ತಾಯಿ(Mother) ತನ್ನ ಮಗುವಿಗಾಗಿ ಯಾವ ಮಟ್ಟಿನ ತ್ಯಾಗ ಬೇಕಾದರೂ ಮಾಡುತ್ತಾಳೆ.
ಅದೇ ರೀತಿ ಇಲ್ಲೊಬ್ಬ ಮಹಿಳೆ, ಪುರುಷ ಪ್ರಧಾನವಾಗಿರುವ ನಮ್ಮ ಸಮಾಜದಲ್ಲಿ ತಮ್ಮ ಮಗಳನ್ನು ಏಕಾಂಗಿಯಾಗಿ ಬೆಳೆಸಲು ಪುರುಷನ ವೇಷದಲ್ಲಿ ಮೂವತ್ತು ವರ್ಷಗಳ ಕಾಲ ಬದುಕಿದ ಮನಕಲಕುವ ಘಟನೆ ತಮಿಳುನಾಡಿನಲ್ಲಿ(Women lived as men for 30 years) ನಡೆದಿದೆ.
57 ವರ್ಷದ ಮಹಿಳೆ ತಮ್ಮ ಬದುಕಿನ ಕಹಿ ಸತ್ಯವನ್ನು ಮೂವತ್ತು ವರ್ಷಗಳ ನಂತರ ಬಿಚ್ಚಿಟ್ಟಿದ್ದಾರೆ.
ಹೃದಯಾಘಾತದಿಂದ ಪತಿ ಮೃತಪಟ್ಟಾಗ ಎಸ್. ಪೆಚಿಯಮ್ಮಾಳ್(S Pechiyammal) ಅವರಿಗೆ ಕೇವಲ 20 ವರ್ಷ ವಯಸ್ಸು. ಅವರು ಮದುವೆಯಾಗಿ ಆಗ 15 ದಿನಗಳಷ್ಟೇ ಕಳೆದಿತ್ತು. ಅವರು ಮೂಲತಃ ಕಟುನಾಯಕನಪಟ್ಟಿ ಗ್ರಾಮದವರು. ಪತಿಯ ಮರಣದಿಂದ ದಿಕ್ಕೆಟ್ಟಿದ್ದ ಪೆಚಿಯಮ್ಮಾಳ್ ಅವರಿಗೆ, ತಾವು ಗರ್ಭಿಣಿ ಎಂಬ ಸಂಗತಿ ಬರಸಿಡಿಲಿನಂತೆ ಬಂದೆರಗಿತ್ತು.
ನಂತರ ಹೆಣ್ಣು ಮಗುವಿಗೆ ಜನ್ಮ ನೀಡಿ, ಮಗುವನ್ನು ಬೆಳೆಸುವ ಭಾರವೂ ಅವರ ಹೆಗಲಿಗೇರಿತು. ಪ್ರತಿದಿನದ ತುತ್ತಿಗಾಗಿ ಅವರು ಕೂಲಿ ಕೆಲಸ ಮಾಡ ತೊಡಗಿದರು, ಆದರೆ ತೂತುಕುಡಿ ಪಟ್ಟಣದಲ್ಲಿ ಕಟ್ಟುನಾಯಕನಪಟ್ಟಿ ಹಳ್ಳಿಯಲ್ಲಿ ಮಹಿಳೆಯಾಗಿ ಕೆಲಸ ಮಾಡುವುದು ದೊಡ್ಡ ಸವಾಲಾಗಿತ್ತು.

ಪೆಚಿಯಮ್ಮಾಳ್ ಅವರಿಗೆ ಗ್ರಾಮದ ಪುರುಷರು ಕಿರುಕುಳ ನೀಡುತ್ತಿದ್ದರು. ಹಾಗಾಗಿ ಗಂಡ ಸತ್ತ ಬಳಿಕ ತಾವು ‘ಮುತ್ತು’ ಆಗಿ ಬದಲಾಗುವ ಮಾರ್ಗವೊಂದೇ ನನ್ನ ಮುಂದಿತ್ತು ಎಂದು ಪೆಚಿಯಮ್ಮಾಳ್ ಹೇಳಿಕೊಂಡಿದ್ದಾರೆ. ತಮ್ಮ ಹಾಗೂ ಮಗುವಿನ ಜೀವನದ ಬಗ್ಗೆ ದೃಢಸಂಕಲ್ಪ ಹೊಂದಿದ್ದ ಅವರು, ಕಟ್ಟಡ ನಿರ್ಮಾಣ ಸ್ಥಳಗಳು, ಹೋಟೆಲ್, ಟೀ ಅಂಗಡಿ ಮುಂತಾದ ಕಡೆಗಳಲ್ಲಿ ಕೆಲಸ ಮಾಡಿದರು.
ಆದರೆ ಅಲ್ಲಿ ಸಿಗುವ ಸಂಬಳದಿಂದ ಮಗುವನ್ನು ಬೆಳೆಸುವುದು ಬಹಳ ಕಷ್ಟಕರವಾಗಿತ್ತು. ತಾವು ಕೆಲಸ ಮಾಡಿದ ಕಡೆಯಲ್ಲೆಲ್ಲ ಕಿರುಕುಳ, ಲೈಂಗಿಕ ಹಿಂಸೆ ಮತ್ತು ಇತರೆ ಅನೇಕ ತೊಂದರೆಗಳನ್ನು ಅನುಭವಿಸುವಂತಾಗಿತ್ತು.
ಹಾಗಾಗಿ ಧೃಡ ನಿರ್ಧಾರ ತಳೆದ ಪೆಚಿಯಮ್ಮಾಳ್, ಅಲ್ಲಿಂದ 36 ವರ್ಷ ಗಂಡಿನ ವೇಷದಲ್ಲಿಯೇ ಜೀವನ ಸಾಗಿಸಿದರು. ಅವರು ಕೆಲಸ ಮಾಡಿದ ಕಡೆಯಲ್ಲೆಲ್ಲ ಜನರು ಇವರನ್ನು ‘ಅಣ್ಣಾಚಿ’ ಎಂದು ಕರೆಯುತ್ತಿದ್ದರು.
ತಮ್ಮ ಜೀವನದ ಬಗ್ಗೆ ಸ್ವತಃ ಪೆಚಿಯಮ್ಮಾಳ್ ಈ ರೀತಿ ಹೇಳಿದ್ದಾರೆ “ನಾನು ಎಲ್ಲ ರೀತಿಯ ಕೆಲಸಗಳನ್ನೂ ಮಾಡಿದ್ದೇನೆ. ಪೈಂಟರ್, ಟೀ ಮಾಸ್ಟರ್, ಪರೋಟಾ ಮಾಸ್ಟರ್ ಹೀಗೆ ಎಲ್ಲ ಕೆಲಸಗಳನ್ನೂ ನಿಭಾಯಿಸಿದ್ದೇನೆ. ನನ್ನ ಮಗಳಿಗೆ ಸುರಕ್ಷಿತ ಹಾಗೂ ಸುಭದ್ರ ಜೀವನ ನೀಡುವುದಕ್ಕಾಗಿ ಪ್ರತಿ ಪೈಸೆಯನ್ನೂ ಉಳಿಸಿದ್ದೆ. ಅನಿವಾರ್ಯವಾಗಿ ಮುತ್ತು ಎನ್ನುವುದು ನನ್ನ ಗುರುತಾಗಿ ಬದಲಾಯಿತು. https://vijayatimes.com/rahul-gandhi-strikes-bjp-government/

ಆಧಾರ್ ಕಾರ್ಡ್, ವೋಟರ್ ಐಡಿ ಮತ್ತು ಬ್ಯಾಂಕ್ ಖಾತೆಗಳು ಸೇರಿದಂತೆ ಎಲ್ಲ ದಾಖಲೆಗಳಲ್ಲಿಯೂ ‘ಮುತ್ತು’ ಎಂದೇ ಹೆಸರು ದಾಖಲಾಗಿದೆ ಎಂದು ಹೇಳಿದ್ದಾರೆ. ಪೆಚಿಯಮ್ಮಾಳ್ ಅವರು ಇಷ್ಟೆಲ್ಲಾ ಕಷ್ಟಪಟ್ಟು ಬೆಳೆಸಿದ ಮಗಳು ಷಣ್ಮುಗಸುಂದರಿ ಈಗ ಮದುವೆಯಾಗಿದ್ದಾರೆ.
ಆದರೆ 57 ವರ್ಷದ ಪೆಚಿಯಮ್ಮಾಳ್ ತಮ್ಮ ಇದುವರೆಗಿನ ವೇಷವನ್ನು ಮತ್ತೆ ಬದಲಿಸಲು ಸಿದ್ಧರಿಲ್ಲ. ತಮ್ಮ ಗಂಡು ವೇಷ ಇದುವರೆಗೂ ಮಗಳ ಸುರಕ್ಷಿತ ಜೀವನಕ್ಕೆ ಸಹಾಯ ಮಾಡಿದೆ. ಇದೇ ಕಾರಣಕ್ಕಾಗಿ ಸಾವಿನವರೆಗೂ ‘ಮುತ್ತು’ ಆಗಿಯೇ ಬದುಕಬೇಕು ಎನ್ನುವುದು ಇವರ ಇಚ್ಛೆ.
- ಪವಿತ್ರ ಸಚಿನ್