ವಾಷಿಂಗ್‌ಟನ್ ಅ 5 : ಸೋಮವಾರ ಸಂಜೆ ಕೆಲವು ಗಂಟೆಗಳ ಕಾಲ ಫೇಸ್‌ಬುಕ್, ವಾಟ್ಸಾಪ್, ಮೆಸೆಂಜರ್ ಮತ್ತು ಇನ್‌ಸ್ಟಾಗ್ರಾಂಗಳು ಕೆಲಸ ನಿರ್ವಹಿಸದ ಕಾರಣ ಫೇಸ್‌ಬುಕ್ ಸಂಸ್ಥಾಪಕರಾದ ಮಾರ್ಕ್ ಜುಕರ್‌ಬರ್ಗ್ ಬರೋಬ್ಬರಿ 6 ಬಿಲಿಯನ್ ಡಾಲರ್ ಕಳೆದುಕೊಂಡಿದ್ದಾರೆ. ಫೇಸ್‌ಬುಕ್ ಒಡೆತನದ ಸೋಷಿಯಲ್ ಮೀಡಿಯಾ ವೇದಿಕೆಗಳ ಸೇವೆಯಲ್ಲಿ ಸೋಮವಾರ ವ್ಯತ್ಯಯವಾಗಿದ್ದರಿಂದ ಮಾರ್ಕ್ ಜುಕರ್‌ಬರ್ಗ್ ಅವರಿಗೆ ಸುಮಾರು 6 ಬಿಲಿಯನ್ ಡಾಲರ್ (44,728 ಕೋಟಿ ರೂ.) ನಷ್ಟ ಉಂಟಾಗಿದೆ ಎಂದು ವರದಿಯಾಗಿದೆ.
ಸೋಮವಾರ ಕೆಲವೇ ಗಂಟೆಗಳ ಅವಧಿಯಲ್ಲಿನ ಸೇವೆ ವ್ಯತ್ಯಯದಿಂದಾಗಿ ಕೋಟ್ಯಂತರ ನಷ್ಟವಾಗಿದೆ. ಪರಿಣಾಮವಾಗಿ ಜುಕರ್‌ಬರ್ಗ್ ಅವರು ವಿಶ್ವದ ಸಿರಿವಂತರ ಪಟ್ಟಿಯಲ್ಲಿಯೂ ಕೆಲವು ಸ್ಥಾನ ಕಳೆದುಕೊಂಡಿದ್ದಾರೆ ಎನ್ನಲಾಗಿದೆ. ಫೇಸ್‌ಬುಕ್ ಒಡೆತನದ ಈ ನಾಲ್ಕೂ ತಾಣಗಳ ಡೊಮೈನ್ ನೇಮ್ ಸಿಸ್ಟಂ (ಡಿಎಂಎಸ್) ಸಮಸ್ಯೆ ಕಂಡುಬಂದಿದ್ದರಿಂದ ಈ ಅಡಚಣೆ ಉಂಟಾಗಿತ್ತು. ಇದರಿಂದ ಕೆಲವು ಗಂಟೆಗಳ ಕಾಲ ಈ ತಾಣಗಳು ಕೆಲಸ ಮಾಡುತ್ತಿರಲಿಲ್ಲ. ಈ ಸಮಸ್ಯೆಯಿಂದಾಗಿ ಸೋಮವಾರ ಸಾಮಾಜಿಕ ಮಾಧ್ಯಮ ದಿಗ್ಗಜ ಸಂಸ್ಥೆಯ ಷೇರು ಶೇ 4.9ರಷ್ಟು ಕುಸಿದಿದೆ. ಸೆಪ್ಟೆಂಬರ್ ಮಧ್ಯಭಾಗದಿಂದ ಫೇಸ್‌ಬುಕ್ ಶೇ 15ರಷ್ಟು ಷೇರು ಮೌಲ್ಯ ಕಳೆದುಕೊಂಡಿದೆ.
ಇಂದು ಉಂಟಾದ ಅಡಚಣೆಗೆ ವಿಷಾದಿಸುತ್ತೇನೆ ನೀವು ಕಾಳಜಿ ವಹಿಸುವ ಜನರೊಂದಿಗೆ ಸಂಪರ್ಕದಲ್ಲಿರಲು ನೀವು ಎಷ್ಟರಮಟ್ಟಿಗೆ ನಮ್ಮ ಸೇವೆಗಳನ್ನು ಅವಲಂಬಿಸಿದ್ದೀರಿ ಎನ್ನುವುದು ನಮಗೆ ತಿಳಿದಿದೆ ಎಂದು ಮಾರ್ಕ್ ಜುಕರ್‌ಬರ್ಗ್ ತಿಳಿಸಿದ್ದಾರೆ