ಹಣ್ಣುಗಳು ಮತ್ತು ತರಕಾರಿಗಳನ್ನು ಫ್ರೆಶ್ ಆಗಿಡುವುದು ಸವಾಲಿನ ಕೆಲಸವೇ.. ಕೆಲವೊಂದು ತರಕಾರಿಗಳು ಮತ್ತು ಹಣ್ಣುಗಳನ್ನು ಸ್ವಲ್ಪ ಸಮಯ ಇಟ್ಟರೆ ಸಾಕು ಅವು ಒಣಗಲು ಶುರುವಾಗುತ್ತವೆ. ಅಂತಹವುಗಳನ್ನು ಫ್ರಿಡ್ಜ್ ನಲ್ಲಿ ಇಟ್ಟರೂ ಸಹ ಏನೂ ಪ್ರಯೋಜನವಾಗುವುದಿಲ್ಲ. ಅಂತಹ ಸಮಯದಲ್ಲಿ ಈ ಕೆಳಗಿನ ಸಲಹೆಗಳನ್ನು ಪಾಲಿಸುವ ಮೂಲಕ ಹಣ್ಣುಗಳು ಮತ್ತು ತರಕಾರಿಗಳನ್ನು ತಾಜಾವಾಗಿರಿಸಿಕೊಳ್ಳಲು ಸಾಧ್ಯ.
ಆಲೂಗಡ್ಡೆ:
ಆಲೂಗಡ್ಡೆಗಳನ್ನು ಯಾವಾಗಲೂ ಸೇಬಿನೊಂದಿಗೆ ಸಂಗ್ರಹಿಸಿ. ಇವುಗಳನ್ನು ಸೇಬಿನೊಂದಿಗೆ ಇಡುವುದರಿಂದ ಅದರ ಬಳಕೆಯ ಜೀವಿತಾವಧಿಯನ್ನು ಹೆಚ್ಚಾಗುತ್ತದೆ. ಆದ್ದರಿಂದ ಇವುಗಳನ್ನು ಸೇಬಿನೊಂದಿಗೆ ಸಂಗ್ರಹಿಸಿ ಇಡುವುದು ಇದರ ತಾಜಾತನವನ್ನು ಮತ್ತಷ್ಟು ಕಾಲ ಹೆಚ್ಚಿಸುವುದು.
ನಿಂಬೆ:
ನಿಂಬೆ ಕತ್ತರಿಸಿ ಎಂದಿಗೂ ಅದನ್ನು ಅರ್ಧದಲ್ಲಿ ಇಡಬೇಡಿ. ಅದರ ಬದಲಿಗೆ ನಿಂಬೆಗೆ ಒಂದು ಫೋರ್ಕ್ ಚುಚ್ಚಿ, ಅಗತ್ಯವಿರುವಂತೆ ರಸವನ್ನು ಹೊರತೆಗೆಯಿರಿ. ಇದರಿಂದ ನಿಂಬೆ ಹಾಳಾಗದೇ ದೀರ್ಘಕಾಲದವರೆಗೆ ಇರುತ್ತದೆ ಹಾಗೂ ಫ್ರೆಶ್ ಆಗಿ ಇರುವುದು.
ಸೇಬು:
ಸಾಮಾನ್ಯವಾಗಿ ಸೇಬನ್ನು ಕತ್ತರಿಸಿದಾಗ, ಅದು ಕಂದು ಬಣ್ಣಕ್ಕೆ ತಿರುಗುತ್ತದೆ. ಆದ್ದರಿಂದ, ಕತ್ತರಿಸಿದ ಸೇಬನ್ನು ಒಂದು ಲೋಟ ನೀರಿನಲ್ಲಿ ಉಪ್ಪು ಹಾಕಿ ಸ್ವಲ್ಪ ಸಮಯದವರೆಗೆ ಇರಿಸಿ. ನಂತರ ಅದನ್ನು ಗಾಳಿಯಾಡಾದ ಬಿಗಿಯಾದ ಪಾತ್ರೆಯಲ್ಲಿ ಹಾಕಿ ಸಂಗ್ರಹಿಸಿ. ಇದರಿಂದ ಕಂದು ಬಣ್ಣಕ್ಕೆ ತಿರುಗುವುದಿಲ್ಲ.
ಸೊಪ್ಪು:
ಹಸಿರು ಸೊಪ್ಪುಗಳನ್ನು ಹೆಚ್ಚು ದಿನ ಸಂಗ್ರಹಿಸಲು ಸಾಧ್ಯವಾಗುವುದಿಲ್ಲ, ಬೇಗ ಬಾಡಿ ಹೋಗುತ್ತವೆ ಅಥವಾ ಕೊಳೆಯಲಾರಂಭಿಸುತ್ತವೆ. ಅದಕ್ಕಾಗಿ ಹಸಿರು ಸೊಪ್ಪು ಅಥವಾ ಎಲೆಗಳ ತರಕಾರಿಗಳ ಕಾಂಡಗಳನ್ನು ಮುರಿದು ಕಾಗದದಲ್ಲಿ ಸುತ್ತಿಡಿ. ಇದರಿಂದ ಸೊಪ್ಪಿನ ತರಕಾರಿಗಳು ಕೊಳೆಯುವುದಿಲ್ಲ ಜೊತೆಗೆ ಸೊಪ್ಪನ್ನು ಹೆಚ್ಚು ಕಾಲ ಉಳಿಯುವಂತೆ ಮಾಡುತ್ತದೆ.
ಕ್ಯಾರೆಟ್:
ಕ್ಯಾರೆಟ್ ಗಳನ್ನು ಸ್ವಲ್ಪ ಕಾಲ ಫ್ರಿಜರ್ ನಲ್ಲಿ ಇಟ್ಟರೆ ಅವು ಒಣಗಲು ಪ್ರಾರಂಭವಾಗುವುದು ನೋಡಿದ್ದೀರಾ. ಇದನ್ನು ತಡೆಯಲು ಕ್ಯಾರೆಟ್‌ಗಳನ್ನು ಪ್ಲಾಸ್ಟಿಕ್ ಪಾತ್ರೆಯಲ್ಲಿ ಹಾಕಿ, ಅದಕ್ಕೆ ನೀರನ್ನು ಸೇರಿಸಿ ಮುಚ್ಚಳವನ್ನು ಮುಚ್ಚಿ ಫ್ರಿಜ್ನಲ್ಲಿಡಿ. ಇದು ಕ್ಯಾರೆಟ್ ಹೆಚ್ಚು ಕಾಲ ಉಳಿಯುವಂತೆ ಮಾಡುವುದಲ್ಲದೇ ಫ್ರೆಶ್ ಆಗಿ ಇರುವಂತೆ ಮಾಡುವುದು.
ಸ್ಟ್ರಾಬೆರಿ:
ಸ್ಟ್ರಾಬೆರಿಗಳು ಹೆಚ್ಚು ಕಾಲ ಉಳಿಯಬೇಕಾದರೆ, ಅವುಗಳನ್ನು ಒಂದು ಲೋಟ ನೀರಿಗೆ ಒಂದು ಟೀ ಚಮಚ ವಿನೆಗರ್ ಸೇರಿಸಿದ ಮಿಶ್ರಣದಲ್ಲಿ ತೊಳೆಯಿರಿ. ನಂತರ ಅವುಗಳನ್ನು ಶುದ್ಧ ನೀರಿನಿಂದ ತೊಳೆದು ಬಟ್ಟೆಯಲ್ಲಿ ಒಣಗಿಸಿ, ತೆಗೆದಿಡಿ.
ಬಾಳೆಹಣ್ಣು:
ಬಾಳೆಹಣ್ಣುಗಳನ್ನು ಹೆಚ್ಚಾಗಿ ಫ್ರಿಜ್ ಅಥವಾ ಕೋಣೆಯ ಉಷ್ಣಾಂಶದಲ್ಲಿಟ್ಟರೆ ಕೊಳೆಯುತ್ತವೆ. ಆದ್ದರಿಂದ ನೀವು ಅವುಗಳನ್ನು ಗಾಳಿಯಾಡಾದ ಬಿಗಿಯಾದ ಪ್ಲಾಸ್ಟಿಕ್ ಚೀಲದಲ್ಲಿ ಇಟ್ಟುಕೊಂಡರೆ, ಅವು ಹೆಚ್ಚು ಕಾಲ ಉಳಿಯುತ್ತವೆ.