ಪ್ರತಿದಿನ ಸ್ನಾನ(Bath) ಮಾಡಿದರೆ ಆರೋಗ್ಯಕ್ಕೆ ಒಳ್ಳೆಯದು. ದಿನ ನಿತ್ಯ ಸ್ನಾನ ಮಾಡುವುದರಿಂದ ಹೃದಯ ಸಂಬಂಧಿ ಕಾಯಿಲೆ ಬರುವುದಿಲ್ಲವಂತೆ. ಕೆಲವರು ದಿನದ ಮೂರು ಹೊತ್ತು ಸ್ನಾನ ಮಾಡುವವರಿದ್ದಾರೆ, ಅದರಲ್ಲೂ ಮನೆಯಲ್ಲಿಯೇ ಇರುವ ಗೃಹಿಣಿಯರು ದೇವರ ಮೇಲೆ ಅಪಾರ ಭಕ್ತಿ ಇರುವವರು ದಿನದಲ್ಲಿ ಮೂರು ಹೊತ್ತು ಸ್ನಾನ ಮಾಡುವ ಮೂಲಕ ಸ್ವಚ್ಛವಾಗಿರುತ್ತಾರೆ.

ಇನ್ನು ಕೆಲವರು ದಿನದಲ್ಲಿ ಎರಡು ಹೊತ್ತು ಸ್ನಾನ ಮಾಡುವವರೂ ಇದ್ದಾರೆ. ಹೆಚ್ಚಾಗಿ ಆಫೀಸಿಗೆ ತೆರಳುವವರು ದಿನದಲ್ಲಿ 2 ಹೊತ್ತು ಸ್ನಾನ ಮಾಡುತ್ತಾರೆ. ಒಟ್ಟಾರೆ ಬೆಳಗ್ಗೆ ಅಥವಾ ರಾತ್ರಿ ವೇಳೆ ಸ್ನಾನ ಮಾಡುವ ಮೂಲಕ ನಾವು ಸ್ಪಚ್ಛವಾಗಿರಲು ಪ್ರಯತ್ನಿಸುತ್ತೇವೆ. ಒಂದು ದಿನ ಸ್ನಾನ ಮಾಡದೇ ಇದ್ದರೆ ಏನೋ ಒಂಥರಾ ಕಸಿವಿಸಿ.
ಆದರೆ ಇಲ್ಲೊಬ್ಬ ವ್ಯಕ್ತಿ ಸ್ನಾನ ಮಾಡದೆ 60 ವರ್ಷಗಳು ಕಳೆದಿದೆಯಂತೆ! ಹಾಗಿದ್ದರೆ ಆ ವ್ಯಕ್ತಿ ಯಾರು? ಆತ ಸ್ನಾನ ಮಾಡದೇ ಇರಲು ನಿಜವಾದ ಕಾರಣವೇನು? ಈ ಬಗ್ಗೆ ಮಾಹಿತಿ ಇಲ್ಲಿದೆ. ಈ ವ್ಯಕ್ತಿಯ ಹೆಸರು ಅಮೌ ಹಾಜಿ. ಬರೋಬ್ಬರಿ 60 ವರ್ಷಗಳಿಂದ ಇವರು ಸ್ನಾನವೇ ಮಾಡಿಲ್ಲವಂತೆ. ಮೈ ಮೇಲೆ ನೀರು ಕೂಡ ಸುರಿದುಕೊಂಡದ್ದೇ ಇಲ್ಲ ಎಂದರೆ ನಂಬುತ್ತೀರಾ! ಈತ 60 ವರ್ಷಗಳಿಂದ ಏಕೆ ಸ್ನಾನ ಮಾಡಿಲ್ಲ ಎಂಬುದಕ್ಕೆ ನಿರ್ದಿಷ್ಟ ಕಾರಣವೊಂದಿದೆ.

ಅಮೌ ಹಾಜಿಗೆ ನೀರು ಎಂದರೆ ಭಯವಂತೆ. ಈ ಕಾರಣಕ್ಕೆ ಅವರು ಸ್ನಾನ ಮಾಡುವುದನ್ನೇ ಬಿಟ್ಟಿದ್ದಾರೆ. ಅಮೌ ಹಾಜಿ ಒಬ್ಬಂಟಿಯಾಗಿ ಜೀವನ ನಡೆಸುತ್ತಿದ್ದಾರೆ. ವರ್ಷಾನು ಗಟ್ಟಲೆ ಸ್ನಾನ ಮಾಡದೇ ಇದ್ದರೂ ಯಾವುದೇ ಖಾಯಿಲೆಗೆ ಒಳಗಾಗದೆ ಬದುಕುತ್ತಿರುವ ಅಮೌ ಹಾಜಿ ಕುರಿತು ಸಾಮಾಜಿಕ ಜಾಲತಾಣದಲ್ಲಿ ಭಾರೀ ಸುದ್ದಿಯಾಗುತ್ತಿದೆ.
ಪ್ರಸ್ತುತ 80 ವರ್ಷದ ಅಮೂ ಹಾಜಿ ಇರಾನಿನ ದಕ್ಷಿಣ ಪ್ರಾಂತ್ಯದಲ್ಲಿರುವ ದೇಜಗಾ ಗ್ರಾಮದಲ್ಲಿ ವಾಸಿಸುತ್ತಿದ್ದಾರೆ. ಇವರಿಗೆ ಕ್ಲೀನ್ ಆಗಿ ಇರುವುದೆಂದರೆ ಆಗುವುದಿಲ್ಲವಂತೆ. ಇವರ ಸಂಗ ಬಯಸುವುದಾದರೆ, ನೀವೂ ಮೊದಲು ಕೊಳಕು ಕೊಳಾಕಾಗಬೇಕಂತೆ! ಈತನಿಗೆ ತಾಜಾ ಆಹಾರವೂ ಅಪಥ್ಯವೇ. ಕೊಳೆತ ಮುಳ್ಳುಹಂದಿಯ ಮಾಂಸವೆಂದರೆ ಇ ವ್ಯಕ್ತಿಗೆ ಪಂಚಪ್ರಾಣ, ಇವನಿಗೆ ಸ್ಮೋಕಿಂಗ್ ಶೋಕಿಯೂ ಇದೆ. ಆದರೆ ಪ್ರಾಣಿಗಳ ದುರ್ನಾತ ಬೀರುವ ಮಲವನ್ನು ಪೈಪ್ ನಲ್ಲಿ ತುಂಬಿ, ಧಂ ಎಳೆಯುತ್ತಾನಂತೆ ಈ ವಿಚಿತ್ರ ಆಸಾಮಿ.

ಅದೆಲ್ಲಾ ಸರಿ, ಈ ಮನುಷ್ಯ ಹೀಗಾಗಲು ಕಾರಣವೇನು ಎಂದರೆ, ಚಿಕ್ಕವನಿದ್ದಾಗ ತನಗಾದ ಸಾಂಸಾರಿಕ ನೋವಿನಿಂದ ಹೀಗೆ ಬದಲಾಗಿದ್ದಾಗಿ ಹೇಳಿಕೊಳ್ಳುತ್ತಾನೆ. ಕಿಲುಬಿಡಿದ ತೈಲದ ಕ್ಯಾನಿನಲ್ಲಿ ತುಂಬಿಟ್ಟ ನೀರನ್ನು ಈತ ಕುಡಿಯುತ್ತಾನೆ. ತಲೆಗೂದಲು ಕತ್ತರಿಸಿಕೊಳ್ಳಬೇಕು ಎಂದರೆ ಬೆಂಕಿ ಗುಡ್ಡೆ ಹಾಕಿ ಅದರಲ್ಲಿ ತಲೆಗೂದಲನ್ನು ಸುಟ್ಟುಕೊಂಡು ಕೂದಲು ಸಣ್ಣ ಮಾಡಿಕೊಳ್ಳುತ್ತಾನಂತೆ!
- ಪವಿತ್ರ