ಹೊಟ್ಟೆ ಹಸಿವಾದರೆ ಬಹಳ ಕೋಪ ಬರುತ್ತದೆ ಅಂತ ಹಲವಾರು ಜನ ಹೇಳೋದನ್ನು ನೀವು ಕೇಳಿರಬಹುದು ಅಥವಾ ನೀವೆ ಸ್ವತಃ ಅನುಭವಿಸರಬಹುದು.

ಆದರೆ, ಇದೀಗ ವಿಜ್ಞಾನಿಗಳೂ(Scintists) ಕೂಡ ಇದು ಸತ್ಯ ಎಂದು ಒಪ್ಪಿಕೊಂಡಿದ್ದು, ಇದರ ಹಿಂದಿನ ರಹಸ್ಯವನ್ನು ಬಹಿರಂಗಪಡಿಸಿದ್ದಾರೆ. ಜೀವವಿಜ್ಞಾನದ ಪರಸ್ಪರ ಕ್ರಿಯೆ, ವ್ಯಕ್ತಿತ್ವ ಮತ್ತು ಸುತ್ತಮುತ್ತಲಿನ ಪರಿಸರದ ಪ್ರಭಾವದಿಂದಾಗಿ ಕೋಪ ಬರುತ್ತದೆ ಎಂದಿದ್ದಾರೆ.
ಅದೇ ರೀತಿ, ಹಸಿವು ಎನ್ನುವುದು ನಮ್ಮ ಭಾವನೆಗಳು ಮತ್ತು ಆಲೋಚನೆಗಳ ಮೇಲೆ ಪರಿಣಾಮ ಬೀರುತ್ತದೆ ಎಂದಿದ್ದಾರೆ. ‘ಎಮೋಷನ್’ ಜರ್ನಲ್ನಲ್ಲಿ ಪ್ರಕಟವಾದ ಅಧ್ಯಯನದ ಮುಖ್ಯ ಲೇಖಕ ಮ್ಯಾಕ್ರೋಕ್(Macroc) ಅವರು,
“ಹಸಿವಿನೊಂದಿಗೆ ಸಂಬಂಧಿಸಿದ ಭಾವನಾತ್ಮಕ ಸ್ಥಿತಿಯನ್ನು ಮತ್ತು ಹಸಿದವರು ಹೇಗೆ ಕೋಪಗೊಳ್ಳುತ್ತಾರೆ ಎಂಬುದನ್ನು ಮನೋವೈಜ್ಞಾನಿಕವಾಗಿ ಅಧ್ಯಯನ ಮಾಡಬೇಕಿದೆ” ಎಂದಿದ್ದಾರೆ.
ನಮ್ಮ ಮೆದುಳಿನಲ್ಲಿ ಗ್ಲುಕೋಸ್ ಅಂಶ ಕಡಿಮೆಯಾದಾಗ ನಮಗೆ ಹಸಿವು ಹಾಗೂ ಕೋಪ ಏಕಕಾಲಕ್ಕೆ ಉಂಟಾಗುತ್ತವೆ. ಏಕೆಂದರೆ ಮೆದುಳಿನಲ್ಲಿ ಗ್ಲುಕೋಸ್ ಕೊರತೆಯಿರುವ ಈ ಸಮಯದಲ್ಲಿ ನಮಗೆ ಭಾವನೆಗಳನ್ನು ನಿಯಂತ್ರಿಸಲು ಕಷ್ಟವಾಗುತ್ತದೆ.
ಕೋಪ ಎನ್ನುವುದು ಒಂದು ಸಾಮಾನ್ಯ ಭಾವನೆಯಾಗಿದೆ.

ಹಾಗಾಗಿ ಸಾಕಷ್ಟು ಸಂದರ್ಭಗಳಲ್ಲಿ ನಾವು ಕೋಪಗೊಳ್ಳುವುದು ಸಹಜ. ಆದರೆ ಕೋಪದ ಮೇಲೆ ನಿಯಂತ್ರಣವಿಲ್ಲದಿದ್ದಾಗ, ಅದು ನಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಹಾಳು ಮಾಡುವುದರ ಜೊತೆಗೆ, ಸಾಮಾಜಿಕ ಸಂಬಂಧಗಳನ್ನೂ ಹಾನಿಗೊಳಿಸುತ್ತದೆ. ಅಷ್ಟೇ ಅಲ್ಲದೇ, ಕೋಪವು ಹೃದಯಾಘಾತ, ಸ್ಟ್ರೋಕ್, ರಕ್ತದೊತ್ತಡದ ಅಪಾಯವನ್ನು ಹೆಚ್ಚಿಸಬಹುದು. ಹಾಗಾಗಿ ಕೋಪ ಎನ್ನುವುದು ಸಹಜ ಭಾವನೆ, ಆದರೆ ಅದರ ಮೇಲೆ ನಿಯಂತ್ರಣ ಸಾಧಿಸುವುದು ಆರೋಗ್ಯಕರ ಜೀವನಕ್ಕೆ ಅತ್ಯಗತ್ಯ.