ಕಾಲ ಎಷ್ಟೇ ಮುಂದುವರೆದಿದ್ದರೂ ಮಾನಸಿಕ ಕಾಯಿಲೆಗಳನ್ನು ಗುರುತಿಸಿ ಚಿಕಿತ್ಸೆ ಕೊಡಿಸುವುದು ತೀರಾ ವಿರಳ. ಕೆಲವರಿಗಂತೂ ಇದು ಮಾನಸಿಕ ಕಾಯಿಲೆ ಅನ್ನೋದೇ ತಿಳಿಯೋದಿಲ್ಲ. ದೈಹಿಕ ಕಾಯಿಲೆಗಳಿಗೆ ಆದಷ್ಟು ಬೇಗನೆ ಚಿಕಿತ್ಸೆ ಪಡೆದುಕೊಳ್ಳೋ ನಾವು, ಮಾನಸಿಕ ತೊಂದರೆಗಳನ್ನು ಗುರುತಿಸಿ ಚಿಕಿತ್ಸೆ ಪಡೆಯುವಲ್ಲಿ ವಿಫಲರಾಗೋದೇ ಮಾನಸಿಕ ತೊಂದರೆಗಳು ಉಲ್ಬಣಿಸೋಕೆ ಕಾರಣವಾಗುತ್ತೆ ಅಂದ್ರೂ ತಪ್ಪಾಗಲಾರದು.

ಕೆಲವು ಮಾನಸಿಕ ಸಮಸ್ಯೆಗಳು ತಿಳಿದುಬರುವುದು ತುಂಬಾ ಕಡಿಮೆ. ಇದು ಸಾಮಾನ್ಯವಾಗಿ ಪ್ರತಿಯೊಬ್ಬರಲ್ಲೂ ಇರುತ್ತೆ, ಆದರೆ ಅಷ್ಟು ತೀವ್ರ ಮಟ್ಟದಲ್ಲಿ ಇರಲ್ಲ. ಇದನ್ನು ನಾವು ಒಬೆಸ್ಸಿವ್ ಕಂಪಲ್ಸೀವ್ ಡಿಸಾರ್ಡರ್ ಅಥವಾ ಒಸಿಡಿ ಎಂದು ಕರೆಯಬಹುದು. ನಮಲ್ಲಿ ಕೂಡ ಒಸಿಡಿ ಎನ್ನುವುದು ಇರಬಹುದಾದರೂ ಅದನ್ನು ಪತ್ತೆ ಮಾಡಲು ಸಾಧ್ಯವಾಗದೆ ಇರಬಹುದು. ಇದು ಆತಂಕದಿಂದ ಬರುವಂತಹ ಸಮಸ್ಯೆಯಾಗಿದ್ದು, ಮಾನಸಿಕ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಇದು ಕೆಲವೊಂದು ಸಲ ತೀವ್ರ ಸ್ವರೂಪವನ್ನು ಪಡೆಯುವ ಸಾಧ್ಯತೆಗಳು ಇವೆ.
ಇಂತಹ ಸಮಯದಲ್ಲಿ ಅದಕ್ಕೆ ಸರಿಯಾದ ಚಿಕಿತ್ಸೆ ಅಥವಾ ಸಮಾಲೋಚನೆ ಕೊಡಿಸಬೇಕು. ಒಸಿಡಿ ಇರುವಂತಹ ಹೆಚ್ಚಿನ ಜನರು ತುಂಬಾ ಶುಚಿಯಾಗಿರುವರು ಮತ್ತು ಧೂಳು ಹಾಗೂ ಕೊಳೆಯಿಂದ ದೂರವಿರುವರು.ಯಾವಾಗಲೂ ಏನಾದರು ಕೆಟ್ಟದಾಗುವುದು ಎಂದು ಮಾತನಾಡುತ್ತಿರುವವರ ಬಗ್ಗೆ ನೀವು ನೋಡಿದ್ದೀರಾ? ಎಲ್ಲಿಗಾದರೂ ಹೋಗುವ ಮೊದಲು ಅಥವಾ ಏನಾದರೂ ಮಾಡುವ ಮೊದಲು ಇದರಿಂದ ಏನೆಲ್ಲಾ ಅಪಾಯಗಳು ಆಗಲಿದೆ ಎನ್ನುವ ಬಗ್ಗೆ ಇವರು ತುಂಬಾ ಆಲೋಚನೆ ಮಾಡುವರು.

ಈ ಕಾಯಿಲೆಯಿಂದ ಬಳಲುತ್ತಿರುವ ವ್ಯಕ್ತಿಗಳು, ಯಾವುದೇ ಕೆಲಸವನ್ನು ಎಷ್ಟು ಜಾಗೃತವಾಗಿ ಮಾಡುತ್ತಾರೆಂದರೆ ಅದರಲ್ಲಿ ಅವರು ಯಶಸ್ಸು ಪಡೆಯುವುದು ಖಚಿತ. ಆದರೆ ಅವರಿಗೆ ಯಾವಾಗಲೂ ಭೀತಿ ಹಾಗೂ ಸಂಶಯವು ಕಾಡುತ್ತಲಿರುವುದು. ಕೆಲವರು ಯಾವುದೇ ಬದಲಾವಣೆಗಳು ಬೇಕಾಗಿಲ್ಲದ ವಸ್ತುಗಳನ್ನು ಕೂಡ ಪದೇ ಪದೇ ನೀಟಾಗಿ ಜೋಡಿಸೋದನ್ನ ನೀವು ನೋಡಿರಬಹುದು. ಅವರು ತಾವಿಟ್ಟ ಪ್ರತಿಯೊಂದು ವಸ್ತುವನ್ನು ಅದೇ ಜಾಗದಲ್ಲಿ ಇರಬೇಕು ಎಂದು ಬಯಸುವರು ಮತ್ತು ಸ್ವಲ್ಪ ಆಚೀಚೆ ಆದರೂ ಅವರು ಅದನ್ನು ಸಹಿಸಲ್ಲ.
ಇವರು ಬೇರೆಯವರ ನಿಲುವನ್ನು ಯಾವತ್ತಿಗೂ ಒಪ್ಪಿಕೊಳ್ಳಲ್ಲ. ಯಾವುದೇ ಪರಿಸ್ಥಿತಿಯಲ್ಲೂ ಅವರು ತಮ್ಮ ನಿಲುವನ್ನು ಬದಲಾಯಿಸಲ್ಲ. ವಿಕೃತ ಲೈಂಗಿಕ ಕಿರುಕುಳ ನೀಡುವಂತಹವರು ಕೂಡ ಒಸಿಡಿಯಿಂದ ಬಳಲುತ್ತಿರುವವರ ಗುಂಪಿಗೆ ಸೇರ್ತಾರೆ. ಒಸಿಡಿ ತನ್ನಂತಾನೇ ಗುಣವಾಗುವುದಿಲ್ಲ, ವಿವಿಧ ಚಿಕಿತ್ಸೆ ಹಾಗೂ ತಂತ್ರಗಳಿಂದ ನೀವು ಇದನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು. ಮಾನಸಿಕ ರೋಗಿಗಳಿಗೆ ಚಿಕಿತ್ಸೆಯಷ್ಟೇ ಕಾಳಜಿ ಕೂಡಾ ಅಗತ್ಯ ಅನ್ನೋದು ಸದಾ ನೆನಪಿನಲ್ಲಿರಲಿ.
- ಪವಿತ್ರ ಸಚಿನ್