ಮೈಸೂರು, ಜ. 13: ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದ ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಸಚಿವ ಸ್ಥಾನ ಕೈತಪ್ಪಿದ ವಿಚಾರ ತಿಳಿಯುತ್ತಿದ್ದಂತೆಯೇ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಮೈಸೂರಿನ ತಮ್ಮ ನಿವಾಸದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಬುಧವಾರ ಮಾತನಾಡಿದ ಅವರು, ಯಡಿಯೂರಪ್ಪ ನಾಲಿಗೆಯನ್ನು ಕಳೆದುಕೊಂಡಿದ್ದಾರೆ. ಮಾತನ್ನೂ ಕಳೆದುಕೊಂಡಿದ್ದಾರೆ. ಅವರು ನೆನೆಸಿಕೊಳ‍್ಳಬೇಕು ಯಾವ ಸಂದರ್ಭದಲ್ಲಿ ನಾನು ಮುಖ್ಯಮಂತ್ರಿ ಆದೆ ಎಂದು. ಅವರು ಮುಖ್ಯಮಂತ್ರಿ ಆದ ಸಂದರ್ಭ ಯಾವ ರೀತಿ ಇತ್ತು:? ಯಾರು ಸಹಾಯ ಮಾಡಿದರು ಎಂಬುದು ನೆನಸಿಕೊಳ್ಳಬೇಕಿತ್ತು. ನನಗೆ ಎಲ್ಲೋ ಒಂದು ಕಡೆ ನೋವಾಗುತ್ತೆ. 17 ಜನರ ತ್ಯಾಗ, ಭಿಕ್ಷೆ, ಮರ್ಜಿ ಯಲ್ಲಿ ನೀವು ಇದ್ದೀರಿ. ಇದನ್ನು ಜ್ಞಾಪಕ ಮಾಡಿಕೊಳ್ಳದೆ ಹೋದರೆ ಸಿದ್ದಲಿಂಗೇಶ್ವರನೂ ನಿಮಗೆ ಒಳ‍್ಳೆಯದು ಮಾಡೋದಿಲ್ಲ ಎಂದು ಆಕ್ರೋಶ ಹೊರ ಹಾಕಿದ್ದಾರೆ.
ಎಲ್ಲ ಹುಸಿಯಾಗಿ ಹೋಯಿತು. ಯಾವ ನಾಯಕರುಗಳಿಗೂ ಕೃತಜ್ಞತೆ ಎಂಬುದು ಇಲ್ಲ. ಸಿದ್ದರಾಮಯ್ಯ ಅವರನ್ನು ಎಲ್ಲರ ವಿರೋಧದ ನಡುವೆ ಕಾಂಗ್ರೆಸ್ ಪಕ್ಷಕ್ಕೆ ಕರೆತಂದೆ. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರು ವಿರೋಧ ಪಕ್ಷದ ನಾಯಕ, ಮುಖ್ಯಮಂತ್ರಿ ಆಗುವವರೆಗೆ ಕಣ್ಗಾವಲಾಗಿದ್ದೆ. ಒಂದು ದಿನ ಕೂಡ ಅವರು ವಿಶ‍್ವನಾಥ್ ಹಾಗೂ ಉಳಿದೆಲ್ಲ ಸ್ನೇಹಿತರು ನನ್ನನ್ನು ಕಾಂಗ್ರೆಸ್ ಪಕ್ಷಕ್ಕೆ ಕರೆ ತಂದು ಮುಖ್ಯಮಂತ್ರಿ ಮಾಡಿದರು ಎಂದು ಹೇಳಿಲ್ಲ. ಯಡಿಯೂರಪ್ಪ ಅವರಿಗೋಸ್ಕರ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ತ್ಯಾಗ ಮಾಡಿದೆವು. ಅವರು ಹಾಗೂ ಅವರ ಮಗ ಎಲ್ಲೂ ಕೂಡ ನೆನೆಸಿಕೊಳ‍್ಳಲಿಲ್ಲ. ನಾಯಕರುಗಳಲ್ಲಿ ಕೃತಜ್ಞತೆ ಎಂಬುದು ಇಲ್ಲವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.