ನಾನು ಮತ್ತು ನಮ್ಮ ಪಕ್ಷದ ರಾಜ್ಯಾಧ್ಯಕ್ಷರಾದ ಡಿ.ಕೆ.ಶಿವಕುಮಾರ್(DK Shivkumar) ಒಟ್ಟಾಗಿದ್ದೇವೆ. ನಮ್ಮ ನಡುವೆ ಯಾವುದೇ ಬಿರುಕಿಲ್ಲ. ನಮ್ಮ ನಡುವೆ ಬಿರುಕಿದೆ ಎಂದು ವಿರೋಧ ಪಕ್ಷಗಳು ಮತ್ತು ಮಾಧ್ಯಮಗಳು ಸುಳ್ಳು ಸುದ್ದಿಯನ್ನು ಹಬ್ಬಿಸುವ ಮೂಲಕ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿವೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ(Siddaramaiah) ಸ್ಪಷ್ಟಪಡಿಸಿದರು. ದಾವಣಗೆರೆಯಲ್ಲಿ(Davangere) ತಮ್ಮ 75ನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನನ್ನ ಮತ್ತು ಶಿವಕುಮಾರ್ ನಡುವೆ ಬಿರುಕಿದೆ ಎಂದು ಮಾಧ್ಯಮಗಳು ಸುಳ್ಳು ಸೃಷ್ಟಿ ಮಾಡಿವೆ.

ನಾವಿಬ್ಬರೂ ಒಗ್ಗಟ್ಟಾಗಿದ್ದೇವೆ. ನಮ್ಮಿಬ್ಬರ ಮುಂದಿರುವ ಗುರಿ ಎಂದರೇ, ಭ್ರಷ್ಟ, ಕೋಮುವಾದಿ ಮತ್ತು ಜನಪೀಡಕ ಸರ್ಕಾರವನ್ನು ಕಿತ್ತೊಗೆದು, ರಾಹುಲ್ ಗಾಂಧಿ(Rahul Gandhi) ಅವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷವನ್ನು(Congress Party) ರಾಜ್ಯದಲ್ಲಿ ಅಧಿಕಾರಕ್ಕೆ ತರುವುದೇ ನಮ್ಮ ಗುರಿಯಾಗಿದೆ. ಈ ನಿಟ್ಟಿನಲ್ಲಿ ನಾವಿಬ್ಬರೂ ಒಂದಾಗಿ ಶ್ರಮಿಸುತ್ತೇವೆ ಎಂದರು. ಇನ್ನು ರಾಜ್ಯದಲ್ಲಿರುವ ಭ್ರಷ್ಟ, ಕೋಮುವಾದಿ ಮತ್ತು ಜನಪೀಡಕ ಸರ್ಕಾರವನ್ನು ಕಿತ್ತೊಗೆಯಲು ನಿಮ್ಮೆಲ್ಲರ ಆರ್ಶೀವಾದ ನಮಗೆ ಬೇಕಿದೆ. ನನ್ನ ಹುಟ್ಟುಹಬ್ಬದ ಪ್ರಯುಕ್ತ ನನಗೆ ಶುಭಕೋರಲು ವಿವಿಧ ಜಿಲ್ಲೆಗಳಿಂದ ಲಕ್ಷಾಂತರ ಜನರು ಇಲ್ಲಿಗೆ ಬಂದಿದ್ದೀರಿ,
ನೀವೆಲ್ಲರೂ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕು. ಆ ಮೂಲಕ ಜನಪೀಡಕ ಬಿಜೆಪಿ ಸರ್ಕಾರವನ್ನು ಕಿತ್ತು ಹಾಕಬೇಕೆಂದು ಮನವಿ ಮಾಡಿದರು. ಇನ್ನು ನಾನು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದ ದಿನದಿಂದಲೂ, ರಾಹುಲ್ ಗಾಂಧಿ ಅವರು ನನಗೆ ಬೆಂಬಲವಾಗಿ ನಿಂತಿದ್ದಾರೆ. ನಾನು ಬೇರೆ ಪಕ್ಷದಿಂದ ಬಂದಿದ್ದರು, ನನಗೆ ಬೆಂಬಲ ನೀಡಿ, ಮುಖ್ಯಮಂತ್ರಿ ಮಾಡಿದರು. ನಾನು ಮುಖ್ಯಮಂತ್ರಿಯಾಗಲು ಸೋನಿಯಾ ಗಾಂಧಿ(Sonia Gandhi) ಮತ್ತು ರಾಹುಲ್ ಗಾಂಧಿ ಅವರೇ ಕಾರಣ.

ರಾಹುಲ್ ಗಾಂಧಿ ಅವರು ಯಾರ ಹುಟ್ಟುಹಬ್ಬಕ್ಕೂ ಸಾಮಾನ್ಯವಾಗಿ ಹೋಗುವುದಿಲ್ಲ. ಆದರೆ ಇಂದು ನನ್ನ ಹುಟ್ಟುಹಬ್ಬಕ್ಕೆ ಬಂದಿದ್ದಾರೆ. ಅವರಿಗೆ ನನ್ನ ಕೋಟಿ, ಕೋಟಿ ನಮನಗಳು ಎಂದರು.