ಸೌತ್ಹ್ಯಾಂಪ್ಟನ್,ಜೂ.18: ಕ್ರಿಕೆಟ್ ಜಗತ್ತಿನ ಗಮನ ಸೆಳೆದಿರುವ ಹಾಗೂ ಕ್ರಿಕೆಟ್ ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸಿರುವ ಭಾರತ ಹಾಗೂ ನ್ಯೂಜಿ಼ಲೆಂಡ್ ನಡುವಿನ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಶುರುವಾಗಿದೆ.
ಸೌತ್ಹ್ಯಾಂಪ್ಟನ್ ರೋಸ್ ಬೌಲ್ ಕ್ರೀಡಾಂಗಣದಲ್ಲಿ ಜೂನ್ 18 ರಿಂದ 22ರವರೆಗೆ ಫೈನಲ್ ಪಂದ್ಯ ನಡೆಯಲಿದ್ದು, ಫೈನಲ್ ಪಂದ್ಯಕ್ಕೆ ಉಭಯ ತಂಡಗಳು ಭರ್ಜರಿ ತಯಾರಿ ನಡೆಸಿವೆ. ವಿರಾಟ್ ಕೊಹ್ಲಿ ನಾಯಕತ್ವದ ಟೀಂ ಇಂಡಿಯಾ ಆಟಗಾರರು ಫೈನಲ್ ಪಂದ್ಯದ ಗೆಲುವಿಗಾಗಿ ತಮ್ಮದೇ ತಂತ್ರ ರೂಪಿಸಿದ್ದರೆ. ಇತ್ತೀಚೆಗೆ ಇಂಗ್ಲೆಂಡ್ ವಿರುದ್ದ ನಡೆದ ಟೆಸ್ಟ್ ಸರಣಿ ಗೆದ್ದಿರುವ ನ್ಯೂಜಿ಼ಲೆಂಡ್ ಕೂಡ ಅತ್ಯಂತ ಉತ್ಸಾಹದಿಂದಲೇ ಕಣಕ್ಕಿಳಿಯುತ್ತಿದೆ.
ಪಂದ್ಯ ಆರಂಭಕ್ಕೂ ಮೊದಲೇ ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್ ಹೇಗಿರಲಿದೆ ಎಂಬ ಕುತೂಹಲಕ್ಕೆ ತೆರೆಬಿದ್ದಿದೆ. ಫೈನಲ್ ಪಂದ್ಯದಲ್ಲಿ ಕಣಕ್ಕಿಳಿಯುವ ಆಟಗಾರರು ಯಾರು ಎಂಬುದನ್ನ ಬಿಸಿಸಿಐ ಈಗಾಗಲೇ ತನ್ನ ಟ್ವಿಟರ್ ಖಾತೆಯಲ್ಲಿ ಪ್ರಕಟಿಸಿದೆ. ಇಬ್ಬರು ಸ್ಪಿನ್ನರ್ಸ್ ಹಾಗೂ ಮೂವರು ವೇಗಿಗಳೊಂದಿಗೆ ಕೊಹ್ಲಿ ಪಡೆ ಕಣಕ್ಕಿಳಿಯುತ್ತಿದ್ದು, ರವೀಂದ್ರ ಜಡೇಜಾ ಹಾಗೂ ಆರ್. ಅಶ್ವಿನ್ ಇಬ್ಬರು ಆಡುತ್ತಿರುವುದು ಸ್ಪಿನ್ ವಿಭಾಗದ ಬಲ ಹೆಚ್ಚಿಸಿದೆ.
ಇನ್ನೂ ಕೊಹ್ಲಿ ಪಡೆ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ಗೆ ನಡೆದುಬಂದ ಹಾದಿ ಗಮನಿಸಿದರೆ ಅತ್ಯಂತ ಬಲಿಷ್ಠ ತಂಡವಾಗಿ ಕಾಣಿಸುತ್ತಿದ್ದು, ಗೆಲ್ಲುವ ಫೆವರೆಟ್ ಎನಿಸಿದೆ. ಆದರೆ ಇತ್ತೀಚೆಗೆ ಇಂಗ್ಲೆಂಡ್ ಎದುರು ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು 1-0 ಅಂತರದಲ್ಲಿ ಗೆದ್ದು ಟೆಸ್ಟ್ ಶ್ರೇಯಾಂಕ ಪಟ್ಟಿಯಲ್ಲಿ ನಂ.1 ಸ್ಥಾನಕ್ಕೆ ಲಗ್ಗೆಯಿಟ್ಟಿರುವ ಕಿವೀಸ್, ಟೆಸ್ಟ್ ಚಾಂಪಿಯನ್ಪಿಪ್ ಗೆದ್ದು ಪ್ರಾಬಲ್ಯ ಮೆರೆಯುವ ಲೆಕ್ಕಾಚಾರದಲ್ಲಿದೆ.
ಭಾರತ ತಂಡ: ರೋಹಿತ್ ಶರ್ಮಾ, ಶುಭಮನ್ ಗಿಲ್, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ, ರಿಷಭ್ ಪಂತ್ (ವಿಕೆಟ್ಕೀಪರ್), ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಜಸ್ಪ್ರೀತ್ ಬುಮ್ರಾ, ಇಶಾಂತ್ ಶರ್ಮಾ, ಮೊಹಮ್ಮದ್ ಶಮಿ.
ನೇರ ಪ್ರಸಾರ: ಸೋನಿ ಸ್ಪೋರ್ಟ್ಸ್ ಪಂದ್ಯದ ಸಮಯ: ಮಧ್ಯಾಹ್ನ 3