ಡೆಹ್ರಾಡೂನ್, ಮಾ. 18: ಹರಿದ ಜೀನ್ಸ್ ಧರಿಸುವ ಮಹಿಳೆಯರು ಸಮಾಜಕ್ಕೆ ಮತ್ತು ಮಕ್ಕಳಿಗೆ ತಪ್ಪು ಸಂದೇಶವನ್ನು ನೀಡುತ್ತಾರೆ ಎಂದು ಉತ್ತಾರಾಖಂಡ ರಾಜ್ಯದ ನೂತನ ಮುಖ್ಯಮಂತ್ರಿ ತಿರತ್ ಸಿಂಗ್ ರಾವತ್ ಹೇಳಿದ್ದಾರೆ. ಮಕ್ಕಳ ಹಕ್ಕುಗಳ ರಕ್ಷಣೆ ಬಗ್ಗೆ ರಾಜ್ಯ ಆಯೋಗ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಾವತ್ ಈ ರೀತಿ ಹೇಳಿಕೆ ವಿವಾದವನ್ನು ಸೃಷ್ಟಿ ಮಾಡಿದೆ.
ಒಮ್ಮೆ ನಾನು ವಿಮಾನದಲ್ಲಿ ಪ್ರಯಾಣಿಸುತ್ತಿದ್ದಾಗ ನನ್ನ ಪಕ್ಕದಲ್ಲಿ ಮಹಿಳೆಯೊಬ್ಬರು ಕುಳಿತಿದ್ದರು. ಆಕೆ ಬೂಟ್ಸ್ ಧರಿಸಿದ್ದರು, ಧರಿಸಿದ ಜೀನ್ಸ್ ಮೊಣಕಾಲಿನ ಭಾಗದಲ್ಲಿ ಹರಿದಿತ್ತು, ಆಕೆಯ ಜತೆ ಇಬ್ಬರು ಮಕ್ಕಳಿದ್ದರು. ನೀವೊಂದು ಎನ್ಜಿಒ ನಡೆಸುತ್ತೀರಿ, ಮೊಣಕಾಲಿನ ಭಾಗದಲ್ಲಿ ಹರಿದಿರುವ ಜೀನ್ಸ್ ಧರಿಸುತ್ತೀರಿ. ಸಮಾಜದಲ್ಲಿ ಓಡಾಡುತ್ತೀರಿ, ನಿಮ್ಮ ಮಕ್ಕಳು ನಿಮ್ಮ ಜತೆಯಲ್ಲಿದ್ದಾರೆ. ನೀವು ಯಾವ ಮೌಲ್ಯವನ್ನು ಹೇಳಿಕೊಡುತ್ತಿದ್ದೀರಿ ಎಂದು ರಾವತ್ ಪ್ರಶ್ನಿಸಿದ್ದಾರೆ.
ರಿಪ್ಡ್ ಜೀನ್ಸ್ ಸ್ಟೈಲ್ ಅನ್ನು ‘ಸಂಸ್ಕೃತಿಗೆ ಕತ್ತರಿ’ ಎಂದು ಹೇಳಿದ ರಾವತ್, ಹರಿದ ಜೀನ್ಸ್ ಧರಿಸಿ ಮೊಣಕಾಲು ತೋರಿಸಿದರೆ ಶ್ರೀಮಂತರು ಎಂದೆನಿಸಿಕೊಳ್ಳುವುದಿಲ್ಲ ಎಂಬುದನ್ನು ನಾವು ಕಲಿಸಿಕೊಡಬೇಕಿದೆ. ಭಾರತದಲ್ಲಿರುವ ಜನರು ಹರಿದ ಜೀನ್ಸ್ ಧರಿಸುತ್ತಿದ್ದರೆ ಇತರ ದೇಶದ ಜನರು ಮೈಮುಚ್ಚಿಕೊಂಡು, ಯೋಗ ಕಲಿಯುತ್ತಿದ್ದಾರೆ ಎಂದಿದ್ದಾರೆ ರಾವತ್.
ರಾವತ್ ಅವರ ಹೇಳಿಕೆಯನ್ನು ಖಂಡಿಸಿದ ಕಾಂಗ್ರೆಸ್ ವಕ್ತಾರ ಗರಿಮಾ ದಸೌನಿ, ಈ ಹೇಳಿಕೆ ಅಸಂಬದ್ಧ ಎಂದಿದ್ದಾರೆ. ಯಾವುದೇ ವ್ಯಕ್ತಿಯ ಉಡುಗೆ ಬಗ್ಗೆ ಮುಖ್ಯಮಂತ್ರಿಯೊಬ್ಬರು ಈ ರೀತಿ ಕಾಮೆಂಟ್ ಮಾಡಬಾರದು. ಮಹಿಳೆಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಹೇಳುವಾಗ ಬಿಜೆಪಿ ನಾಯಕರು ಮೌನವಾಗಿರುವುದು ಯಾಕೆ ಎಂದು ಗರಿಮಾ ಪ್ರಶ್ನಿಸಿದ್ದಾರೆ.
ಹರಿದ ಜೀನ್ಸ್ ಹೇಳಿಕೆ ವಿರುದ್ಧ ರೊಚ್ಚಿಗೆದ್ದ ನೆಟ್ಟಿಗರು:
ಹರಿದ ಜೀನ್ಸ್ ಬಗ್ಗೆ ರಾವತ್ ಹೇಳಿಕೆಯನ್ನು ಖಂಡಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಮಹಿಳೆಯರು ರೊಚ್ಚಿಗೆದ್ದಿದ್ದಾರೆ. #ರಿಪ್ಡ್ ಜೀನ್ಸ್ ಎಂಬ ಟ್ರೆಂಡಿಂಗ್ ನಡೆಯುತ್ತಿದೆ. ಮಹಿಳೆಯರ ಉಡುಗೆ ನೋಡಿ ಗಂಡಸರು ದೇಶದ ಸಂಸ್ಕೃತಿ ಮತ್ತು ಆಚಾರಗಳ ಬಗ್ಗೆ ಅಭಿಪ್ರಾಯ ಪಡುತ್ತಾರೆ. ನಿಮ್ಮ ಆಲೋಚನೆಗಳನ್ನು ಬದಲಿಸಿ ರಾವತ್ ಜೀ, ಹಾಗಾದರೆ ಮಾತ್ರ ದೇಶ ಬದಲಾಗಬಲ್ಲದು ಎಂದು ಪ್ರಿಯಾಂಕಾ ಚತುರ್ವೇದಿ ಟ್ವೀಟ್ ಮಾಡಿದ್ದಾರೆ.