ಬೆಂಗಳೂರು ಜು 26: ಯಡಿಯೂರಪ್ಪ ರಾಜೀನಾಮೆ ನಿರೀಕ್ಷಿತವಾಗಿದ್ದು, ಈ ಹಿಂದೆ ನಾನು ಹೇಳಿರುವುದು ನಿಜವಾಗಿದೆ. ಹೀಗಾಗಿ ಈ ಬಗ್ಗೆ ಸಂಭ್ರಮ ಪಡುವಂತಹದ್ದೇನು ಇಲ್ಲ. ಆದರೆ ಭ್ರಷ್ಟ ಬಿಜೆಪಿಯನ್ನ ಚುನಾವಣೆಯಲ್ಲಿ ಸೋಲಿಸಿದಾಗಲೇ ನಾವು ಸಂಭ್ರಮಿಸುವುದು. ಆ ದಿನಗಳು ಸದ್ಯದಲ್ಲಿಯೇ ಬರಲಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಮುಖ್ಯಮಂತ್ರಿ ಸ್ಥಾನಕ್ಕೆ ಯಡಿಯೂರಪ್ಪ ರಾಜೀನಾಮೆ ನೀಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ಯಡಿಯೂರಪ್ಪ ಅವರ ಬಗ್ಗೆ ನನಗೆ ಅನುಕಂಪವಿದೆ. ಅವರಿಗೆ ವಯಸ್ಸಾಯಿತೆಂದು ಅವರ ಪಕ್ಷದ ದೆಹಲಿ ನಾಯಕರೇ ಹೇಳುತ್ತಿದ್ದಾರೆ. ಅವರ ಮುಂದಿನ ಜೀವನ ಸುಖಕರವಾಗಿರಲಿ, ಅವರಿಗೆ ನೆಮ್ಮದಿ ಸಿಗಲಿ ಎಂದಷ್ಟೇ ನಾನು ಆಶಿಸುತ್ತೇನೆ. ಆದರೆ ಬಿಎಸ್ವೈ ಅವರು ಹೋದರೂ, ಇನ್ನೊಬ್ಬರು ಬಂದರೂ ಅದರ ಭ್ರಷ್ಟತೆಯ ಆತ್ಮ ಬದಲಾಗುವುದಿಲ್ಲ. ದುಡ್ಡಿನ ಬಲದಿಂದ ನಡೆಸಿದ್ದ ಆಪರೇಷನ್ ಕಮಲ ಎಂಬ ಅನೈತಿಕ ಹಾದಿಯಿಂದ ಅಧಿಕಾರಕ್ಕೆ ಬಂದಿರುವ ಬಿಜೆಪಿ ಸರ್ಕಾರ ತೊಲಗಿದಾಗಲೇ ಕರ್ನಾಟಕದ ಜನತೆಗೆ ನೆಮ್ಮದಿ ಎಂದು ಕಿಡಿಕಾರಿದ್ದಾರೆ.
ಚುನಾವಣೆಯಲ್ಲಿ ಸೋತಾಗ ಮುಖ್ಯಮಂತ್ರಿ ರಾಜೀನಾಮೆ ಕೊಡುವುದು ಪ್ರಜಾಪ್ರಭುತ್ವದ ರೂಢಿ. ಆದರೆ ಶಾಸನ ಸಭೆಯಲ್ಲಿ ಬಹುಮತ ಹೊಂದಿದ್ದ ಪಕ್ಷದ ಮುಖ್ಯಮಂತ್ರಿ ರಾಜೀನಾಮೆ ನೀಡಿದಾಗ, ಅದಕ್ಕೆ ಕಾರಣವನ್ನು ನೀಡಬೇಕಾಗುತ್ತದೆ. ಯಡಿಯೂರಪ್ಪ ರಾಜೀನಾಮೆಗೆ ಕಾರಣ ಅವರ ವಯಸ್ಸೇ ಇಲ್ಲವೇ ಅವರ ಸರ್ಕಾರದ ಭ್ರಷ್ಟಾಚಾರವೇ? ಎಂದು ಪ್ರಶ್ನೆ ಮಾಡಿರುವ ಅವರು, BJP ಎಂದರೆ ‘ಭ್ರಷ್ಟಾಚಾರ ಜಾರಿ ಪಾರ್ಟಿ’. ಯಡಿಯೂರಪ್ಪ ಭ್ರಷ್ಟಾಚಾರದ ಬಗ್ಗೆ ಅವರ ಪಕ್ಷದ ಶಾಸಕರೇ ಬಾಯ್ತುಂಬ ಮಾತನಾಡಿದ್ದಾರೆ. ‘ನಾ ಖಾವುಂಗಾ, ನಾ ಖಾನೆ ದೂಂಗಾ’ ಎಂದು ಹೇಳುತ್ತಿರುವ ನರೇಂದ್ರ ಮೋದಿ ಅವರಿಗೆ ಒಂದಿಷ್ಟು ಮರ್ಯಾದೆ ಇದ್ದರೆ, ಯಡಿಯೂರಪ್ಪನವರ ಮೇಲಿನ ಭ್ರಷ್ಟಾಚಾರದ ಆರೋಪದ ಬಗ್ಗೆ ತನಿಖೆಗೆ ಆದೇಶಿಸಲಿ ಎಂದು ಆಗ್ರಹಿಸಿದ್ದಾರೆ.