ಅಸಮಾನತೆಯ ಹುಚ್ಚು ಕುದುರೆಯನ್ನು ಕೋಮುವಾದದ ಹೆಂಡ ಕುಡಿದ ಜಾಕಿ ಓಡಿಸುತ್ತಿದ್ದಾನೆ. ಈ ಬೆಳವಣಿಗೆ ದೇಶಕ್ಕೆ ಅತ್ಯಂತ ಅಪಾಯಕಾರಿ ಎಂದು ಲೇಖಕ ದೇವನೂರ ಮಹಾದೇವ ಟೀಕಿಸಿದ್ದಾರೆ. ಮೈಸೂರಿನಲ್ಲಿ ನಡೆದ ‘ಸಮಾನತೆಗಾಗಿ ಓಟ’ಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನಾನು ಹಾಲಿ ಕೋಚ್ನಂತೆ ಮತ್ತು ಮಾಜಿ ಆಟಗಾರನಂತೆ ಉಡುಪು ಧರಿಸಿ ಓಟಕ್ಕೆ ಚಾಲನೆ ನೀಡಿದ್ದೇನೆ. ಕ್ಷಮೆ ಇರಲಿ. ನಾನು ಎಂದಿಗೂ ಓಡಿದವನಲ್ಲ.
ಸದ್ಯ ನಿಮ್ಮೊಡನೆ ಅಥವಾ ನಿಮ್ಮ ಹಿಂದೆ ಓಡುವ ಚೈತನ್ಯ ನನಗಿಲ್ಲ. ಆದರೆ ಸಮಾನತೆಗಾಗಿ ಓಡಲು ಸಜ್ಜಾಗಿರುವ ನಿಮ್ಮಂತ ಎಳೆಯರ ಬೆನ್ನುತಟ್ಟಲು ಇಲ್ಲಿಗೆ ಬಂದಿದ್ದೇನೆ ಎಂದರು. ಇನ್ನು ನನ್ನ ಯುವ ಸ್ನೇಹಿತರು ತುಂಬಾ ವೇಗವಾಗಿ ಓಡಬೇಕಿದೆ. ಏಕೆಂದರೆ ಅಸಮಾನತೆಯ ಹುಚ್ಚು ಕುದುರೆಯನ್ನು ಕೋಮುವಾದದ ಜಾಕಿ ಓಡಿಸುತ್ತಿದ್ದಾನೆ. ನೀವು ಅದರಿಂದ ಕಚ್ಚಿಸಿಕೊಳ್ಳದೇ ಓಡಬೇಕಿದೆ. ನೀವು ಯುವಕರಾಗಿದ್ದೀರಿ, ಹೀಗಾಗಿ ಗೆಲ್ಲುತ್ತೀರಿ ಎಂಬ ನಂಬಿಕೆ ನನಗಿದೆ. ಆದರೆ ನಿಮ್ಮ ಪ್ರಯತ್ನವನ್ನು ಮಾತ್ರ ಬಿಡಬೇಡಿ ಎಂದು ನುಡಿದರು.
ಇನ್ನು ಚಿಂತಕ ಮತ್ತು ಹೋರಾಟಗಾರ ಯೋಗೇಂದ್ರ ಯಾದವ್ ಇತ್ತೀಚೆಗೆ ಮೈಸೂರಿಗೆ ಬಂದಿದ್ದಾಗ ಒಂದು ಮಾತು ಹೇಳಿದ್ದರು. ಪ್ರಧಾನಿ ನರೇಂದ್ರ ಮೋದಿಯವರ ಬಾಯಲ್ಲಿ ‘ಸೀತಾ’ ಪತಿ ಅಂದರೆ ರಾಮ, ಹೃದಯದಲ್ಲಿ ‘ನೀತಾ’ ಅಂದರೆ ಅಂಬಾನಿ ಇದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ಹೃದಯದಲ್ಲಿರುವ ಮುಖೇಶ್ ಅಂಬಾನಿ ಇಂದು ಲಕ್ಷಾಂತರ ಕೋಟಿ ರೂಪಾಯಿಗಳ ಒಡೆಯ.
ಭಾರತದಲ್ಲಿ ಇಂತ ಕೆಲವೇ ಕುಟುಂಬಗಳ ಸಂಪತ್ತನ್ನು ಸೇರಿಸಿದರೆ ದೇಶದ ಅರ್ಧ ಸಂಪತ್ತಿಗೆ ಸಮನಾಗಿದೆ. ದೇಶದಲ್ಲಿ ತೀವ್ರ ಮಟ್ಟದಲ್ಲಿ ಅಸಮಾನತೆ ಸೃಷ್ಟಿಯಾಗಿದೆ. ಪ್ರತಿದಿನವೂ ಬಡವರ ಸಂಖ್ಯೆ ಹೆಚ್ಚುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.