ಜಿನಿವಾ, ಜು. 01: ವಿಶ್ವದ 100 ರಾಷ್ಟ್ರಗಳಲ್ಲಿ ಕೊರೊನಾ ವೈರಸ್ನ ರೂಪಾಂತರ ತಳಿ ಡೆಲ್ಟಾ ಪ್ಲಸ್ ಸೋಂಕು ಪ್ರಸರಣಗೊಂಡಿದ್ದು, ಮುಂಬರುವ ದಿನಗಳಲ್ಲಿ ಈ ರೂಪಾಂತರ ತಳಿಯ ಸೋಂಕು ಎಲ್ಲೆಡೆ ಹೆಚ್ಚಿನ ಪ್ರಮಾಣದಲ್ಲಿ ಹರಡುವ ಸಾಧ್ಯತೆ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿದೆ.
ಪ್ರಸ್ತುತ ಕೊರೊನಾ ಪಿಡುಗಿನ ವಿರುದ್ಧದ ಹೋರಾಟಕ್ಕೆ ಕೈಗೊಳ್ಳುತ್ತಿರುವ ಸಾಧನಗಳು, ವೈಯಕ್ತಿಕ ಹಾಗೂ ಸಮುದಾಯದ ಹಂತದಲ್ಲಿ ಅನುಸರಿಸುತ್ತಿರುವ ಕ್ರಮಗಳು, ಸೋಂಕು ತಡೆ ಮತ್ತು ನಿಯಂತ್ರಣಕ್ಕಾಗಿ ಮಾಡುತ್ತಿರುವ ಎಲ್ಲ ಪ್ರಯತ್ನಗಳು, ಡೆಲ್ಟಾ ರೂಪಾಂತರ ತಳಿ ಸೇರಿದಂತೆ ಈಗಿರುವ ಎಲ್ಲ ರೂಪಾಂತರ ತಳಿಗಳಿಂದ ರಕ್ಷಿಸಿಕೊಳ್ಳುವುದಕ್ಕೂ ಅನುಸರಿಸಬೇಕು. ಈ ಎಲ್ಲ ಕ್ರಮಗಳು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತವೆ ಎಂದು ವಿಶ್ವಸಂಸ್ಥೆ ಹೇಳಿದೆ.
ಕೋವಿಡ್– 19 ರೂಪಾಂತರ ತಳಿಯ ಸೋಂಕಿನ ಪ್ರಸರಣ ಹೆಚ್ಚುತ್ತಿರುವ ಸ್ಥಳಗಳಲ್ಲಿ ದೀರ್ಘಕಾಲದವರೆಗೆ ಎಲ್ಲ ರೀತಿಯ ಸುರಕ್ಷತಾ ಕ್ರಮಗಳನ್ನು ದೀರ್ಘಕಾಲದವರೆಗೆ ಮುಂದುವರಿಸಬೇಕಾಗುತ್ತದೆ. ಕೋವಿಡ್ ಲಸಿಕೆ ಪಡೆಯವವರ ಸಂಖ್ಯೆ ಕಡಿಮೆ ಇರುವ ಪ್ರದೇಶಗಳಲ್ಲಿ ಇಂಥ ಕ್ರಮಗಳನ್ನು ಕಡ್ಡಾಯವಾಗಿ ಮುಂದುವರಿಸಬೇಕು. ಲಸಿಕೆ ನೀಡುವ ಪ್ರಕ್ರಿಯೆಯನ್ನು ವೇಗವಾಗಿ ಪೂರ್ಣಗೊಳಿಸಬೇಕು‘ ಎಂದು ಡಬ್ಲ್ಯುಎಚ್ಒ ಸಲಹೆ ನೀಡಿದೆ.