ಪ್ರತಿವರ್ಷ ಮಾರ್ಚ್(March) 20 ರಂದು ಗುಬ್ಬಚ್ಚಿಗಳ(Sparrow Day) ದಿನ ಆಚರಿಸಲಾಗುತ್ತದೆ. ಆದರೆ, ಗುಬ್ಬಚಿಗಳ ದಿನ ಆಚರಣೆಗೆ ಗುಬ್ಬಚ್ಚಿಗಳೇ ಇಲ್ಲದಂತಾಗಿದೆ! ಎಂಥ ವಿಪರ್ಯಾಸವಿದು? ಅಂದಿನ ಸಮಯದಲ್ಲಿ ಗುಬ್ಬಚ್ಚಿಗಳು ಪ್ರತಿಯೊಬ್ಬರ ಮನೆಯ ಕಿಟಕಿ, ಅಂಚು, ಗಿಡ-ಮರಗಳ ಮೇಲೆ ಕುಳಿತು ಚಿಲಿಪಿಲಿ ಸದ್ದು ಮಾಡುತ್ತಿದ್ದವು. ಆದರೆ, ಇಂದು ಗುಬ್ಬಚ್ಚಿಗಳ ಸಂತತಿ ಕಣ್ಣಿಗೆ ಕಾಣದಂತೆ ಮಾಯವಾಗಿವೆ! ಎಲ್ಲೋ ಒಂದು ಮೂಲೆಯಲ್ಲಿ ಅಪರೂಪದಲ್ಲಿ ಅಪರೂಪಕ್ಕೆ ಕಾಣಸಿಗುತ್ತದೆ ಒಂದೋ ಎರಡು ಗುಬ್ಬಚ್ಚಿಗಳು. ಹೌದು, ಈ ಸಂಗತಿಯನ್ನು ನಂಬಲು ಕಷ್ಟಸಾಧ್ಯವೇ ನಿಜ.

ಭಾನುವಾರ 20 ಮಾರ್ಚ್ ವಿಶ್ವ ಗುಬ್ಬಚ್ಚಿಗಳ ದಿನ ಆಚರಣೆ ಮಾಡಿದರೂ ಕೂಡ ಗುಬ್ಬಚ್ಚಿಗಳಿಗೆ ಸೂರಿಲ್ಲದ, ಜೀವನವಿಲ್ಲದ ಆಚರಣೆಯಾಗಿದೆ ಎಂಬುದು ವಿಷಾಧ. ಸದ್ಯ ಗುಬ್ಬಚ್ಚಿಗಳ ಸಂತತಿ ಕ್ಷೀಣಿಸಲು ಕಾರಣವೇನು ಎಂಬುದನ್ನು ತಿಳಿಯಲು ಇತ್ತೀಚಿಗೆ ಹೊರಬಂದ ವೈಜ್ಷಾನಿಕ ಸಮೀಕ್ಷೆಯೊಂದರ ಪ್ರಮುಖ ವರದಿಗಳು ಹೀಗಿವೆ.
- ಪೆಟ್ರೋಲ್ ದಹನವಾದಾಗ ಹೊರಬರುವ ಮೀಥೈಲ್ ನೈಟ್ರೇಟ್‍ನಂತಹ ರಾಸಾಯನಿಕಗಳು ಕೆಲವು ಕೀಟಗಳನ್ನು ಕೊಲ್ಲುತ್ತವೆ. ಈ ಕೀಟಗಳನ್ನು ಗುಬ್ಬಿಗಳು ತಮ್ಮ ಮರಿಗಳಿಗೆ ತಿನ್ನಿಸುತ್ತಿದ್ದವು. ಇದು ಗುಬ್ಬಿಗಳ ಕಣ್ಮರೆಗೆ ಕಾರಣವಾಗಿದೆ.

- ಮನೆ ನಿರ್ಮಾಣದ ಶೈಲಿ ಬದಲಾಯಿತು. ಎಲ್ಲವೂ ಕಾಂಕ್ರಿಟ್‍ಮಯವಾಗಿದೆ. ಹೀಗಾಗಿ ಗೂಡುಕಟ್ಟಲು ಗುಬ್ಬಿಗಳಿಗೆ ಸೂಕ್ತ ಜಾಗವಿಲ್ಲದಂತಾಗಿದೆ. ಈ ಹಿಂದೆ ಮನೆಗಳ ಮುಂದೆ ದವಸ, ಧಾನ್ಯಗಳನ್ನು ಕೇರುತ್ತಿದ್ದರು. ಅಳಿದುಳಿದ ಧ್ಯಾನ್ಯಗಳು ಗುಬ್ಬಿಗಳಿಗೆ ಆಹಾರವಾಗುತ್ತಿತ್ತು. ಈಗ ಇವೆಲ್ಲಾ ಸಂಪೂರ್ಣವಾಗಿ ನಿಂತಿವೆ.

- ಹಿಂದಿನ ಕಾಲದಲ್ಲಿ ಅಂಗಡಿ, ಮುಂಗಟ್ಟುಗಳಲ್ಲಿ ಗೋಣಿ ಚೀಲದಲ್ಲಿ ಧಾನ್ಯಗಳಿರುತ್ತಿದ್ದವು ಹಾಗೂ ಅವನ್ನು ಹೊರೆಗೆ ಇರಿಸಿರುತ್ತಿದ್ದರು. ಇದರಿಂದ ಧಾನ್ಯ ಆಯುವುದು ಗುಬ್ಬಿಗಳಿಗೆ ಸುಲಭವಾಗುತ್ತಿತ್ತು. ಈಗ ಎಲ್ಲವೂ ಪ್ಲಾಸ್ಟಿಕ್ ಕವರ್‍ಗಳಲ್ಲಿ ಬಂಧಿಯಾಗಿವೆ. ಮೊಬೈಲ್ ವಿಕಿರಣಗಳಿಂದ ತೊಂದರೆ ಎಂದು ಹೇಳಲಾಗುತ್ತದೆಯಾದರೂ ಇದಕ್ಕೆ ಇವರೆಗೂ ವೈಜ್ಞಾನಿಕ ಆಧಾರಗಳು ಸಿಕ್ಕಿಲ್ಲ. ಗುಬ್ಬಿಗಳಿಗೆ ಬೇಕಾದ ಆವಾಸ್ಥಾನ ಇಲ್ಲದ್ದು( ಗಿಡ-ಮರಗಳ ಸಂಖ್ಯೆ ಕಡಿಮೆಯಾಗಿದ್ದು), ಮನೆಯ ಹಿಂದೆ, ಮುಂದೆ ಕೈತೋಟಗಳು ಕ್ಷೀಣಿಸಿದ್ದು, ಇಂಥವೂ ಅವುಗಳ ಸಂಖ್ಯೆ ಕ್ಷೀಣಿಸಲು ಕಾರಣವಾಗಿವೆ.
- Source : ಪರಿಸರ ಪರಿವಾರ