- ಪ್ರತಿನಿಧಿ
ಇಂದು ವಿಶ್ವ ಹೈಪರ್ ಟೆನ್ಷನ್ ಡೇ. ಈ ವರ್ಷದ ಥೀಮ್ ಅಂದ್ರೆ `ನಿಮ್ಮ ರಕ್ತದೊತ್ತಡವನ್ನು ಸರಿಯಾಗಿ ಅಳೆಯಿರಿ, ನಿಯಂತ್ರಿಸಿ, ದೀರ್ಘಕಾಲ ಜೀವಿಸಿ’.
ಇದು ಒಂದು ಪ್ರದೇಶಕ್ಕೆ ಸೀಮಿತವಾಗಿಲ್ಲ, ಇಡೀ ವಿಶ್ವದಾದ್ಯಂತ ಆಚರಿಸುತ್ತಾರೆ. ಏಕೆಂದರೆ ಪ್ರತಿಯೊಬ್ಬರಿಗೂ ಅವಶ್ಯಕ ಈ ರಕ್ತದೊತ್ತಡ. ಇದನ್ನು ವಿಶ್ವ ಅಧಿಕ ರಕ್ತದೊತ್ತಡ ದಿನ ಅಂತಲೂ ಕರೆಯುತ್ತಾರೆ. ಇಂತಹ ಕೊರೋನಾದ ಸಂದಿಗ್ಧ ಸಮಯದಲ್ಲಿ ರಕ್ತದ ಒತ್ತಡ ನಿಯಂತ್ರಣ ಮಾಡುವುದು ಅತ್ಯವಶ್ಯಕವಾಗಿದೆ. ಏಕೆಂದರೆ ಮಾನಸಿಕ ಒತ್ತಡಕ್ಕೆ ಸಿಲುಕದೇ ರಕ್ತದ ಒತ್ತಡವನ್ನು ನಿಯಂತ್ರಣದಲ್ಲಿರಿಸಿಕೊಳ್ಳುವುದು ಒಳಿತು.
ವಿಶ್ವ ಅಧಿಕ ರಕ್ತದೊತ್ತಡ ದಿನದ ಇತಿಹಾಸ:
ಅಧಿಕ ರಕ್ತದೊತ್ತಡ ದಿನವನ್ನು ವರ್ಲ್ಡ್ ಹೈಪರ್ಟೆನ್ಷನ್ ಲೀಗ್ – 85 ರಾಷ್ಟ್ರೀಯ ಅಧಿಕ ರಕ್ತದೊತ್ತಡ ಸಂಘಗಳ ಮೈತ್ರಿ ಸಂಸ್ಥೆ – ಮೇ 14, 2005 ರಂದು ಅಧಿಕ ರಕ್ತದೊತ್ತಡ ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರಾರಂಭಿಸಿತು. 2006 ರಲ್ಲಿ, 2 ನೇ WHD ಯನ್ನು ಮೇ 17 ರಂದು ಆಚರಿಸಲಾಯಿತು, ಮತ್ತು ಅಂದಿನಿಂದ ಈ ದಿನಾಂಕವನ್ನು ಪ್ರತಿವರ್ಷ ವಿಶ್ವ ಅಧಿಕ ರಕ್ತದೊತ್ತಡ ದಿನಕ್ಕೆ ಮೀಸಲಿಡಲಾಗಿದೆ.
ಹೃದಯ ಸಂಬಂಧಿತ ಕಾಯಿಲೆ, ಪಾರ್ಶ್ವವಾಯು, ಮೂತ್ರಪಿಂಡ ವೈಫಲ್ಯಗಳಂತಹ ಸಮಸ್ಯೆಗಳಿಗೆ ರಕ್ತದೊತ್ತಡ ಪ್ರಮುಖ ಕಾರಣವಾಗಿದೆ. ಸಾಮಾನ್ಯವಾಗಿ ಆರೋಗ್ಯದ ಏರು-ಪೇರಿನಿಂದ ಉಂಟಾಗುವ ಬಿಪಿಯನ್ನು ನಿಯಂತ್ರಣಕ್ಕೆ ತರದಿದ್ದಲ್ಲಿ ಅಥವಾ ಮಾನಸಿಕ ಒತ್ತಡ, ರಕ್ತದೊತ್ತಡದ ಬಗ್ಗೆ ನಿರ್ಲಕ್ಷ್ಯವಹಿಸಿದಲ್ಲಿ ಆರೋಗ್ಯಕ್ಕೆ ಸಂಬಂಧಿಸಿದ ಇತರ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹಾಗಾಗಿ ನಾವು ನಮ್ಮ ಆಹಾರ ಕ್ರಮವನ್ನು ಶಿಸ್ತುಬದ್ಧವಾಗಿ ರೂಢಿಯಲ್ಲಿಟ್ಟುಕೊಳ್ಳಬೇಕು.
ಆಹಾರ ಕ್ರಮ ಹೇಗಿರಬೇಕು?:
ದಿನಕ್ಕೆ ಒಂದು ಟೀ ಸ್ಪೂನ್ ಅಷ್ಟು ಮಾತ್ರ ಉಪ್ಪು ಸೇವನೆ. ಆದಷ್ಟು ಕಡಿಮೆ ಉಪ್ಪು ಸೇವನೆಯಿಂದ ರಕ್ತದ ಒತ್ತಡ (ಹಥಪರ್ ಟೆನ್ಶನ್) ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು. ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿರುವವರು ಹೆಚ್ಚು ಪೊಟ್ಯಾಶಿಯಂ ಇರುವ ಆಹಾರ ಪದಾರ್ಥಗಳಿಂದ ದೂರ ಇರುವುದು ಒಳಿತು.
ಸರಿಯಾದ ಆಹಾರ ಕ್ರಮದೊಂದಿಗೆ ತೂಕವನ್ನು ಇಳಿಸಿ. ಸರಿಯಾದ ದೇಹದ ತೂಕ ಹೊಂದಿರುವ ಮೂಲಕ ನಿಮ್ಮ ಆರೋಗ್ಯದ ಸುರಕ್ಷತೆಯನ್ನು ಕಾಪಾಡಿಕೊಳ್ಳಬಹುದಾಗಿದೆ. ಹಣ್ಣು, ತರಕಾರಿಗಳನ್ನು ಸೇವಿಸಿ. ಉತ್ತಮ ಪೌಷ್ಠಿಕಾಂಶಯುಕ್ತ ಆಹಾರ ಸೇವಿಸುವುದರ ಮೂಲಕ ಒಳ್ಳೆಯ ಆರೋಗ್ಯ ಕಾಪಾಡಿಕೊಳ್ಳಬಹುದು. ಜೊತೆಗೆ ಹೆಚ್ಚು ಕೊಬ್ಬಿನಾಂಶವಿರುವ ಆಹಾರ ಪದಾರ್ಥವನ್ನು ಕಡಿಮೆ ಸೇವಿಸಿ. ಪ್ರತಿನಿತ್ಯ ವ್ಯಾಯಾಮ, ಪ್ರಾಣಾಯಾಮದ ಜೊತೆಗೆ ದೇಹಕ್ಕೆ ಯೋಗಾಭ್ಯಾಸ ನೀಡುವ ಕ್ರಮವನ್ನು ರೂಢಿಯಲ್ಲಿಟ್ಟುಕೊಳ್ಳಿ. ವ್ಯಾಯಾಮದಲ್ಲಿ ದಿನನಿತ್ಯ ತೊಡಗುವುದರಿಂದ ಅದೆಷ್ಟೋ ರೋಗಗಳಿಂದ ಮುಕ್ತಿ ಹೊಂದಬಹುದು. ಜೊತೆಗೆ ದೇಹದಲ್ಲಿ ರಕ್ತ ಸಂಚಾರ ಸುಲಲಿತಗೊಳ್ಳುತ್ತದೆ. ಮತ್ತು ಮನಸ್ಸಿಗೆ ಶಾಂತಿ, ನೆಮ್ಮದಿ ಸಿಗುತ್ತದೆ.
ಹೈ ಬಿಪಿ ನಿಯಂತ್ರಣ ಹೇಗೆ?:
ಬಿಪಿ ಇದ್ದವರು ಆದಷ್ಟು ವೈದ್ಯರ ಬಳಿ ಸಲಹೆ ಪಡೆದುಕೊಳ್ಳುವುದು ಉತ್ತಮ. ಆಹಾರದ ನಿಯಂತ್ರಣ ಮತ್ತು ಬಿಪಿ ನಿಯಂತ್ರಣಕ್ಕೆ ಬೇಕಾದ ಸಲಹೆಗಳನ್ನು ವೈದ್ಯರ ಬಳಿ ತೆಗೆದುಕೊಳ್ಳಿ. ಹೃದಯ ರಕ್ತನಾಳಗಳಿಗೆ ಸಂಬಂಧಿಸಿದಂತೆ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಟೊಮೆಟೋ ಸೇವನೆ ಉತ್ತಮ ಮಾರ್ಗ ಎಂಬುದನ್ನು ಅಧ್ಯಯನ ತಿಳಿಸಿದೆ. ಹೃದಯ ಬಡಿತ, ಹೃದಯದ ಒತ್ತಡದಂತಹ ಸಮಸ್ಯೆಗೆ ಪರಿಹಾರವಾಗಿ ಟೊಮೆಟೋ ಸೇವನೆ ಒಳಿತು. ಬಿಪಿ ಕಡಿಮೆ ಮಾಡಿಕೊಳ್ಳಲೂ ಸಹ ಟೊಮೆಟೋ ಉತ್ತಮ ಮಾರ್ಗ ಎಂಬುದು ಅಧ್ಯಯನದಿಂದ ತಿಳಿದು ಬಂದಿದೆ. ಆದರೂ ಅವರವರ ದೇಹ ಪ್ರಕೃತಿಯಿಂದ ಬಿಪಿ, ಹೈಟೆನ್ಶನ್ ಸಮಸ್ಯೆ ಉಂಟಾಗುವುದರಿಂದ ನೇರವಾಗಿ ವೈದ್ಯರನ್ನು ಭೇಟಿ ಮಾಡಿ ಸಲಹೆ ಪಡೆಯುವುದು ಉತ್ತಮ.