಲರೂ ಬಹು ಎಚ್ಚರಿದಿಂದ ಇರಬೇಕು ಎಂದು ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು. ಮಣಿಪಾಲದಲ್ಲಿ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರವನ್ನು ವೀಕ್ಷಣೆ ಮಾಡಿದ ಶ್ರೀಗಳು ಮಾದ್ಯಮಗಳೊಂದಿಗೆ ಮಾತನಾಡುತ್ತಾ, ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರದ ನಿರ್ದೇಶಕರು ಸತ್ಯದ ಶೋಧನೆ ಮಾಡಿದ್ದಾರೆ. ಇತಿಹಾಸದ ಪುಟಗಳಲ್ಲಿ ಕಳೆದುಹೋಗಿದ್ದ ಪಂಡಿತರ ಮೇಲೆ ನಡೆದ ದೌರ್ಜನ್ಯದ ಕರಾಳ ಇತಿಹಾಸವನ್ನು ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ತೆರೆದಿಟ್ಟಿದ್ದಾರೆ.

ಈ ಚಿತ್ರವನ್ನು ನೋಡಿದ ಮೇಲೆ ಹಿಂದೂಗಳು ಎಚ್ಚೆತ್ತುಕೊಳ್ಳಬೇಕು. ಇನ್ನು ಕರಾಳ ಸತ್ಯವನ್ನು ನಮಗೆ ತೋರಿಸಿದ ನಿರ್ದೇಶಕರಿಗೆ ನಾನು ಅಭಿನಂದನೆ ಸಲ್ಲಿಸುತ್ತೇವೆ ಎಂದ ಹೇಳಿದರು. ಇನ್ನು ಈ ಚಿತ್ರ ಕನ್ನಡ ಸೇರಿದಂತೆ ಎಲ್ಲ ಭಾರತೀಯ ಭಾಷೆಗಳಿಗೂ ಭಾಷಾಂತರವಾಗಬೇಕು. ಇದನ್ನು ನೋಡಿದ ಮೇಲೆ ಹಿಂದೂ ಸಮಾಜ ಎಚ್ಚೆತ್ತುಕೊಳ್ಳಬೇಕು. ಕಾಶ್ಮೀರದಲ್ಲಿ ಕಾಶ್ಮೀರಿ ಪಂಡಿತರನ್ನು ಹತ್ಯೆ ಮಾಡಿದ್ದು, ಅವರ ಜೊತೆಗೆ ಇದ್ದ ನೆರೆಹೊರೆಯವರು. ಅಸಹಾಯಕರಾದ ಪಂಡಿತರು ಜೀವ ಉಳಿದರೆ ಸಾಕೆಂದು ಉಟ್ಟ ಬಟ್ಟೆಯಲ್ಲೇ ಆಸ್ತಿಪಾಸ್ತಿಗಳನ್ನು ತೊರೆದು, ಜೀವ ಉಳಿದರೆ ಸಾಕೆಂದು ಕಾಶ್ಮೀರದಿಂದ ಓಡಿ ಬಂದಿದ್ದರು.
ಇದರಿಂದ ನಾವೆಲ್ಲಾ ಪಾಠ ಕಲಿಸಬೇಕು. ಮುಂದೊಂದು ದಿನ ಇದೇ ಪರಿಸ್ಥಿತಿ ನಮಗೂ ಬರಬಹುದು. ಈಗಲೇ ನಾವೆಲ್ಲಾ ಎಚ್ಚೆತ್ತಕೊಳ್ಳಬೇಕೆಂದು ಕರೆ ನೀಡಿದರು. ಇನ್ನು ಕಾಶ್ಮೀರ ಕಣಿವೆಯಲ್ಲಿ ಮೊದಲಿನ ವೈಭವ ಮರುಕಳಿಸುವಂತೆ ಮಾಡಬೇಕು. ಪಂಡಿತರಿಗೆ ಅವರ ಆಸ್ತಿಪಾಸ್ತಿಗಳು ಮರಳಿ ನೀಡಬೇಕು. ಕಾಶ್ಮೀರ ತೊರೆದಿರುವ ಪಂಡಿತರನ್ನು ಕರೆತಂದು, ಭದ್ರತೆ ನೀಡಿ, ಅಲ್ಲಿಯೇ ನೆಲೆಸುವಂತೆ ಮಾಡಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈ ನಿಟ್ಟಿನಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು.

ಕಾಶ್ಮೀರಿ ಪಂಡಿತರ ಮೇಲೆ ನಡೆದಿರುವ ದೌರ್ಜನ್ಯ 32 ವರ್ಷಗಳ ನಂತರ ನಮ್ಮೆಲ್ಲರಿಗೂ ತಿಳಿಯುವಂತಾಯಿತು. ನಮ್ಮದೇ ದೇಶದಲ್ಲಿ ನಡೆದ ಈ ಹತ್ಯಾಕಾಂಡ ಯಾರಿಗೂ ತಿಳಿಯದಂತೆ ಅನೇಕ ಶಕ್ತಿಗಳು ಕೆಲಸ ಮಾಡಿವೆ. ಆದರೆ ಇಂದು ಇತಿಹಾಸದ ಈ ಕರಾಳ ಘಟನೆಯ ವಿವರಗಳು ನಮ್ಮೆಲ್ಲರ ಮುಂದೆ ಅನಾವರಣಗೊಂಡಿವೆ ಎಂದು ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಅಭಿಪ್ರಾಯಪಟ್ಟರು.