ಸಂಪೂರ್ಣವಾಗಿ ಮಹಿಳೆಯರೇ ವಹಿವಾಟು ನಡೆಸುವ ಏಷ್ಯಾದ ಏಕೈಕ ಮಾರುಕಟ್ಟೆ (women’s market) ಎಂಬ ಹೆಗ್ಗಳಿಕೆ ‘ಇಮಾ ಕೈತಿಲ್’ಗೆ ಇದೆ.
ಮಣಿಪುರಿ ಭಾಷೆಯಲ್ಲಿ ‘ಇಮಾ’ ಎಂದರೆ ತಾಯಿ; ‘ಕೈತಿಲ್’ ಅಂದರೆ ಮಾರುಕಟ್ಟೆ. ಹೀಗಾಗಿ ಇದಕ್ಕೆ ‘ತಾಯಂದಿರ ಮಾರುಕಟ್ಟೆ’ ಅನ್ನಬಹುದು.
ಪ್ರಸ್ತುತ ಇಲ್ಲಿ ವಹಿವಾಟು ನಡೆಸುವವರ ಸಂಖ್ಯೆ ಸುಮಾರು ನಾಲ್ಕು ಸಾವಿರ. ಪುರುಷರು ಇಲ್ಲಿ ಗ್ರಾಹಕರಾಗಿ ಬರಬಹುದೇ ಹೊರತೂ ವ್ಯಾಪಾರ ಮಾಡಲು ನಿಷೇಧ!

ಈ ಮಾರುಕಟ್ಟೆಗೆ ಐದು ಶತಮಾನಗಳ ಇತಿಹಾಸವಿದೆ. ಅಲ್ಲಿಂದ ಈವರೆಗೆ ‘ಇಮಾ ಮಾರ್ಕೆಟ್’ ಸಾಗಿ ಬಂದ ಬಗೆ ಕುತೂಹಲಕರ.
ಹದಿನಾರನೇ ಶತಮಾನದ ಮಧ್ಯಭಾಗದಲ್ಲಿ ಮಣಿಪುರ ಪ್ರಾಂತದ ಅರಸು ‘ಲಾಲಪ್ ಕಬಾ’ ಎಂಬ ಪದ್ಧತಿ ಜಾರಿಗೆ ತಂದಿದ್ದ.
ಇದು ಒಂದು ಬಗೆಯಲ್ಲಿ ಗುಲಾಮಿತನದ ವಿಧಾನ. ಮೈತೀ ಸಮುದಾಯದ ಗಂಡಸರನ್ನು ಯುದ್ಧ ಅಥವಾ ಗಡಿಭಾಗವನ್ನು ರಕ್ಷಿಸಲು ದೂರಕ್ಕೆ ಕಳಿಸಲಾಗುತ್ತಿತ್ತು.
ಆ ಕುಟುಂಬಗಳ ಹೆಣ್ಣುಮಕ್ಕಳು ಊರಲ್ಲಿಯೇ ಉಳಿದು, ಸಂಸಾರ ಸರಿದೂಗಿಸಬೇಕಿತ್ತು.
ನೂಲು ತೆಗೆಯುವುದು, ಹೊಲ- ಗದ್ದೆಗಳಲ್ಲಿ ಕೆಲಸ ಮಾಡುವುದು, ಮಕ್ಕಳನ್ನು ಸಾಕಿ ಸಲಹುವುದು ಅವರ ಪಾಲಿಗೇ ಬರುತ್ತಿತ್ತು.
ಜೀವನೋಪಾಯಕ್ಕೆಂದು ನೂಲು ತೆಗೆಯುವುದು, ಬಟ್ಟೆ ಹೊಲಿಯುವುದು, ಸಾಮಗ್ರಿ ತಯಾರಿಕೆಯಂಥ ಚಟುವಟಿಕೆಗಳನ್ನು ಅವಲಂಬಿಸಿದ್ದರು.
ಈ ಎಲ್ಲ ವಹಿವಾಟಿನ ಕೇಂದ್ರವಾಗಿದ್ದ ತಾಣವು ‘ಇಮಾ ಕೈತಿಲ್’ ರೂಪುಗೊಳ್ಳಲು ಮೂಲ ಕಾರಣವಾಯಿತು.

ಇಂಫಾಲ್ನ ವಿಶಾಲ ಜಾಗದಲ್ಲಿ ಕಟ್ಟೆ ಕಟ್ಟಿಕೊಂಡು, ಅದರ ಮೇಲೆ ಪದಾರ್ಥಗಳನ್ನು ಇಟ್ಟುಕೊಂಡು ಚಿಕ್ಕಪುಟ್ಟ ವಹಿವಾಟು ನಡೆಸುತ್ತಿದ್ದ ಮಾರುಕಟ್ಟೆಯು ಶತಮಾನಗಳ ಕಾಲ ಮುಂದುವರಿದುಕೊಂಡು ಬಂದಿತು.
1890ರ ಸುಮಾರಿಗೆ ಬ್ರಿಟಿಷರು ಮಣಿಪುರದ ಮೇಲೆ ನಿಯಂತ್ರಣ ಸಾಧಿಸಿದ ಪರಿಣಾಮವಾಗಿ ಉಂಟಾದ ಬದಲಾವಣೆಗಳಿಂದ ‘ಇಮಾ ಮಾರ್ಕೆಟ್’ ನಲುಗಿತು.
ಅದರಲ್ಲೂ ಸ್ಥಳೀಯ ಆಡಳಿತಗಾರನ ಮೂಲಕ ವಹಿವಾಟನ್ನು ತಮ್ಮ ಹಿಡಿತಕ್ಕೆ ತಂದುಕೊಂಡ ಬ್ರಿಟಿಷರು,
ಮಣಿಪುರದ ವಿಶೇಷ ಅಕ್ಕಿಯನ್ನು ಬಲವಂತದಿಂದ ಪಡೆದು ಬೇರೆ ದೇಶಗಳಿಗೆ ರಫ್ತು ಮಾಡಲು ಶುರು ಮಾಡಿದರು. ಇದರ ಜತೆ ಸುಂಕ ಹೆಚ್ಚಳದಂಥ ಕಠಿಣ ನಿಯಮಾವಳಿಗಳು ಮಾರುಕಟ್ಟೆಗೆ ಪೆಟ್ಟು ನೀಡಿದವು.
ಒಂದಷ್ಟು ವರ್ಷಗಳ ಕಾಲ ಈ ಕಷ್ಟಗಳನ್ನು ಮೌನವಾಗಿ ಸಹಿಸಿಕೊಂಡ ಮಹಿಳೆಯರು,
ಕ್ರಮೇಣ ಪ್ರತಿರೋಧ ತೋರಿಸಲು ಶುರು ಮಾಡಿದರು. ಅದು ಸ್ಫೋಟಗೊಂಡಿದ್ದು 1939ರಲ್ಲಿ. ಪಟ್ಟಣದ ವಿವಿಧೆಡೆ ಬೃಹತ್ ಸಭೆಗಳು, ಪ್ರತಿಭಟನೆಗಳು ನಡೆದವು.
ಹೋರಾಟ, ಚಳವಳಿಗಳನ್ನು ಹತ್ತಿಕ್ಕುವುದು ಬ್ರಿಟಿಷರಿಗೆ ಹೊಸದೇನೂ ಅಲ್ಲವಲ್ಲ? ಬಗೆಬಗೆಯ ‘ಅಸ್ತ್ರ’ಗಳನ್ನು ಅವರು ಬಳಸಿದರು. ಆದರೆ, ಕೊನೆಗೂ ಮಹಿಳೆಯರ ಹೋರಾಟಕ್ಕೆ ಬ್ರಿಟಿಷರು ಮಣಿದಿದ್ದು ಇತಿಹಾಸದಲ್ಲಿ ದಾಖಲಾದ ಸಂಗತಿ.
ಭಾರತಕ್ಕೆ ಸ್ವಾತಂತ್ರ್ಯ ಬಂದ ಬಳಿಕ ಇಡೀ ಭೂಮಿಕೆ ಬದಲಾಗುತ್ತ ಹೋಯಿತು. ಮಣಿಪುರದ ಮಹಿಳೆಯರ ಆರ್ಥಿಕತೆಗೆ ಚೈತನ್ಯ ನೀಡಲು ‘ಇಮಾ ಮಾರ್ಕೆಟ್’ಗೆ ಹೊಸ ರೂಪು ಕೊಡಲಾಯಿತು.
https://vijayatimes.com/second-world-war-rare-photo/
ಬರೀ ವಹಿವಾಟು ಮಾತ್ರವಲ್ಲ; ಸ್ವಾವಲಂಬನೆ ಬದುಕಿನ ಸಂಕೇತವೆನಿಸಿದ ಈ ಮಾರುಕಟ್ಟೆಯು ಹೊಸ ಹೊಸ ಸಾಧ್ಯತೆಗಳನ್ನೂ ತೆರೆದಿಟ್ಟಿತು.

ದಿನನಿತ್ಯ ಬಳಸುವ ಎಲ್ಲ ಸಾಮಗ್ರಿಗಳು ಇಮಾ ಮಾರುಕಟ್ಟೆಯಲ್ಲಿ ಸಿಗುತ್ತವೆ ಎಂಬುದೇ ಇದರ ವೈಶಿಷ್ಟ್ಯ. ಮೂವತ್ತು ವರ್ಷಗಳಿಂದಲೂ ಮಣ್ಣಿನ ಪಾತ್ರೆ ಮಾರುತ್ತಿರುವ ಶುಹಾಸಿ ಹೇಳುತ್ತಾರೆ:
‘ಇಂಫಾಲ್ ಮಾತ್ರವಲ್ಲ, ಅಕ್ಕಪಕ್ಕದ ಹಳ್ಳಿ- ಪಟ್ಟಣಗಳಿಂದ ಇಲ್ಲಿಗೆ ಬಂದು ಮನೆಗೆ ಬೇಕಾಗುವ ಎಲ್ಲವನ್ನೂ ಖರೀದಿಸಿ ಒಯ್ಯುವವರು ಸಾವಿರಾರು ಜನರಿದ್ದಾರೆ.
ಅದೇಕೋ ಸೂಪರ್ ಬಜಾರುಗಳು ಇದ್ದರೂ ಇಲ್ಲಿಗೆ ಬರುವವರ ಸಂಖ್ಯೆ ಕಡಿಮೆಯೇನಾಗಿಲ್ಲ.’
‘ಇಮಾ ಮಾರ್ಕೆಟ್’ ಮಾತ್ರವಲ್ಲ; ಮಣಿಪುರದ ಎಲ್ಲೆಲ್ಲೂ ವ್ಯಾಪಾರ- ವಹಿವಾಟು ನಡೆಸುವವರು ಹೆಚ್ಚಾಗಿ ಮಹಿಳೆಯರೇ. ಈ ಮಾರುಕಟ್ಟೆ ಅತ್ಯಂತ ದೊಡ್ಡ ಪ್ರಮಾಣದಲ್ಲಿ ಇರುವುದರಿಂದ ಎಲ್ಲೆಲ್ಲೂ ಹೆಣ್ಣುಮಕ್ಕಳೇ ಕಾಣುತ್ತಾರೆ.
‘ನಿಮ್ಮ ಪತಿ ಏನು ಮಾಡುತ್ತಾರೆ?’ ಎಂದು ತಾವರೆ ಹೂವುಗಳ ಕಟ್ಟುಗಳನ್ನು ಮಾರುತ್ತಿದ್ದ ದೊಂತಾಗ್ಮಲು ಅವರನ್ನು ಪ್ರಶ್ನಿಸಿದೆ. ‘ಗದ್ದೆಯ ಹೊಂಡಗಳಲ್ಲಿ ಮೀನು ಸಾಕಣೆ ಮಾಡುತ್ತಾರೆ.
ಸ್ವಲ್ಪ ಜಮೀನು ಇದೆ; ಅಲ್ಲಿ ತರಕಾರಿ, ತಾವರೆ ಬೆಳೆಯುತ್ತಾರೆ’ ಎಂದು ಅವರು ಉತ್ತರಿಸಿದರು.

ಎರಡು ಬಗೆಯಲ್ಲಿ ‘ಇಮಾ ಮಾರ್ಕೆಟ್’ ಪರಿಗಣಿಸಬಹುದು: ಹೆಣ್ಣುಮಕ್ಕಳಿಗೆ ಸಿಕ್ಕ ಆರ್ಥಿಕ ಭದ್ರತೆ ಹಾಗೂ ಸಾಂಪ್ರದಾಯಿಕ ಕೃಷಿ ವೈವಿಧ್ಯದ ಅನಾವರಣ. ಬೆಳಿಗ್ಗೆ 3 ಗಂಟೆಗೆ ಶುರುವಾಗುವ ಮಾರುಕಟ್ಟೆಯು ಹಂತಹಂತದಲ್ಲಿ ನಡೆದು ಸಂಜೆ 6ಕ್ಕೆ ಮುಕ್ತಾಯವಾಗುತ್ತದೆ.
ಗ್ರಾಹಕರ ಪೈಕಿ ಹೆಚ್ಚಿನವರು ಮಹಿಳೆಯರೇ ಇರುವುದರಿಂದ, ದಿನವಿಡೀ ನಡೆಯುವ ಚಟುವಟಿಕೆಗಳು ಮಹಿಳೆಯರ ಸುತ್ತಲೇ ಇರುತ್ತವೆ.
ಗಿನ್ನಿಸ್ ದಾಖಲೆ ಮಾಡಿರುವ ‘ಕಿಂಗ್ ಚಿಲ್ಲಿ’ಯ ವಿಶಾಲ ಲೋಕವೇ ಇಲ್ಲಿದೆ.
ಕೈಯಿಂದ ಮುಟ್ಟಲೂ ಆಗದಷ್ಟು ಭಯಂಕರ ಖಾರ ಅದು! ಬರೀ ಫೋಟೊದಲ್ಲಿ ಕಾಣಸಿಗುವ ‘ಕಿಂಗ್ ಚಿಲ್ಲಿ’ಯಂತಹ ಅನೇಕ ವಸ್ತುಗಳು ಇಲ್ಲಿ ಕಾಣಸಿಗುತ್ತವೆ.
-ಪವಿತ್ರ