ಮಕ್ಕಳಿಗೆ ಪರಿಸರವನ್ನು ಪರಿಚಯಿಸೋಕೆ ಒಂದಷ್ಟು ಪೂರಕ ಅಂಶಗಳು. ಈಗೆಲ್ಲಾ ಪರಿಸರದ ಬಗ್ಗೆ ಮಕ್ಕಳಿಗೆ ತಿಳಿಸಲು ಹಲವರು ಉತ್ಸುಕರಾಗುತ್ತಿರುವುದು ತುಂಬಾ ಸಂತೋಷದ ವಿಚಾರ. ಈ ಪರಿಸರದ ಪರಿಚಯ ಮಕ್ಕಳಲ್ಲಿ ಪರಿಣಾಮಕಾರಿಯಾದ ಅನುಭವಾತ್ಮಕ ಕಲಿಕೆಯನ್ನು ಉಂಟು ಮಾಡಬೇಕೆಂದರೆ ಒಂದು ಪ್ರಾಣಿ/ಪಕ್ಷಿ/ಚಿಟ್ಟೆ/ಮರ/ಗೂಡು, ಇತ್ಯಾದಿಗಳನ್ನು ಪರಿಚಯಿಸುವ ಸಂದರ್ಭದಲ್ಲಿ ನಾವು ಈ ಕೆಳಕಂಡ ಅಂಶಗಳನ್ನು ಗಮನಿಸುವುದೊಳಿತು.

ಪ್ರಾಣಿ/ಪಕ್ಷಿ/ಚಿಟ್ಟೆ /ಮರ/ಗೂಡು, ಇತ್ಯಾದಿ ವಿಶೇಷಗಳನ್ನು ನಾವು ಗಮನಿಸಿದಾಗ ವ್ಹಾವ್, ನೋಡಿ ಅಲ್ಲಿ! ಎಂಬ ರೀತಿಯಲ್ಲಿ ಉತ್ಸಾಹ ಮತ್ತು ಕುತೂಹಲ ಭರಿತ ಧಾಟಿಯಲ್ಲಿ ತೋರಿಸಬೇಕು. ತೋರಿಸಿದೊಡನೆ ಎಲ್ಲರಿಗೂ ಸರಿಯಾಗಿ ಕಾಣುತ್ತಿದೆಯಾ ಎಂದು ಕೇಳಿ ತಿಳಿಯಬೇಕು. ಕಾಣುತ್ತಿಲ್ಲವೆಂದರೆ ಸಂಬಂಧಿಸಿದ ಪ್ರಾಣಿ/ ಪಕ್ಷಿ/ ಚಿಟ್ಟೆ /ಗೂಡು ಎಲ್ಲಿದೆ ಎಂದು ನಿಖರವಾಗಿ (ಮರದ ಬಲ ಕೊಂಬೆ, ಕೊಂಬೆಯ ತುದಿ, ಎಲೆಯ ಹಿಂದೆ ಹೀಗೆ) ತೋರಿಸಿ ಎಲ್ಲರೂ ನೋಡಿದರೆಂದು ಖಾತ್ರಿ ಪಡಿಸಿಕೊಳ್ಳಬೇಕು.
ಒಂದು ಕ್ಷಣ ಮಕ್ಕಳೇ ಸೂಕ್ಷ್ಮವಾಗಿ ಗಮನಿಸಲು ಬಿಡಬೇಕು. ನಂತರ ನಾವು ಗಮನಿಸಿದ್ದನ್ನು/ ಗಮನಿಸುತ್ತಿರುವುದನ್ನು ಅವರಿಗೆ ವಿವರಿಸಬಹುದು (ಪಕ್ಷಿಯಾದರೆ ರೆಕ್ಕೆಯ ಬಣ್ಣ, ಕೊಕ್ಕು, ಏನನ್ನು ತಿನ್ನುತ್ತಿದೆ, ಹೇಗೆ ಹಾರುತ್ತಿದೆ, ಕೂಗು ಹೇಗಿದೆ, ಮರವಾದರೆ ಎತ್ತರ, ದಪ್ಪ, ಎಲೆಯ ಆಕಾರ, ಬೀಜ, ಹಣ್ಣು, ತೊಗಟೆ ಹೀಗೆ)ಈ ಸಂದರ್ಭದಲ್ಲಿ ಗೈಡ್ ಬುಕ್ ಗಳಿದ್ದರೆ ಅದರಲ್ಲಿ ಚಿತ್ರಗಳನ್ನು ತೋರಿಸಿ ವಿವರಿಸಿದರೆ ಕಲಿಕೆ ಇನ್ನಷ್ಟು ಪರಿಣಾಮಕಾರಿಯಾಗುತ್ತದೆ.

ಹೆಸರುಗಳು ಚೆನ್ನಾಗಿ ನೆನಪಿನಲ್ಲಿ ಉಳಿಯುತ್ತವೆ. ಬೈನಾಕುಲರ್ ಇದ್ದರೆ ಗಮನಿಸುವಿಕೆ ಇನ್ನೂ ಪರಿಣಾಮಕಾರಿಯಾಗಿರುತ್ತದೆ. ನಂತರದಲ್ಲಿ ಸರಿಯಾಗಿ ನೋಡಿದಿರಾ/ ನೋಡಿದ್ದು ಸಾಕಾ ಎಂದು ಕೇಳಿ ಅವರು ನೋಡಿದ್ದು, ವಿಶೇಷವಾದದ್ದನ್ನು ಎಂಬ ಭಾವ ಮೂಡಿಸಿ ಮುಂದಿನ ಗಮನಿಸುವಿಕೆಗೆ ಸಾಗಬಹುದು.
Source : ಪರಿಸರ ಪರಿವಾರ