ಮಹಿಳೆಯರಲ್ಲಿ ಉದ್ದನೆಯ ಕೂದಲು(Hair) ಸೌಂದರ್ಯವನ್ನು ಹೆಚ್ಚಿಸುವುದು. ಹೌದು, ಉದ್ದನೆಯ ಕೂದಲು ಮಹಿಳೆಯರ ಸೌಂದರ್ಯದ ಪ್ರತೀಕವೆನ್ನಬಹುದು. ಹಿಂದಿನ ಕಾಲದಲ್ಲಿ ಮಹಿಳೆಯರು ಉದ್ದನೆಯ ಕೂದಲು ಬೆಳೆಸಿಕೊಳ್ಳಲು ನಾನಾ ರೀತಿಯ ಪ್ರಯತ್ನ ಮಾಡುತ್ತಿದ್ದರು. ಆದರೆ ಇಂದಿನ ದಿನಗಳಲ್ಲಿ ಮಹಿಳೆಯರು, ಇರುವ ಕೂದಲಿಗೆ ಕತ್ತರಿ ಹಾಕುವುದೇ ಹೆಚ್ಚಾಗಿದೆ.

ಇದಕ್ಕೆ ವಿರುದ್ಧ ಎನ್ನುವಂತೆ, ಗಿಡ್ಡ ಕೂದಲು ಇಟ್ಟುಕೊಳ್ಳುತ್ತಿದ್ದ ಪುರುಷರು ಈಗ ಉದ್ದ ಕೂದಲು ಬಿಡಲು ಆರಂಭಿಸಿದ್ದಾರೆ. ಇದೊಂದು ಫ್ಯಾಷನ್ ಆಗಿಬಿಟ್ಟಿದೆ. ಆದರೆ ಪುರುಷರು ಉದ್ದ ಕೂದಲು ಬಿಡುವಾಗ ಅದರ ಆರೈಕೆ ಕೂಡ ಚೆನ್ನಾಗಿ ಮಾಡಿಕೊಳ್ಳಬೇಕು. ಇಲ್ಲವೆಂದಾದರೆ ಅವರು ಅಪಹಾಸ್ಯಕ್ಕೆ ಗುರಿಯಾಗಬೇಕಾಗುತ್ತದೆ.
ಆದರೆ ಇಲ್ಲೊಬ್ಬ ವ್ಯಕ್ತಿಯಿದ್ದಾನೆ. ವಿಯೇಟ್ನಾಂನ ಈ ವ್ಯಕ್ತಿ, ಸುಮಾರು 50 ವರ್ಷಗಳಿಂದಲೂ ಕಟಿಂಗ್ ಶಾಪ್‍ನತ್ತ ಮುಖವನ್ನೇ ಹಾಕಿರಲಿಲ್ಲವಂತೆ. ಇಷ್ಟಕ್ಕೂ, ಆ ಮಹಾಪುರುಷನ ಹೆಸರು ಟಾರ್ನ್ ವಾನ್ ಹಯ್ ಎಂದು. ಈತನ ಅತೀ ಉದ್ದದ ಕೂದಲನ್ನು ವಿಶ್ವವೇ ಬೆರಗುಗಣ್ಣಿನಿಂದ ನೋಡಿತ್ತು, ಅಲ್ಲದೇ ವಿಶ್ವದ ಅತೀ ಉದ್ದದ ಕೂದಲನ್ನು ಹೊಂದಿದ ವ್ಯಕ್ತಿ ಎಂಬ ಖ್ಯಾತಿಗೂ ಕೂಡ ಈತ ಪಾತ್ರನಾಗಿದ್ದಾನೆ.

67 ವರ್ಷದ ಟ್ರಾನ್ ವಾನ್ ಹಯ್‍ನ ಕೂದಲಿನ ಉದ್ದ ಸರಿಸುಮಾರು 20 ಫೀಟ್. ಈತನ ಕೂದಲನ್ನು ಬಿಡಿಸಿ ತೆಗೆದು ಅಳತೆ ಮಾಡಿದರೆ ಸುಮಾರು 10.5 ಕಿಲೋ ಮೀಟರ್ ಉದ್ದವಿದೆ ಎಂದರೆ ಎಂಥವರೂ ಅಚ್ಚರಿಗೊಳಗಾಗುವುದು ಖಂಡಿತ. ಟ್ರಾನ್ ವಾನ್ ಹಯ್ ಸುಮಾರು 12 ವರ್ಷಗಳ ಹಿಂದೆ ವಯೋಸಹಜ ಕಾರಣಗಳಿಂದ ಸಾವನ್ನಪ್ಪಿದ.
ಆಗ ಆತನ ಕೂದಲಿಗೆ ಕತ್ತರಿ ಪ್ರಯೋಗ ಮಾಡುವಂತೆ ಕೆಲವರು ಸಲಹೆ ನೀಡಿದ್ದರಂತೆ. ಆದರೆ, ಈತ ಬಹಳ ಇಷ್ಟಪಟ್ಟಿದ್ದ ಕೂದಲನ್ನು ಯಾವುದೇ ಕಾರಣಕ್ಕೂ ಕತ್ತರಿಸಬಾರದು ಎಂದು ಕುಟುಂಬಸ್ಥರು ಆತನನ್ನು ಕೂದಲಿನ ಸಮೇತವಾಗಿಯೇ ಹೂಳಿದ್ದಾರಂತೆ.
- ಪವಿತ್ರ