- ಆಧಾರ್ ಜತೆಗೆ ಮತದಾರರ ಗುರುತಿನ ಚೀಟಿ ಜೋಡಣೆ (Voter ID linked with Aadhaar)
- ಆಧಾರ್ – ವೋಟರ್ ಐಡಿ ಜೋಡಣೆ; ಕಾನೂನು ಚೌಕಟ್ಟಿನಲ್ಲೇ ನಡೆಯಲಿದೆ ಪ್ರಕ್ರಿಯೆ
- ತಾಂತ್ರಿಕ ತಜ್ಞರೊಂದಿಗೆ, ರಾಜಕೀಯ ಪಕ್ಷಗಳೊಂದಿಗೆ ಸಮಾಲೋಚನೆ
ಈಗಾಗಲೇ ಪಾನ್ಕಾರ್ಡ್ (PAN card) ಸೇರಿದಂತೆ ಹಲವು ಮಹತ್ವದ ದಾಖಲೆಗಳಿಗೆ ಆಧಾರ್ ಸಂಖ್ಯೆ (Aadhaar Number) ಲಿಂಕ್ ಮಾಡಿರುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಮುಂದುವರಿದಂತೆ ಭಾರತೀಯ ಚುನಾವಣಾ ಆಯೋಗವು (Election Commission of India) ಇದೀಗ ಮಹತ್ವದ ಹೆಜ್ಜೆಯೊಂದನ್ನು ಇಟ್ಟಿದೆ.
ಮುಂಬರುವ ಚುನಾವಣೆಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ದೇಶದ ಎಲ್ಲ ಮತದಾರರ ಗುರುತಿನ ಚೀಟಿ (Voter ID card) ಅನ್ನು ಆಧಾರ್ನೊಂದಿಗೆ ಲಿಂಕ್ ಮಾಡಲು ಮುಂದಾಗಿದೆ. ಈ ಸಂಬಂಧ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ನೇತೃತ್ವದ ಭಾರತೀಯ ಚುನಾವಣಾ ಆಯೋಗವು ಅಧಿಕಾರಿಗಳು ಹಾಗೂ ತಾಂತ್ರಿಕ ತಜ್ಞರೊಂದಿಗೆ (Technical experts) ಸಭೆ ಕೂಡ ನಡೆಸಿದೆ.
ಮತದಾರರ ಗುರುತಿನ ಚೀಟಿ ಅನ್ನು ಆಧಾರ್ನೊಂದಿಗೆ ಲಿಂಕ್ ಮಾಡುವ ಬಗ್ಗೆ ಚರ್ಚಿಸಲು ಕರೆದಿದ್ದ ಈ ನಿರ್ಣಾಯಕ ಸಭೆಯಲ್ಲಿ ಚುನಾವಣಾ ಆಯುಕ್ತರಾದ ಸುಖ್ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ, ಕೇಂದ್ರ ಗೃಹ ಕಾರ್ಯದರ್ಶಿ (Union Home Secretary) , ಶಾಸಕಾಂಗ ಇಲಾಖೆಯ ಕಾರ್ಯದರ್ಶಿ, ಯುಐಡಿಎಐ (UIDAI) ಕಾರ್ಯದರ್ಶಿ ಮತ್ತು ಸಿಇಒ ಮತ್ತು ಇಸಿಐನ (ECI) ತಾಂತ್ರಿಕ ತಜ್ಞರು ಭಾಗವಹಿಸಿದ್ದರು.

ಸಂವಿಧಾನದ 326ನೇ ವಿಧಿ ಹಾಗೂ 1950ರ ಜನತಾ ಪ್ರಾತಿನಿಧ್ಯ ಕಾಯ್ದೆಯ ಸಂಬಂಧಿತ ನಿಬಂಧನೆಗಳನ್ನು ಈ ಪ್ರಕ್ರಿಯೆಯು ಕಟ್ಟುನಿಟ್ಟಾಗಿ ಪಾಲಿಸುತ್ತದೆ ಎಂದು ಆಯೋಗವು ಸ್ಪಷ್ಟವಾಗಿ ಹೇಳಿದೆ. ಸುಪ್ರೀಂಕೋರ್ಟ್ (Supreme Court) ತೀರ್ಪಿನ ಪ್ರಕಾರ ಆಧಾರ್ ಎನ್ನುವುದು ಪೌರತ್ವವಲ್ಲ, ಅದೊಂದು ಗುರುತಿನ ಪುರಾವೆಯಾಗಿ ಮಾತ್ರ ಕಾರ್ಯನಿರ್ವಹಿಸುತ್ತದೆ.
326ನೇ ವಿಧಿಯ ಪ್ರಕಾರ ಭಾರತದ ನಾಗರಿಕರಿಗೆ ಮಾತ್ರ ಮತದಾನದ ಹಕ್ಕು ನೀಡಬಹುದು. ಆಧಾರ್ ಕಾರ್ಡ್ ವ್ಯಕ್ತಿಯ ಗುರುತನ್ನು ಮಾತ್ರ ಸ್ಥಾಪಿಸುತ್ತದೆ ಎಂದು ಆಯೋಗ ಹೇಳಿದೆ. ಹಾಗಾಗಿ ಈ ವಿಷಯದ ಕುರಿತು ಯುಐಡಿಎಐ ಮತ್ತು ಇಸಿಐ ತಜ್ಞರ ನಡುವೆ ಶೀಘ್ರದಲ್ಲೇ ತಾಂತ್ರಿಕ ಸಮಾಲೋಚನೆ (Technical consultation) ನಡೆಯಲಿವೆ ಎಂದು ತಿಳಿದುಬಂದಿದೆ.
ಚುನಾವಣಾ ಆಯೋಗವು ಇದೇ ಈ ತಿಂಗಳಾಂತ್ಯದೊಳಗೆ ಚುನಾವಣಾ ನೋಂದಣಿ ಅಧಿಕಾರಿಗಳು (Electoral Registration Officers), ಜಿಲ್ಲಾ ಚುನಾವಣಾ ಅಧಿಕಾರಿಗಳು ಮತ್ತು ಮುಖ್ಯ ಚುನಾವಣಾ ಅಧಿಕಾರಿಗಳ ಮಟ್ಟದಲ್ಲಿ ಸರ್ವಪಕ್ಷ ಸಭೆಗಳನ್ನು ನಡೆಸಲು ಸಜ್ಜಾಗಿದೆ. ಈ ಹೊಸ ನಿರ್ಧಾರವು ಚುನಾವಣಾ ನಿರ್ವಹಣೆಯ ಪ್ರತಿಯೊಂದು ಹಂತದಲ್ಲೂ ರಾಜಕೀಯ ಪಕ್ಷಗಳೊಂದಿಗೆ (Political parties) ನೇರ ಸಂಬಂಧವನ್ನು ಬೆಳೆಸಲು ಪ್ರಯತ್ನಿಸುತ್ತದೆ.
ಇದನ್ನೂ ಓದಿ:ಆಸ್ತಿ ತೆರಿಗೆ ಬಾಕಿ ಪಾವತಿಸಿ:ಇಲ್ಲದಿದ್ದರೆ 100 ಪ್ರತಿಶತ ದಂಡ ಗ್ಯಾರಂಟಿ-ಪಾವತಿಸುವ ವಿಧಾನ ಹೀಗಿದೆ
ಅಲ್ಲದೆ ಅವರ ಸಲಹೆಗಳನ್ನು ಕೂಡ ಕೇಳಲಾಗುತ್ತದೆ. ಮುಂಬರುವ ಚುನಾವಣೆಗಳಿಗೆ ಮುಂಚಿತವಾಗಿ ಚುನಾವಣಾ ಪ್ರಕ್ರಿಯೆಯಲ್ಲಿ ಪಾರದರ್ಶಕತೆ, ಒಳಗೊಳ್ಳುವಿಕೆ ಮತ್ತು ದಕ್ಷತೆಯನ್ನು ಹೆಚ್ಚಿಸುವ ಗುರಿಯೊಂದಿಗೆ ಈ ಕ್ರಮಕ್ಕೆ ಮುಂದಾಗಿರುವುದಾಗಿ ಭಾರತೀಯ ಚುನಾವಣಾ ಆಯೋಗದ ಮೂಲಗಳು ತಿಳಿಸಿವೆ.
ಇದೇ ಮೊದಲ ಬಾರಿಗೆ ಚುನಾವಣಾ ಆಯೋಗವು 2025 ರ ಏಪ್ರಿಲ್ 30 ರೊಳಗೆ ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದಲ್ಲಿ ಎಲ್ಲಾ ಮಾನ್ಯತೆ ಪಡೆದ ರಾಜಕೀಯ ಪಕ್ಷಗಳಿಂದ ಸಲಹೆಗಳನ್ನು ಕೋರಿದೆ. ಇದಲ್ಲದೆ, 2025 ರ ಮಾರ್ಚ್ 31 ರವರೆಗೆ ಚುನಾವಣಾ ನೋಂದಣಿ ಅಧಿಕಾರಿಗಳು (Electoral Registration Officers), ಜಿಲ್ಲಾ ಚುನಾವಣಾ ಅಧಿಕಾರಿಗಳು ಮತ್ತು ಮುಖ್ಯ ಚುನಾವಣಾ ಅಧಿಕಾರಿಗಳೊಂದಿಗೆ ಸಭೆಗಳನ್ನು ನಡೆಸಲಾಗುವುದು.
ಚುನಾವಣಾ ಪ್ರಕ್ರಿಯೆಯಲ್ಲಿ ವಿಶ್ವಾಸ ಮತ್ತು ಪಾರದರ್ಶಕತೆ ಇರುವಂತೆ ರಾಜಕೀಯ ಪಕ್ಷಗಳ (Voter ID linked with Aadhaar) ಕಾಳಜಿ ಮತ್ತು ಸಲಹೆಗಳನ್ನು ಈ ಸಭೆಗಳಲ್ಲಿ ಪರಿಗಣಿಸಲಾಗುವುದು ಎಂದು ಭಾರತದ ಚುನಾವಣಾ ಆಯೋಗವು ವಿವರಿಸಿದೆ.