ಕೊಚ್ಚಿ ಮಾದರಿಯನ್ನು ದೇಶಾದ್ಯಂತ (water metro project in india) ವಿಸ್ತರಿಸಲು ಸಿದ್ಧತೆ
ಸಂಚಾರ ದಟ್ಟಣೆ ಕಡಿತ, ಪರಿಸರ ಸ್ನೇಹಿ ಪ್ರಯಾಣಕ್ಕೆ ಉತ್ತೇಜನ
ವಾರಣಾಸಿ, ಅಯೋಧ್ಯೆ ಸೇರಿ ಹಲವು ನಗರಗಳಲ್ಲಿ ಜಲಮಾರ್ಗ ಸಾರಿಗೆ ಆರಂಭಕ್ಕೆ ತಯಾರಿ
New Delhi : ದೇಶದ ನಗರ ಸಾರಿಗೆ ವ್ಯವಸ್ಥೆಯಲ್ಲಿ ನಾವೀನ್ಯತೆ ತರಲು (water metro project in india) ಕೇಂದ್ರ ಸರ್ಕಾರ ಮಹತ್ವದ ಯೋಜನೆ ರೂಪಿಸಿದೆ.
ಕೇರಳದ ಕೊಚ್ಚಿಯಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿರುವ ವಾಟರ್ ಮೆಟ್ರೋ (Water Metro) ಮಾದರಿಯನ್ನು ಈಗ ದೇಶದ 18 ಪ್ರಮುಖ ನಗರಗಳಿಗೆ ವಿಸ್ತರಿಸಲು ಕೇಂದ್ರ ಸರ್ಕಾರ ಸಜ್ಜಾಗಿದೆ.
ಬಂದರುಗಳು, ಹಡಗು ಹಾಗೂ ಜಲಮಾರ್ಗಗಳ ಸಚಿವಾಲಯ ಈ ಸಂಬಂಧ ಸಕ್ರೀಯ ತಯಾರಿಯನ್ನು ಆರಂಭಿಸಿದ್ದು, ಕರಡು ರಾಷ್ಟ್ರೀಯ ಜಲ ಮೆಟ್ರೋ ನೀತಿಯನ್ನೂ ಸಿದ್ಧಪಡಿಸಿದೆ ಎಂದು ಮೂಲಗಳು ತಿಳಿಸಿವೆ.
ನಗರಗಳಲ್ಲಿ ಹೆಚ್ಚುತ್ತಿರುವ ವಾಹನ ದಟ್ಟಣೆ, ವಾಯು ಮಾಲಿನ್ಯ ಮತ್ತು ಸಾರ್ವಜನಿಕ ಸಾರಿಗೆ ಒತ್ತಡವನ್ನು ಕಡಿಮೆ ಮಾಡುವ ಉದ್ದೇಶದಿಂದ ಈ ಯೋಜನೆಗೆ ಹೆಚ್ಚಿನ ಮಹತ್ವ ನೀಡಲಾಗಿದೆ.

ಮೊದಲ ಹಂತದಲ್ಲಿ ಉತ್ತರ ಪ್ರದೇಶದ ವಾರಣಾಸಿ, ಅಯೋಧ್ಯೆ ಮತ್ತು ಪ್ರಯಾಗ್‌ರಾಜ್ (Prayagraj) ನಗರಗಳನ್ನು ವಾಟರ್ ಮೆಟ್ರೋ (water metro project in india)
ಯೋಜನೆಗೆ ಸೇರಿಸಲು ತೀರ್ಮಾನಿಸಲಾಗಿದೆ. ಜೊತೆಗೆ ಜಮ್ಮು-ಕಾಶ್ಮೀರದ ಶ್ರೀನಗರ ಮತ್ತು ಬಿಹಾರದ ಪಾಟ್ನಾವನ್ನೂ ಈ ಪಟ್ಟಿಯಲ್ಲಿ ಸೇರಿಸಲಾಗಿದೆ.
ಎರಡನೇ ಹಂತದಲ್ಲಿ ಅಸ್ಸಾಂನ ತೇಜ್‌ಪುರ ಹಾಗೂ ದಿಬ್ರುಗಢ ನಗರಗಳಲ್ಲಿ ಈ ಸೇವೆ ಆರಂಭಿಸುವ ಸಾಧ್ಯತೆ ಇದೆ. ನದಿಗಳು, ಹಳ್ಳಗಳು ಮತ್ತು ಜಲಮಾರ್ಗಗಳನ್ನು
ಪರಿಣಾಮಕಾರಿಯಾಗಿ ಬಳಸಿಕೊಂಡು ನಗರ ಸಂಚಾರಕ್ಕೆ ಹೊಸ ಪರ್ಯಾಯ ಒದಗಿಸುವ ಉದ್ದೇಶ ಈ ಯೋಜನೆಯ ಹಿಂದಿದೆ.
ಸ್ಥಳೀಯ ಜನರಿಗೆ ಕಡಿಮೆ ವೆಚ್ಚದಲ್ಲಿ ಸುರಕ್ಷಿತ ಹಾಗೂ ವೇಗವಾದ ಪ್ರಯಾಣ ವ್ಯವಸ್ಥೆ ಒದಗಿಸುವುದರ ಜೊತೆಗೆ ಪ್ರವಾಸೋದ್ಯಮ ಅಭಿವೃದ್ಧಿಗೂ ಇದು ಸಹಕಾರಿಯಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ವಾಟರ್ ಮೆಟ್ರೋ ವ್ಯವಸ್ಥೆ ಪರಿಸರ ಸ್ನೇಹಿ ಸಾರಿಗೆ ಮಾದರಿಯಾಗಿದ್ದು, ವಿದ್ಯುತ್ ಚಾಲಿತ ಹಾಗೂ ಹೈಬ್ರಿಡ್ ದೋಣಿಗಳನ್ನು ಬಳಸುವ ಮೂಲಕ ಇಂಧನ ಬಳಕೆ ಮತ್ತು ಮಾಲಿನ್ಯವನ್ನು ಕಡಿಮೆ ಮಾಡಬಹುದು.
ನಗರಗಳಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ವಾಹನ ಸಂಚಾರದಿಂದ ರಸ್ತೆಗಳಲ್ಲಿ ಉಂಟಾಗುವ ಟ್ರಾಫಿಕ್ (Traffic) ಸಮಸ್ಯೆಗೆ ಇದು ಪರ್ಯಾಯ ಪರಿಹಾರವಾಗಿ ಕಾಣುತ್ತಿದೆ.
ರಸ್ತೆ ಮತ್ತು ರೈಲು ಮಾರ್ಗಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡುವುದರ ಜೊತೆಗೆ ಜನರಿಗೆ ಸಮಯ ಉಳಿತಾಯ ಮಾಡುವ ವ್ಯವಸ್ಥೆಯೂ ಆಗಲಿದೆ.
ಜಲಮಾರ್ಗಗಳ ಮೂಲಕ ಸಂಪರ್ಕ ಹೆಚ್ಚುವುದರಿಂದ ವ್ಯಾಪಾರ ಚಟುವಟಿಕೆಗಳಿಗೂ ಉತ್ತೇಜನ ಸಿಗುವ ನಿರೀಕ್ಷೆ ಇದೆ. ವಿಶೇಷವಾಗಿ ನದಿ ತೀರ ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಈ ಸೇವೆ ಹೆಚ್ಚು ಅನುಕೂಲಕರವಾಗಲಿದೆ.
2023ರ ಏಪ್ರಿಲ್ 25ರಂದು ಕೇರಳದ ಕೊಚ್ಚಿಯಲ್ಲಿ ಆರಂಭವಾದ ವಾಟರ್ ಮೆಟ್ರೋ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಚಾಲನೆ ನೀಡಿದ್ದರು.
ಆರಂಭಿಕ ಹಂತದಲ್ಲೇ ಈ ಯೋಜನೆ ಜನರಿಂದ ಉತ್ತಮ ಪ್ರತಿಕ್ರಿಯೆ ಪಡೆದಿದ್ದು, ಈಗ ದೇಶದ ಮಾದರಿ ಯೋಜನೆಗಳಲ್ಲೊಂದು ಎಂದು ಪರಿಗಣಿಸಲಾಗಿದೆ.
ಕೊಚ್ಚಿ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಜನರು ದಿನನಿತ್ಯದ ಪ್ರಯಾಣಕ್ಕಾಗಿ ಈ ಸೇವೆಯನ್ನು ಹೆಚ್ಚಿನ ಸಂಖ್ಯೆಯಲ್ಲಿ ಬಳಸುತ್ತಿದ್ದಾರೆ.
ಸುರಕ್ಷಿತ, ಸುಲಭ ಮತ್ತು ಕೈಗೆಟಕುವ ದರದಲ್ಲಿ ಪ್ರಯಾಣ ಸೌಲಭ್ಯ ದೊರೆಯುತ್ತಿರುವುದರಿಂದ ಸಾರ್ವಜನಿಕರ ಮೆಚ್ಚುಗೆಗೂ ಪಾತ್ರವಾಗಿದೆ.
ಆರಂಭದಲ್ಲಿ ಎರಡು ಮಾರ್ಗಗಳಲ್ಲಿ ಎಂಟು ವಿದ್ಯುತ್ ಹೈಬ್ರಿಡ್ (Hybrid) ದೋಣಿಗಳೊಂದಿಗೆ ಸೇವೆ ಪ್ರಾರಂಭವಾಗಿತ್ತು. ಹೈಕೋರ್ಟ್‌ನಿಂದ ವೈಪಿನ್‌ವರೆಗೆ ಪ್ರಯಾಣ ದರವನ್ನು 20 ರೂಪಾಯಿಯಾಗಿ ಮತ್ತು ವೈಟ್ಟಿಲ–ಕಾಕ್ಕನಾಡು ಮಾರ್ಗಕ್ಕೆ 30 ರೂಪಾಯಿಯಾಗಿ ನಿಗದಿಪಡಿಸಲಾಗಿತ್ತು.
ಕೊಚ್ಚಿಯಲ್ಲಿ ಕಂಡ ಯಶಸ್ಸಿನ ಬಳಿಕ ಇದೀಗ ದೇಶದ ಇತರ ಮಹಾನಗರಗಳಲ್ಲೂ ಇದೇ ಮಾದರಿಯನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ಮುಂದಾಗಿದೆ. ಭವಿಷ್ಯದಲ್ಲಿ
ಬೆಂಗಳೂರು, ಮಂಗಳೂರು, ಕೋಲ್ಕತ್ತಾ, ಮುಂಬೈ ಸೇರಿದಂತೆ ಜಲಮಾರ್ಗಗಳಿರುವ ನಗರಗಳಲ್ಲೂ ವಾಟರ್ ಮೆಟ್ರೋ ಯೋಜನೆ ಜಾರಿಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ನಗರ ಅಭಿವೃದ್ಧಿ ಮತ್ತು ಪರಿಸರ ಸಂರಕ್ಷಣೆಯನ್ನು ಒಟ್ಟಿಗೆ ಕೊಂಡೊಯ್ಯುವ ಈ ಯೋಜನೆ, ಭಾರತದ ಸಾರ್ವಜನಿಕ ಸಾರಿಗೆ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆಗೆ ಕಾರಣವಾಗಬಹುದು ಎಂಬ ನಿರೀಕ್ಷೆ ವ್ಯಕ್ತವಾಗಿದೆ.
ಸಾರ್ವಜನಿಕರಿಗೆ ವೇಗವಾದ, ಸುರಕ್ಷಿತ ಮತ್ತು ಮಾಲಿನ್ಯರಹಿತ ಪ್ರಯಾಣ ಸೌಲಭ್ಯ ಒದಗಿಸುವ ಮೂಲಕ ದೇಶದ ನಗರ ಸಾರಿಗೆ ವ್ಯವಸ್ಥೆಗೆ ಹೊಸ ರೂಪ ನೀಡುವ ದಿಕ್ಕಿನಲ್ಲಿ ಕೇಂದ್ರ ಸರ್ಕಾರ ದೊಡ್ಡ ಹೆಜ್ಜೆ ಇಟ್ಟಿದೆ.
ಇದನ್ನು ಓದಿ : https://vijayatimes.com/ksrtc-bmtc-employees-strike-2/