ನವದೆಹಲಿ, ಮಾ. 16: ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲಿರುವ ಬಿಜೆಪಿ ಅಭ್ಯರ್ಥಿ, ಅಂಕಣಕಾರ ಸ್ವಪನ್ ದಾಸ್ಗುಪ್ತಾ ರಾಜ್ಯಸಭಾ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ರಾಜ್ಯಸಭೆಗೆ ನಾಮನಿರ್ದೇಶಿತ ಸದಸ್ಯರು ಯಾವುದೇ ರಾಜಕೀಯ ಪಕ್ಷಕ್ಕೆ ಸೇರಬಾರದು ಎಂದು ಸಂವಿಧಾನದ ನಿಯಮಗಳು ಹೇಳುತ್ತವೆ ಎಂದು ತೃಣಮೂಲ ಕಾಂಗ್ರೆಸ್ ಹೇಳಿದ್ದರ ಬೆನ್ನಲ್ಲೇ ಸ್ವಪನ್ ದಾಸ್ಗುಪ್ತಾ ರಾಜೀನಾಮೆ ನೀಡಿದ್ದಾರೆ. ಗುಪ್ತಾ ಅವರು ಮಂಗಳವಾರ ತಮ್ಮ ರಾಜೀನಾಮೆ ಪತ್ರ ಕಳುಹಿಸಿದ್ದು, ನಾಳೆ ಅದು ಸ್ವೀಕೃತವಾಗಲಿದೆ.
`ನಾನು ರಾಷ್ಟ್ರಪತಿಯವರಿಂದ ನಾಮನಿರ್ದೇಶಿತನಾಗಿರುವ ರಾಜ್ಯ ಸಭಾ ಸದಸ್ಯನಾಗಿದ್ದೇನೆ, ನಾನು ಈ ಬಾರಿಯ ಚುನಾವಣೆಯಲ್ಲಿ ತಾರಕೇಶ್ವರ್ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದೇನೆ. ಈ ಎರಡು ವಿಷಯಗಳಲ್ಲಿ ಹಲವಾರು ಸಮಸ್ಯೆಗಳಿವೆ. ನಾನು ನಾಮಪತ್ರ ಸಲ್ಲಿಸುವ ಹೊತ್ತಿಗೆ ಈ ಸಮಸ್ಯೆಗಳೆಲ್ಲ ಕಾಣಿಸಿಕೊಂಡಿವೆ. ನಾನು ಇಲ್ಲಿಯವರೆಗೆ ನಾಮಪತ್ರ ಸಲ್ಲಿಸಿಲ್ಲ , ಗುರುವಾರ ಅಥವಾ ಶುಕ್ರವಾರ ನಾಮಪತ್ರ ಸಲ್ಲಿಸಲಿದ್ದೇನೆ’ ಎಂದು ದಾಸ್ಗುಪ್ತಾ ಹೇಳಿದ್ದಾರೆ.
ರಾಜ್ಯಸಭಾ ಸದಸ್ಯರೊಬ್ಬರು ರಾಜಕೀಯ ಪಕ್ಷಕ್ಕೆ ಸೇರಿದರೆ ಅವರನ್ನು ರಾಜ್ಯಸಭೆ ಅನರ್ಹಗೊಳಿಸಬಹುದು ಎಂದು ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಟ್ವೀಟ್ ಮಾಡಿದ್ದರು. ಈ ಬಗ್ಗೆ ಕೇಳಿದಾಗ, ನಾನು ಯಾವುದರ ಬಗ್ಗೆಯೂ ಪ್ರತಿಕ್ರಿಯೆ ನೀಡುವುದಿಲ್ಲ. ಹಲವಾರು ವಿಷಯಗಳನ್ನು ಅರ್ಥ ಮಾಡಿಕೊಳ್ಳುವುದಿದೆ. ನಾಮಪತ್ರ ಸಲ್ಲಿಸುವ ಮುನ್ನ ಸಂಸತ್ ಸೇರಿದಂತೆ ಇತರ ಸಂಸ್ಥೆಗಳಿಂದ ಅನುಮತಿ ಪಡೆಯಬೇಕಿದೆ. ಈ ಪ್ರಕ್ರಿಯೆ ನಡೆದ ನಂತರವೇ ನಾನು ನಾಮಪತ್ರ ಸಲ್ಲಿಸುತ್ತೇನೆ ಎಂದಿದ್ದಾರೆ ಗುಪ್ತಾ.
ದಾಸ್ ಗುಪ್ತಾ ಅವರನ್ನು 2016ರಲ್ಲಿ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ನಾಮನಿರ್ದೇಶನ ಮಾಡಿದ್ದು, ೨೦೨೨ರ ಏಪ್ರಿಲ್ ಗೆ ಅವರ ಅಧಿಕಾರವಧಿ ಕೊನೆಗೊಳ್ಳಲಿದೆ. ಸ್ವಪನ್ ದಾಸ್ ಗುಪ್ತಾ ಅವರು ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ.