ಅಪರೂಪದ ಅನುವಂಶಿಕ ಕಾಯಿಲೆ ಪ್ರೊಜೆರಿಯಾ ಸಿಂಡ್ರೋಮ್(Progeria Syndrome) ನಿಂದ ಬಳಲುತ್ತಿದ್ದ ಉಕ್ರೇನ್ ನ ಎಂಟು ವರ್ಷದ ಬಾಲಕಿ ಅನ್ನಾ ಸಕಿಡಾನ್(Anna Saikdon) ಬಗ್ಗೆ ಕೇಳಿದ್ದೀರಾ? ಅನ್ನಾ ಸಕಿಡಾನ್ 8 ವರ್ಷದ ಬಾಲಕಿಯಾಗಿದ್ದರೂ ಕೂಡ ಆಕೆಯ ಜೈವಿಕ ವಯಸ್ಸು 80ರ ಆಸುಪಾಸಿನಲ್ಲಿತ್ತು ಎಂದು ವೈದ್ಯರು ತಿಳಿಸಿದ್ದಾರೆ. ಅನ್ನಾ ಸಕಿಡಾನ್ ತನ್ನ ಎಂಟನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಕೆಲವೇ ದಿನಗಳಲ್ಲಿ ಅಕಾಲಿಕ ವೃದ್ಧಾಪ್ಯದಿಂದ ಇಹಲೋಕ ತ್ಯಜಿಸಿದ್ದಾಳೆ.
ಅಕಾಲಿಕ ವಯಸ್ಸಾದ ಸ್ಥಿತಿಗೆ ತಲುಪಿದ್ದ ಆಂತರಿಕ ಅಂಗಾಂಗಗಳ ವೈಫಲ್ಯದಿಂದ ಅನ್ನಾ ಸಕಿಡಾನ್ ಮೃತಪಟ್ಟಿದ್ದಾಳೆ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ. ಈ ವಿಚಿತ್ರ ಪ್ರೊಜೆರಿಯಾ ರೋಗದಿಂದ ಬಳಲುತ್ತಿರುವ ಮಕ್ಕಳಿಗೆ ಒಂದು ವರ್ಷ ಎಂದರೆ ಎಂಟರಿಂದ ಹತ್ತು ವರ್ಷಗಳಿಗೆ ಸಮಾನವಾಗಿರುತ್ತದೆ! ಆದ್ದರಿಂದ ಅನ್ನಾ ಸಕಿಡಾನ್ ನಿಧನಳಾಗುವಾಗ ಆಕೆಯ ದೇಹದ ಅಂಗಾಂಗಗಳ ನಿಜವಾದ ವಯಸ್ಸು 80 ದಾಟಿತ್ತು ಎನ್ನಲಾಗಿದೆ. ಅನ್ನಾ ಹುಟ್ಟಿದಾಗಲೇ ಆಕೆಗೆ ಆನುವಂಶಿಕ ಹಚಿನ್ಸನ್-ಗಿಲ್ಫೋರ್ಡ್ ಪ್ರೊಜೆರಿಯಾ ಸಿಂಡ್ರೋಮ್(Hutchinson-Gilford Progeria Syndrome) ಇರುವುದು ಪತ್ತೆಯಾಗಿತ್ತು ಎಂದು ಆಕೆಯ ಪೋಷಕರು ತಿಳಿಸಿದ್ದಾರೆ.
ಸಾಮಾನ್ಯವಾಗಿ ಈ ಪ್ರೊಜೆರಿಯಾ ಕಾಯಿಲೆಗೆ ತುತ್ತಾದ ರೋಗಿಗಳು ಪಾರ್ಶ್ವವಾಯುವಿನಿಂದ ಸಾಯುತ್ತಾರೆ. ಹಾಗಾಗಿ ಮೂಳೆಗಳ ಸವೆಯುವಿಕೆಗೆ ತುತ್ತಾದ ಅನ್ನಾ ಸಾವನ್ನಪ್ಪಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ. ಪ್ರೊಜೆರಿಯಾ ರೋಗವನ್ನು ಹಚಿನ್ಸನ್-ಗಿಲ್ಫೋರ್ಡ್ ಪ್ರೊಜೆರಿಯಾ ಸಿಂಡ್ರೋಮ್, ಪ್ರೊಜೆರಿಯಾ ಅಥವಾ ಎಚ್ಜಿಪಿಎಸ್ ಎಂತಲೂ ಕರತೆಯುತ್ತಾರೆ. ಇದು ಅಪರೂಪದ ಮಾರಣಾಂತಿಕ ಆನುವಂಶಿಕ ಕಾಯಿಲೆಯಾಗಿದೆ. ಎಳೆಯ ಮಕ್ಕಳಲ್ಲಿ ಕಾಣಿಸಿಕೊಳ್ಳುವ ಈ ಮಾರಕ ರೋಗ ಅವರನ್ನು ಅಕಾಲಿಕ ವೃದ್ಯಾಪಕ್ಕೆ ದೂಡುವುದಲ್ಲದೇ ಅವರ ಪ್ರಾಣವನ್ನು ತೆಗೆಯುತ್ತದೆ.
ಇದನ್ನು ಮೊದಲು ಇಂಗ್ಲೆಂಡ್ ವೈದ್ಯರಾದ ಡಾ. ಜೊನಾಥನ್ ಹಚಿನ್ಸನ್ 1886ರಲ್ಲಿ ಹಾಗೂ ನಂತರ ಡಾ. ಹೇಸ್ಟಿಂಗ್ಸ್ ಗಿಲ್ಫೋರ್ಡ್ 1897 ಮೊದಲ ಬಾರಿಗೆ ವಿವರಿಸಿದರು. ಪ್ರೊಜೆರಿಯಾ ರೋಗ 20 ಮಿಲಿಯನ್ ಜನರ ಪೈಕಿ ಒಬ್ಬರಿಗೆ ಬರುತ್ತದೆ ಎಂದು ಹೇಳಲಾಗಿದ್ದು, ಸದ್ಯ ಇಡೀ ವಿಶ್ವದಲ್ಲಿ ಸುಮಾರು 160 ಮಕ್ಕಳು ಈ ಭಯಾನಕ ರೋಗದಿಂದ ನರಳುತ್ತಿದ್ದಾರಂತೆ. ಸದ್ಯ ಈ ರೋಗಕ್ಕೆ ಯಾವುದೇ ಚಿಕಿತ್ಸೆಯಿಲ್ಲ ಎಂಬುದು ಬೇಸರದ ಸಂಗತಿ!
- ಪವಿತ್ರ ಸಚಿನ್