ದೆಹಲಿ, ಏ. 27: ಉಸಿರಾಟದ ಸಮಸ್ಯೆಯಿಂದ ಬಳಲುತ್ತಿರುವವರ ಕೊರೋನಾ ಸೋಂಕಿತರ ಚಿಕಿತ್ಸೆಗೆ ಬಳಸುವ ವೈದ್ಯಕೀಯ ಆಮ್ಲಜನಕದ ಕೊರತೆಗೆ ಸಂಬಂಧಿಸಿದಂತೆ ಹೈಕೋರ್ಟ್ಗಳು ವಿಚಾರಣೆ ನಡೆಸದೇ ಇರುವಂತೆ ತಡೆಯಲು ಸಾಧ್ಯವಿಲ್ಲ. ಆದರೆ, ಇಂತಹ ವಿಷಮ ಸಂದರ್ಭದಲ್ಲಿ ಮೂಕಪ್ರೇಕ್ಷಕನಾಗಿ ಸುಮ್ಮನೇ ಕೂರಲು ಸಾಧ್ಯವಿಲ್ಲ ಎಂದು ತಿಳಿಸಿದೆ. ದೇಶಕ್ಕೆ ಸಂಬಂಧಿಸಿದ ಎಷ್ಟೋ ಮಹತ್ವದ ಸಮಸ್ಯೆಗಳನ್ನು ನ್ಯಾಯಾಲಯಗಳು ಬಗೆಹರಿಸಿವೆ. ಸದ್ಯ ದೇಶ ಕಷ್ಟಕರ ಪರಿಸ್ಥಿತಿಯಲ್ಲಿ ಇದ್ದು, ಈ ಪರಿಸ್ಥಿತಿಯಲ್ಲಿ ಸುಮ್ಮನೆ ಕಟ್ಟಿಕೊಂಡು ಇರಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ನ ತ್ರಿಸದಸ್ಯ ಪೀಠ ಅಭಿಪ್ರಾಯಪಟ್ಟಿದೆ.
ಕಳೆದ ವಾರವಷ್ಟೇ ದೇಶದಲ್ಲಿ ಉಂಟಾದ ಆಮ್ಲಜನಕ, ಕೊರೊನಾ ಲಸಿಕೆ ಮತ್ತು ಬೆಡ್ಗಳದ ಕೊರತೆಗಳ ಕುರಿತಾಗಿ ಸುಪ್ರೀಂಕೋರ್ಟ್ ವಿಚಾರಣೆ ಕೈಗೆತ್ತಿಕೊಂಡಿತ್ತು. ಈ ವಿಚಾರಗಳ ಕುರಿತು ಸಮರ್ಪಕ ರಾಷ್ಟ್ರೀಯ ಯೋಜನೆಯೊಂದು ರಚನೆಯಾಗಬೇಕು ಎಂದು ಅಂದಿನ ವಿಚಾರಣೆ ವೇಳೆ ಕೋರ್ಟ್ ತಿಳಿಸಿತ್ತು. ಜತೆಗೆ ಆ ವೇಳೆ ದೇಶದ 6 ಹೈಕೋರ್ಟ್ಗಳಲ್ಲಿ ಇಂತಹುದೇ ಸಮಸ್ಯೆಗಳ ಕುರಿತು ವಿಚಾರಣೆ ನಡೆಯುತ್ತಿದೆ. ಹೀಗಾಗಿ ಗೊಂದಲ ಮೂಡುವುದು ಬೇಡ ಎಂದು ಸಹ ಕೋರ್ಟ್ ತಿಳಿಸಿತ್ತು.
ಹೈಕೋರ್ಟ್ಗಳಿಂದ ದೇಶದ ವೈದ್ಯಕೀಯ ಸಮಸ್ಯೆಯ ಕುರಿತ ವಿಚಾರಣೆಯನ್ನು ತನ್ನ ವಶ ಮಾಡಿಕೊಳ್ಳುವ ಉದ್ದೇಶವನ್ನು ಸುಪ್ರೀಂಕೋರ್ಟ್ ಹೊಂದಿಲ್ಲ. ಹೈಕೋರ್ಟ್ಗಳು ಸಹ ಈ ಸಮಸ್ಯೆ ಕುರಿತು ವಿಚಾರಣೆ ನಡೆಸಲು ತಕ್ಕುದಾದ ವ್ಯವಸ್ಥೆ ಹೊಂದಿವೆ ಎಂದು ಸುಪ್ರೀಂಕೋರ್ಟ್ನ ನ್ಯಾಯಮೂರ್ತಿಗಳಾದ ಡಿವೈ ಚಂದ್ರಚೂಡ್, ಎಲ್ಎನ್ ರಾವ್ ಮತ್ತು ರವೀಂದ್ರ ಎಸ್ ಭಟ್ ಅವರುಗಳ ತ್ರಿಸದಸ್ಯ ಪೀಠದ ಇಂದು ಈ ಕುರಿತ ಸ್ಪಷ್ಟಪಡಿಸಿದೆ.
ಇಂದು ನಡೆದ ವಿಚಾರಣೆಯ ವೇಳೆ ಕೇಂದ್ರ ಸರ್ಕಾರಕ್ಕೆ ರಾಜ್ಯಗಳಿಂದ ವೈದ್ಯಕೀಯ ಆಮ್ಲಜನಕದ ಪೂರೈಕೆಗಾಗಿ ಬಂದ ಬೇಡಿಕೆ ಮತ್ತು ಪೂರೈಸಿದ ಕುರಿತು ವಿವರ ಕೇಳಿದೆ. ಅಲ್ಲದೆ ಯಾವ ಪದ್ಧತಿಯ ಮೂಲಕ ರಾಜ್ಯಗಳಿಗೆ ಆಕ್ಸಿಜನ್ ಪೂರೈಸಿದ್ದೀರಿ ಎಂದ ವಿವರಿಸಲು ತಿಳಿಸಿದೆ. ಲಸಿಕೆ, ಬೆಡ್ ಮತ್ತು ಇತರ ಅಗತ್ಯ ಔಷಧಗಳ ಲಭ್ಯತೆಯ ದತ್ತಾಂಶವನ್ನು ಕೋರ್ಟ್ಗೆ ಹಾಜರುಪಡಿಸುವಂತೆಯೂ ಕೋರ್ಟ್ ತಿಳಿಸಿದೆ. ಈ ಪ್ರಕರಣದ ವಿಚಾರಣೆ ಮುಂದಿನ ಶುಕ್ರವಾರ ನಡೆಯಲಿದೆ.