UttarPradesh : ಇತ್ತೀಚಿನ ದಿನಗಳಲ್ಲಿ ಮುದ್ದೆ ಚರ್ಮ ರೋಗ ವ್ಯಾಪಕವಾಗಿ ಹರಡುತ್ತಿದೆ. ಹೀಗಾಗಿ ರೈತರು(Farmers) ಈ ರೋಗದ ಬಗ್ಗೆ ಮಾಹಿತಿ ಪಡೆದು, ಜಾನುವಾರುಗಳನ್ನು(Cow) ರಕ್ಷಿಸಿಕೊಳ್ಳುವುದು ಅವಶ್ಯಕವಾಗಿದೆ.
ಹೌದು, ಜಾನುವಾರುಗಳಿಗೆ ಈಗ ‘ಮುದ್ದೆ ಚರ್ಮ ರೋಗ’ದ ಆತಂಕ ಎದುರಾಗಿದೆ.
ಈ ರೋಗದಿಂದ ಬಳಲುವ ಹೈನು ರಾಸುಗಳು, ಕಡಿಮೆ ಹಾಲು ಕೊಡುವುದು, ಜಾನುವಾರುಗಳ ಚಟುವಟಿಕಾ ಸಾಮರ್ಥ್ಯ ಕಡಿಮೆಯಾಗುವುದು ಈ ರೋಗದ ಮುಖ್ಯ ಲಕ್ಷಣಗಳಾಗಿವೆ.
ಆಡು ಮತ್ತು ಕುರಿಗಳಿಗೆ ಈ ರೋಗ ಬಾಧಿಸುವುದಿಲ್ಲ. ಕೆಲ ಹಸು ಮತ್ತು ಎತ್ತುಗಳಲ್ಲಿ ಮೈ ಮೇಲೆ ಗುಳ್ಳೆ ಅಥವಾ ಗಡ್ಡೆಗಳಂತೆ ಬಾವು ಕಾಣಿಸಿಕೊಂಡು ಕೆಲ ದಿನಗಳ ನಂತರ ಒಡೆದು ತೀವ್ರವಾಗಿ ರಕ್ತ ಸೋರಿಕೆಯಾಗುತ್ತದೆ.
ಪಶು ಸಂಗೋಪನೆ ಮತ್ತು ಹೈನುಗಾರಿಕೆ (Dairy Farming) ಉದ್ಯಮಕ್ಕೆ ಈ ರೋಗ ದೊಡ್ಡ ಪೆಟ್ಟನ್ನೇ ನೀಡಿದೆ. ಆದರೆ, ಈ ರೋಗದಿಂದ ಪ್ರಾಣ ಹಾನಿ ಸಂಭವಿಸುವ ಸಾಧ್ಯತೆ ತೀರಾ ಕಡಿಮೆ ಅಂದರೆ ಶೇ 1 ರಿಂದ 2 ರಷ್ಟು ಮಾತ್ರ ಎನ್ನುವುದು ಪಶುವೈದ್ಯರ ಅಭಿಪ್ರಾಯ.
ಇನ್ನು, ಈ ರೋಗದ ಪ್ರಾರಂಭಿಕ ಹಂತದಲ್ಲಿ ರೋಗಗ್ರಸ್ತ ಪ್ರಾಣಿಗಳಲ್ಲಿ ಅತಿಯಾದ ಜ್ವರ, ಆಹಾರ ಸೇರದಿರುವುದು, ನಿಶ್ಯಕ್ತಿ ಕಾಣಿಸುತ್ತದೆ.
ಕೆಲ ಜಾನುವಾರುಗಳ ಕಾಲುಗಳಲ್ಲಿ ಬಾವು ಹಾಗೂ ಕುಂಟುವುದು ಕೂಡ ಕಾಣಿಸುತ್ತದೆ. ಜಾನುವಾರುಗಳ ಮೈ ಮೇಲೆ ಎಲ್ಲ ಕಡೆ ಗಡ್ಡೆಗಳು ಕಾಣಿಸಿಕೊಳ್ಳುತ್ತವೆ.
ಕಣ್ಣುಗಳಿಂದ ನೀರು ಸೋರುತ್ತದೆ, ಕಾಲುಗಳಲ್ಲಿ ನೀರು ತುಂಬಿ ಬಾವು ಕಾಣಿಸುತ್ತದೆ. ಸಾಮಾನ್ಯವಾಗಿ, ಈ ರೋಗವು ಸೊಳ್ಳೆ, ಉಣ್ಣೆ ಹಾಗೂ ವಿವಿಧ ಕಚ್ಚುವ ಕೀಟಗಳಿಂದ ಒಂದು ಜಾನುವಾರಿನಿಂದ ಮತ್ತೊಂದಕ್ಕೆ ಹರಡುತ್ತದೆ.
ರೋಗಗ್ರಸ್ತ ಜಾನುವಾರುಗಳಿಂದ ಮಲಿನಗೊಂಡ ಆಹಾರ ಹಾಗೂ ನೀರಿನಿಂದ ಹರಡುವ ಸಾಧ್ಯತೆಯೂ ಇರುತ್ತದೆ.
ರೋಗಗ್ರಸ್ತ ಜಾನುವಾರಿಗೆ ಬಳಸಿದ ಸಿರೇಂಜ್ ಮತ್ತು ಸೂಜಿಯನ್ನು ಬೇರೆ ಜಾನುವಾರಿಗೆ ಉಪಯೋಗಿಸಿದಾಗಲೂ ಹರಡುವ ಸಾಧ್ಯತೆ ಹೆಚ್ಚಾಗಿರುತ್ತದೆ.
ಇಂತಹ ಮುದ್ದೆ ಚರ್ಮ ರೋಗಕ್ಕೆ ಯಾವುದೇ ನಿರ್ದಿಷ್ಟ ಚಿಕಿತ್ಸೆ ಇಲ್ಲ. ಜಾನುವಾರುಗಳಲ್ಲಿ ಕಾಣಿಸುವ ರೋಗ ಲಕ್ಷಣಗಳಿಗೆ ಅನುಗುಣವಾಗಿ ಚಿಕಿತ್ಸೆ ನೀಡಬೇಕಾಗುತ್ತದೆ.
ಅತಿಯಾದ ಜ್ವರವಿದ್ದರೆ, ಜಾನುವಾರಿನ ದೇಹ ತಂಪಾಗಿಸಲು ಹಸಿ ಬಟ್ಟೆ ಹಾಕಬೇಕು ಅಥವಾ ಅವುಗಳ ಮೇಲೆ ನೀರು ಹಾಕಬೇಕು.
ಜಾನುವಾರಿನ ಮೈಮೇಲೆ ಕಾಣಿಸುವ ಗಡ್ಡೆಗಳು ತೀವ್ರವಾದ ನೋವು ಉಂಟು ಮಾಡುವುದರಿಂದ ನೋವು ನಿವಾರಕ ಔಷಧ ಹಾಗೂ
ಬ್ಯಾಕ್ಟೀರಿಯಲ್ ಇನ್‍ಪೆಕ್ಷನ್ ತಪ್ಪಿಸಲು ಐದರಿಂದ ಏಳು ದಿನಗಳವರೆಗೆ ಆ್ಯಂಟಿಬಯೊಟಿಕ್‍ಗಳನ್ನು ನುರಿತ ಪಶು ವೈದ್ಯರಿಂದ ಕೊಡಿಸಬೇಕು.
ಇದನ್ನೂ ಓದಿ : https://vijayatimes.com/lucky-heroine-sangeetha-sringeri/
ಚರ್ಮದ ಮೇಲಿನ ಗಾಯಗಳನ್ನು ಪೊಟ್ಯಾಶಿಯಂ ಪರಮಾಂಗನೈಟ್ ನೀರಿನಿಂದ ತೊಳೆದು ಪೊವೆಡಿನ್ ಐಯೊಡಿನ್ ದ್ರಾವಣ ಅಥವಾ ಕ್ರೀಮ್ ಹಾಗೂ ಬೇವಿನ ಎಣ್ಣೆ ಲೇಪಿಸಬೇಕು. ರೋಗ ಹರಡುವಿಕೆಯನ್ನು ತಡೆಯಲು ರೋಗಗ್ರಸ್ತ ಜಾನುವಾರುಗಳನ್ನು ಬೇರೆ ಕಡೆ ಇರಿಸಬೇಕು.
ಅದೇ ರೀತಿ, ರೋಗಪೀಡಿತ ಜಾನುವಾರುಗಳಿಗೆ ವೀಳ್ಯದೆಲೆ 10 , ಕರಿಮೆಣಸಿನಕಾಳು 10 ಗ್ರಾಂ, ಬೆಲ್ಲ 50 ಗ್ರಾಂ, ಅಡುಗೆ ಉಪ್ಪು 10 ಗ್ರಾಂ, ಇಷ್ಟನ್ನೂ ಸಣ್ಣಗೆ ರುಬ್ಬಿ ದಿನಕ್ಕೆ 2 ಸಲದಂತೆ 8 ದಿನ ಬಳಸುವ ಮೂಲಕ ರೋಗವನ್ನು ನಿಯಂತ್ರಿಸಬಹುದು ಎಂದು ಪಶು ವೈದ್ಯರು ಸಲಹೆ ನೀಡುತ್ತಾರೆ.
ಜೊತೆಗೆ, ಕೊಟ್ಟಿಗೆಯನ್ನು ಸ್ವಚ್ಛಗೊಳಿಸಲು ಫರ್ಮಲಿನ್ ಶೇ 1, ಸೋಡಿಯಂ ಹೈಪೊಕ್ಲೋರೈಟ್ ಶೇ 2-3 ಅಥವಾ ಫಿನೈಲ್ ಶೇ 2 ರಷ್ಟು ಬಳಸಬೇಕು.
- ಪವಿತ್ರ