ಅನೇಕ ವರ್ಷಗಳಿಂದ ಸಿಂಗಾಪುರ್(Singapore) ಪ್ರವಾಸಿಗರನ್ನು(Tourists) ಸೆಳೆಯುತ್ತಿರುವುದಕ್ಕೆ ಮುಖ್ಯ ಕಾರಣ ಅಲ್ಲಿನ ಸ್ವಚ್ಛವಾದ ಬೀದಿಗಳು, ಸುಂದರವಾದ ಉದ್ಯಾನಗಳು ಮತ್ತು ಈ ಸ್ಥಳದ ವೈವಿಧ್ಯಮಯ ಸಂಸ್ಕೃತಿ.
ಸಿಂಗಾಪುರದಲ್ಲಿ ಕೆಲವು ಕಟ್ಟುನಿಟ್ಟಾದ ಕಾನೂನುಗಳು ಜಾರಿಯಲ್ಲಿರುವುದರಿಂದಲೂ, ಪ್ರವಾಸಿಗರಿಗೆ ಸಿಂಗಾಪುರ್ ಸುರಕ್ಷಿತ ಸ್ಥಳ ಎಂದು ಭಾಸವಾಗುತ್ತದೆ. ಭಾರತೀಯರು ಹೆಚ್ಚಾಗಿ ವಿದೇಶ ಪ್ರವಾಸಕ್ಕೆ ಆಯ್ಕೆ ಮಾಡಿಕೊಳ್ಳುವುದು ಸಿಂಗಾಪುರ್. ಒಟ್ಟಿನಲ್ಲಿ ಈ ದೇಶ ಪ್ರವಾಸಿಗರನ್ನು ಆಕರ್ಷಿಸಲು ಎಂದಿಗೂ ವಿಫಲವಾಗಿಲ್ಲ.
ಈ ಪ್ರಖ್ಯಾತ ತಾಣಕ್ಕೆ ಪ್ರಯಾಣಿಕರು ನಿರಂತರವಾಗಿ ಭೇಟಿ ನೀಡುವುದಕ್ಕೆ ಕೆಲವು ಮುಖ್ಯ ಕಾರಣಗಳೂ ಇವೆ. ಮೊದಲನೆಯದಾಗಿ ಸ್ವಚ್ಛತೆ, ಈ ವಿಷಯಕ್ಕೆ ಬಂದರೆ, ಸಿಂಗಾಪುರ್ ನಲ್ಲಿರುವಷ್ಟು ಶಿಸ್ತು ನೀವು ಬೇರೆಡೆ ನೋಡಲು ಸಾಧ್ಯವಿಲ್ಲ. ವಾಸ್ತವವಾಗಿ, ನಗರದ ಸ್ವಚ್ಛತೆ ನೋಡಿ ಪ್ರವಾಸಿಗರೇ ಬೆರಗಾಗಿದ್ದಾರೆ.
ಇದನ್ನೂ ಓದಿ : https://vijayatimes.com/jk-national-congress-president-farooq-abdullah/
ಅಂದಹಾಗೆ ಚೂಯಿಂಗ್ ಗಮ್ ಜಗಿಯುವುದು ಸಿಂಗಾಪುರ್ ನಲ್ಲಿ ಕಾನೂನು ಬಾಹಿರವಾಗಿದೆ. ಚೂಯಿಂಗ್ ಗಮ್ ಅನ್ನು ದೇಶಕ್ಕೆ ಆಮದು ಮಾಡಿಕೊಳ್ಳುವುದನ್ನೇ ನಿಷೇಧ ಮಾಡಲಾಗಿದೆ. ಆದ್ದರಿಂದ ನಿಮಗೆ ಸಿಂಗಾಪುರ್ ನಲ್ಲಿ ಚೂಯಿಂಗ್ ಗಮ್ ಅಗಿಯಲು ಅವಕಾಶವಿಲ್ಲ. ಸಿಂಗಾಪುರದ ಕಾನೂನಿನ ಪ್ರಕಾರ, ನೀವು ಒಂದು ವೇಳೆ ಚ್ಯೂಯಿಂಗ್ ಗಮ್ ಜಗಿದು ಬೀದಿಗಳಲ್ಲಿ ಉಗುಳಿದರೆ ಶಿಕ್ಷೆ ಗ್ಯಾರಂಟಿ.
ಹೌದು, ನೀವು ಆಕಸ್ಮಿಕವಾಗಿ ಚೂಯಿಂಗ್ ಗಮ್ ಉಗುಳಿದಿರಿ ಎಂದಿಟ್ಟುಕೊಳ್ಳಿ, ನಿಮಗೆ 500 ಡಾಲರ್ ದಂಡ ವಿಧಿಸಲಾಗುತ್ತದೆ!
ಇನ್ನು, ಸಿಂಗಾಪುರ್ ಮಾತ್ರವಲ್ಲ, ಯಾವ ದೇಶದಲ್ಲಿ ವಾಸಿಸುತ್ತಿದ್ದರೂ ಎಲ್ಲೆಂದರಲ್ಲಿ ಕಸ ಎಸೆಯೋದು ತಪ್ಪೇ. ಆದರೆ, ಸಿಂಗಾಪುರದಲ್ಲಿ ಎಲ್ಲೆಂದರಲ್ಲಿ ಕಸ ಎಸೆದರೆ ಅದು ದೊಡ್ಡ ಅಪರಾಧವೆಂದು ಪರಿಗಣಿಸಲಾಗುತ್ತದೆ.
ಜೊತೆಗೆ ನಿಮಗೆ 1000 ಡಾಲರ್ ದಂಡವನ್ನು ವಿಧಿಸಲಾಗುತ್ತದೆ. ಅಪ್ಪಿತಪ್ಪಿ ನೀವು ಕಸ ಹಾಕುವುದನ್ನು ನೋಡಿದರೆ, ಶಿಕ್ಷೆಯಾಗಬಹುದು. ಇಲ್ಲಿ ಕಸ ಶುಚಿಗೊಳಿಸುವಿಕೆಗೆ ಸಂಬಂಧಿಸಿದಂತೆ ಕೆಲವು ರೀತಿಯ ನಿಯಮಗಳಿವೆ. ಈ ಅಂಶವು ಸಿಂಗಾಪುರ್ ಸಂಸ್ಕೃತಿಯ ಒಂದು ಭಾಗವಾಗಿದೆ.
ಇನ್ನು, ನೀವು ಸಾರ್ವಜನಿಕ ವಾಶ್ ರೂಂ ಅನ್ನು ಬಳಸಿದರೆ, ಫ್ಲಶ್ ಮಾಡುವುದನ್ನು ಮರೆಯಬೇಡಿ, ಇದು ಎಲ್ಲರೂ ಮೆಚ್ಚುವಂತಹ ಸೌಜನ್ಯದ ಕೆಲಸ. ಅಷ್ಟೇ ಅಲ್ಲ, ಒಂದು ವೇಳೆ ಸಿಂಗಾಪುರದಲ್ಲಿ ನೀವು ಫ್ಲಶ್ ಮಾಡಲು ಮರೆತರೆ 150 ಡಾಲರ್ ದಂಡವನ್ನು ಪಾವತಿಸಲು ಸಿದ್ಧರಾಗಿರಬೇಕಾಗುತ್ತದೆ.
ಅದೇ ರೀತಿ, ಸಿಂಗಾಪುರದಲ್ಲಿ ಪಾದಗಳನ್ನು ತೋರಿಸುವುದು ಶಿಷ್ಟಾಚಾರಕ್ಕೆ ಸಂಬಂಧಿಸಿದ ವಿಷಯವಾಗಿದೆ. ಏಷ್ಯಾ(Asia) ಭಾಗದ ಹೆಚ್ಚಿನ ಜನರು, ಕಾಲ್ಬೆರಳುಗಳನ್ನು ತೋರಿಸುವುದು ಅಥವಾ ಪಾದಗಳ ತಳಭಾಗವನ್ನು ತೋರಿಸುವುದು ಅಪರಾಧ ಎಂದು ಪರಿಗಣಿಸುತ್ತಾರೆ. ಮಂಚದ ಮೇಲೆ ಅಥವಾ ಕಾಫಿ ಟೇಬಲ್ ಬಳಿ ಕುಳಿತಾಗ ಕಾಲಿನ ಮೇಲೆ ಕಾಲನ್ನು ಹಾಕಿ ಕುಳಿತಿದ್ದರೆ ನಿಮ್ಮನ್ನು ಗೌರವಿಸುವುದಿಲ್ಲ.
ಹಾಗೇ, ಸಿಂಗಾಪುರದಲ್ಲಿ ಯಾವುದೇ ವ್ಯಕ್ತಿಯ ತಲೆಯ ಮೇಲೆ ಕೈ ಇಡುವುದನ್ನು ಇಷ್ಟಪಡುವುದಿಲ್ಲ. ಇನ್ನು, ಧೂಮಪಾನ ಪ್ರಿಯರು ಸಿಂಗಾಪುರಕ್ಕೆ ಪಯಣಿಸುವ ಮುನ್ನ ಇದನ್ನು ಓದಿ. ಸಿಂಗಾಪುರದಲ್ಲಿ ಸಾರ್ವಜನಿಕವಾಗಿ ಧೂಮಪಾನ ಮಾಡುವ ಹಾಗಿಲ್ಲ. ಈ ವಿಚಾರದಲ್ಲಿ ಸಿಂಗಾಪುರವನ್ನು ನಾವು ಪ್ರಶಂಸಿಸಬೇಕು.
ಸಿಗರೇಟ್ ಸೇದಲು ಕೆಲವು ಗೊತ್ತುಪಡಿಸಿದ ಸ್ಥಳಗಳಿವೆ ಅಲ್ಲಿ ಮಾತ್ರ ಸೇದಲು ಅವಕಾಶವಿದೆ. ಒಂದು ವೇಳೆ ನೀವು ಅಪ್ಪಿತಪ್ಪಿ ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಮಾಡಿದಿರಿ ಎಂದಿಟ್ಟುಕೊಳ್ಳಿ, 200 ಡಾಲರ್ ಪಾವತಿಸಲು ಸಿದ್ಧವಾಗಿರಿ.