ಶಿವಮೊಗ್ಗ, ಫೆ. 15: ರಾಮಮಂದಿರಕ್ಕಾಗಿ ಹಣ ಸಂಗ್ರಹ ಮಾಡುತ್ತಿರುವವರು ಹಣ ಕೊಟ್ಟವರು,ಕೊಡದವರ ಮನೆಗಳನ್ನು ಗುರುತು ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಯಾತಕ್ಕೆ ಮನೆಗಳನ್ನು ಗುರುತು ಮಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್. ಡಿ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ಈ ಬಗ್ಗೆ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಹಿಟ್ಲರ್ ಕಾಲದಲ್ಲಿ ನಾಜಿ, ಮತ್ತು ಜ್ಯೂ ಗಳಿಗೆ ಗಲಾಟೆ ನಡೆದು ಲಕ್ಷಾಂತರ ಜನರ ಮಾರಣ ಹೋಮ ನಡೆಯಿತು. ಆರ್ ಎಸ್ ಎಸ್ ಹುಟ್ಟಿದ್ದು ಜರ್ಮನಿಯಲ್ಲಿ ನಾಜಿ ಹುಟ್ಟಿದ ಕಾಲದಲ್ಲೇ ಎಂದು ಚರಿತ್ರಾಕಾರರು ಹೇಳುತ್ತಾರೆ. ಆ ನೀತಿಗಳನ್ನೆ ಈ ಸರ್ಕಾರ ಮುಂದುವರೆಸಿಕೊಂಡು ಬಿಟ್ಟರೆ ಮುಂದೇನಾಗುತ್ತದೆ ಎಂದು ಕೆಲವರಲ್ಲಿ ಆತಂಕವಿದೆ ಎಂದರು.
ದೇಶದಲ್ಲಿ ಮಾತಾಡುವಂತಹ ಮೂಲಭೂತ ಹಕ್ಕನ್ನೆ ಕಸಿಯುತ್ತಿದ್ದಾರೆ.ಸ್ವತಂತ್ರವಾಗಿ ಯಾರೂ ಭಾವನೆಗಳನ್ನೆ ವ್ಯಕ್ತಪಡಿಸಲು ಸಾಧ್ಯವಿಲ್ಲ. ಅಘೋಷಿತ ತುರ್ತು ಪರಿಸ್ಥಿತಿ ಇದೆ. ಯಾರೊಬ್ಬರೂ ತಮ್ಮ ಭಾವನೆಗಳನ್ನು ಹೇಳಿಕೊಳ್ಳಲು ಸಾಧ್ಯವಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ನಾಳೆ ಬೆಳಗ್ಗೆ ಮಾಧ್ಯಮಗಳು, ಸರ್ಕಾರ ಭಾವನೆಗಳನ್ನು ಎತ್ತಿಹಿಡಿದರೆ ನಿಮಗೇ ಏನಾಗುತ್ತೋ ಗೊತ್ತಿಲ್ಲ. ಇನ್ನೂ ಜನಸಾಮಾನ್ಯರೆ ಪರಿಸ್ಥಿತಿ ಏನು? ವಾತಾವರಣವನ್ನು ನೋಡಿದಾಗ ಏನು ಬೇಕಾದರೂ ಆಗಬಹುದು ಎಂದು ಆತಂಕ ವ್ಯಕ್ತಪಡಿಸಿದರು.
ಮೀಸಲಾತಿ ಹೆಸರಿನಲ್ಲಿ ನಡೆಯುತ್ತಿರುವ ಹೋರಾಟಗಳು ಜಾತಿ ಜಾತಿಗಳ ನಡುವೆ ಸಂಘರ್ಷ ನಡೆಯುವ ಆತಂಕ ನನಗಿದೆ. ದೊಡ್ಡ ಅನಾಹುತಗಳಿಗೆ ಅವಕಾಶ ಕೊಡದೆ ರಾಜ್ಯ ಸರ್ಕಾರ ಈ ಗೊಂದಲಗಳನ್ನು ಕೂಡಲೇ ನಿವಾರಿಸಬೇಕು ಎಂದು ಆಗ್ರಹಿಸಿದ್ದಾರೆ.
ಅಲ್ಲದೇ, ಮೀಸಲಾತಿ ಬಗ್ಗೆ ಚರ್ಚೆ ಆಗಲಿ ಬಡತನ ಒಂದು ಜಾತಿಗೆ ಸೀಮಿತವಾಗಿಲ್ಲ. ಸುಪ್ರೀಂ ಕೋರ್ಟು 50% ರಷ್ಟು ಮೀಸಲಾತಿ ದಾಟಬಾರದು ಎಂದು ಹೇಳಿದೆ. ಯಾವುದೆ ಸಮಾಜದ ಬಡವರ ಬದುಕನ್ನು ಸರಿಪಡಿಸಲು ಸರ್ಕಾರಗಳು ಮುಂದಾಗಬೇಕು , ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ ಆಧಾರದ ಮೇಲೆ ಮೀಸಲಾತಿ ಹೆಚ್ಚಳ ಮಾಡಬೇಕು. ಮೀಸಲಾತಿ ಹೋರಾಟದಲ್ಲಿರುವವರು ವಿಷಯವನ್ನು ಸರಿಯಾಗಿ ಮಂಡಿಸಿ ಪರಿಹಾರ ಕಂಡುಕೊಳ್ಳಬೇಕು ಎಂದರು.